ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರಾಜೇಗೌಡ ಜಯಗಳಿಸಿರುವಾಗ ಪರಾಭವಗೊಂಡ ಜೀವರಾಜ್‌ ಹೆಸರನ್ನು ಉಲ್ಲೇಖಿಸಿ ಅನುದಾನ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ 

ವಿಧಾನಸಭೆ(ಡಿ.28): ಚುನಾವಣೆಯಲ್ಲಿ ಸೋಲನುಭವಿಸಿದ ಅಭ್ಯರ್ಥಿ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಕೆಟ್ಟಸಂಪ್ರದಾಯ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ಮಂಗಳವಾರ ಸದನದಲ್ಲಿ ಕಾಂಗ್ರೆಸ್‌ ಸದಸ್ಯ ರಾಜೇಗೌಡ ಮಂಡಿಸಿದ ಹಕ್ಕುಚ್ಯುತಿ ವಿಚಾರ ಸಂಬಂಧ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರಾಜೇಗೌಡ ಜಯಗಳಿಸಿರುವಾಗ ಪರಾಭವಗೊಂಡ ಜೀವರಾಜ್‌ ಹೆಸರನ್ನು ಉಲ್ಲೇಖಿಸಿ ಅನುದಾನ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಸೋಲನುಭವಿಸಿದ ಅಭ್ಯರ್ಥಿ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಕೆಟ್ಟಸಂಪ್ರದಾಯ. ಅದು ಯಾವುದೇ ಪಕ್ಷದ ಅಭ್ಯರ್ಥಿಯಾದರೂ, ಆ ರೀತಿ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸೋತವರು ಬಂದು ಬಜೆಟ್‌ ಪಾಸ್‌ ಮಾಡಿಕೊಡುತ್ತಾರಾ? ಬಜೆಟ್‌ಗೆ ಅನುಮೋದನೆ ನೀಡುತ್ತಾರಾ? ಸೋತವರ ಹೆಸರಲ್ಲಿ ಅನುದಾನ ನೀಡಿ ಜನರ ಜತೆ ಹೋಗಿ ಕೆಲಸ ಮಾಡಿ ಎಂದು ಹೇಳುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ’ ಎಂದು ಸರ್ಕಾರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಚರ್ಮಗಂಟಿಗೆ ಒಂದೇ ತಿಂಗಳಲ್ಲಿ 10,305 ರಾಸುಗಳ ಸಾವು: ಸಿದ್ದು

‘ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿಯ ನಡವಳಿಕೆಗೆ ಅವಕಾಶವಿಲ್ಲ. ಪ್ರತಿಪಕ್ಷಗಳ ಬಹುತೇಕ ಎಲ್ಲಾ ಸದಸ್ಯರಿಗೆ ಇದೇ ರೀತಿ ಅನ್ಯಾಯವಾಗುತ್ತಿದೆ. ಇಂತಹ ಕೆಟ್ಟಸಂಪ್ರದಾಯವು ಇಲ್ಲಿಗೆ ಕೊನೆಯಾಗಬೇಕು’ ಎಂದು ಆಗ್ರಹಿಸಿದರು.