ಬೆಂಗಳೂರು, (ಸೆ.7):   ಪ್ರಸ್ತುತ ರಾಜ್ಯದಲ್ಲಿ ಕೊರೋನಾ, ಪ್ರವಾಹ, ಡಿಜೆಹಳ್ಳಿ ಗಲಭೆ ಹಾಗೂ ಡ್ರಗ್ಸ್  ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿಢೀರ್ ಸಭೆ ಕರೆದಿದ್ದಾರೆ.

ಇಂದು (ಸೋಮವಾರ) ಸಂಜೆ 6 ಗಂಟೆಗೆ ಸಿಎಂ ಬಿಎಸ್‌ವೈ ಸಚಿವರ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದ್ದು, ಎಲ್ಲಾ ಸಚಿವರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ದಿಢೀರ್‌ ಸಭೆ ಕರೆದಿದ್ಯಾಕೆ ಎನ್ನುವ ಕುತೂಹಲಕ್ಕೂ ಕಾರಣವಾಗಿದೆ. 

ಕರ್ನಾಟಕದ ರಾಜಕಾರಣ ಬಿಸಿ ಏರಲು ಕಾರಣವಾದ ಸುದ್ದಿ ದೆಹಲಿಯಿಂದ ಬಂತು!

ಸಭೆಯಲ್ಲಿ ಏನೆಲ್ಲಾ ಚರ್ಚೆಗಳು?
ಕೋವಿಡ್ ನಿಯಂತ್ರಣ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ, ಮುಂದೆ ನಡೆಯಲಿರುವ ವಿಧಾನಸಭಾ ಅಧಿವೇಶನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಯಡಿಯೂರಪ್ಪ ಚರ್ಚೆ ನಡೆಸುವ ಸಾಧ್ಯತೆ ಇದೆ. 

ಇನ್ನು ಸೆ. 21ರಿಂದ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿದ್ದು,  ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿವಿಧ ಇಲಾಖೆಗಳ ವಿಚಾರಗಳನ್ನು ಪ್ರಸ್ತಾಪಿಸಲಿವೆ. ಆದ್ದರಿಂದ, ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.

ಸಂಪುಟ ವಿಸ್ತರಣೆಯಾಗುತ್ತಾ?
ಹೌದು.. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಮತ್ತೊಂದೆಡೆ ಅಧಿವೇಶನಕ್ಕೆ ಸಚಿವರಾಗಿ ಬರುತ್ತೇವೆ ಎಂದು ಈಗಾಗಲೇ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿದ್ದಾರೆ.

ಇದರ ಬೆನ್ನಲ್ಲೇ ಗಂಟೆಗೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಭೆ ಕರೆದಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.