ವಿಧಾನಸಭೆ ವಿರೋಧಪಕ್ಷದ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಆ.3 ರಂದು ಹಮ್ಮಿಕೊಂಡಿರುವ ಜನ್ಮದಿನ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಲು ಬೆಣ್ಣೆ ನಗರಿ ದಾವಣಗೆರೆ ಸರ್ವ ರೀತಿಯಲ್ಲೂ ಸಜ್ಜಾಗಿದೆ.
ಬೆಂಗಳೂರು/ದಾವಣಗೆರೆ (ಆ.02): ವಿಧಾನಸಭೆ ವಿರೋಧಪಕ್ಷದ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಆ.3 ರಂದು ಹಮ್ಮಿಕೊಂಡಿರುವ ಜನ್ಮದಿನ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಲು ಬೆಣ್ಣೆ ನಗರಿ ದಾವಣಗೆರೆ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಕ್ತಿ ಪ್ರದರ್ಶನ, ಬಲವರ್ಧನೆಗೆ ವೇದಿಕೆಯಂತೆ ಬಿಂಬಿತವಾಗಿರುವ ಬಹು ಚರ್ಚಿತ ಕಾರ್ಯಕ್ರಮಕ್ಕೆ ಬರೋಬ್ಬರಿ 7-8 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ತನ್ಮೂಲಕ ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ‘ದೇವನಗರಿ’ ವೇದಿಕೆಯಾಗುತ್ತಿದೆ.
ಖುದ್ದು ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರ ಸಮ್ಮುಖದಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅವರ ಜನ್ಮದಿನ ಕಾರ್ಯಕ್ರಮ ರಾಜ್ಯದ ಮಟ್ಟಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬದಲಾಗಿದೆ. ರಾಜಕೀಯವಾಗಿಯೂ ತೀವ್ರ ಕುತೂಹಲ ಕೆರಳಿಸಿರುವ ಕಾರ್ಯಕ್ರಮಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ದಾವಣಗೆರೆಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ 50 ಎಕರೆ ವಿಸ್ತೀರ್ಣದ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ಸಿದ್ದರಾಮೋತ್ಸವಕ್ಕೆ ಬಾದಾಮಿಯಿಂದ 25 ಸಾವಿರ ಜನ, 600 ವಾಹನಗಳು ಬುಕ್
ರಾಹುಲ್ ಆಗಮನ: ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್‌ಗಾಂಧಿ ಅವರು ಆ.2 ರಂದೇ ರಾಜ್ಯಕ್ಕೆ ಆಗಮಿಸಲಿದ್ದು, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಆ.3 ರಂದು ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಬೆಂಗಳೂರು, ದಾವಣಗೆರೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ನಾಯಕರು ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಸಭೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿದ್ಧತೆ ನಡೆಸಿದ್ದಾರೆ.
3 ಬೃಹತ್ ವೇದಿಕೆ ಸಜ್ಜು: 100 ಮಂದಿ ಅತಿ ಗಣ್ಯರು ಕುಳಿತುಕೊಳ್ಳಬಹುದಾದ 200/100 ಅಡಿ ಅಳತೆಯ ಮುಖ್ಯ ವೇದಿಕೆ ಜತೆಗೆ ಗಣ್ಯರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಎರಡು ಪ್ರತ್ಯೇಕ ವೇದಿಕೆಗಳ ವ್ಯವಸ್ಥೆ ಮಾಡಲಾಗಿದೆ. ಎರಡು ವಾರದಿಂದ ವಿಶಾಲ ವೇದಿಕೆಗೆ ವಾಟರ್ ಪ್ರೂಫ್ ಪೆಂಡಾಲ್ ವ್ಯವಸ್ಥೆ ಮಾಡಿದ್ದು, ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಎಷ್ಟೇ ಜೋರು ಮಳೆಯಾದರೂ ವೇದಿಕೆ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
6-8 ಲಕ್ಷ ಜನ ಭಾಗವಹಿಸುವ ನಿರೀಕ್ಷೆ: ಮೂಲಗಳ ಪ್ರಕಾರ ಕಾರ್ಯಕ್ರಮದಲ್ಲಿ 7-8 ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ. ಹೀಗಾಗಿ 3.5 ಲಕ್ಷ ಕುರ್ಚಿಗಳ ವ್ಯವಸ್ಥೆ ಮಾಡಿದ್ದು, ಹಿಂದೆ ನಿಂತವರಿಗೂ ಕಾಣಲು ಅನುವಾಗುವಂತೆ ಸದ್ಯಕ್ಕೆ 33 ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವವರಿಗೆ ಈಗಾಗಲೇ ಹಾವೇರಿ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ 38 ಸಾವಿರಕ್ಕೂ ಹೆಚ್ಚು ಕೊಠಡಿಗಳು ಬುಕ್ ಆಗಿವೆ.
ಭರ್ಜರಿ ಊಟದ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವವರಿಗೆ 6 ಲಕ್ಷ ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತಿದೆ. ಉಳಿದಂತೆ ಪಲಾವ್, ಮೊಸರನ್ನ ಉಣಬಡಿಸಲು 2,500 ಅಡುಗೆ ಕೆಲಸಗಾರರು ಕೆಲಸದಲ್ಲಿ ತೊಡಗಿದ್ದಾರೆ. ಊಟ ವಿತರಣೆಗೆ ಸಮಸ್ಯೆಯಾಗದಂತೆ ತಲಾ 300-400 ಕೌಂಟರ್‌ಗಳಂತೆ ಮೂರು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗೆ ಪ್ರತ್ಯೇಕ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಎಲ್ಲೆಲ್ಲೂ ಸಿದ್ದು ಹವಾ: ರಾಜ್ಯಾದ್ಯಂತ ಜನ್ಮದಿನ ಹವಾ ಜೋರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿರುಚಿತ್ರ, ರೀಲ್ಸ್ ಹರಿದಾಡುತ್ತಿವೆ. ಕಾರು, ಬೈಕುಗಳಲ್ಲಿ ಸ್ಟಿಕ್ಕರ್‌ಗಳು ಅಂಟಿಸಿಕೊಳ್ಳುವುದು ಸೇರಿದಂತೆ ಅಭಿಮಾನಿಗಳು ತಮಗೆ ತೋಚಿದ ರೀತಿಯಲ್ಲಿ ಅಭಿಮಾನ ತೋರುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ’ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ, ಕರುನಾಡಿನ ಜನತೆಯಿಂದ ಇದು ಖಾಯಂ’ ಎಂಬ ಆಲ್ಬಂ ಸಾಂಗ್‌ನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಬೆಂಗಳೂರಿನ ಅಧಿಕೃತ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದ ಅಭಿಮಾನಿಯೊಬ್ಬ 16 ಗ್ರಾಂ ಚಿನ್ನದಲ್ಲಿ ‘ಸಿಎಂ ಸಿದ್ದರಾಮಯ್ಯ ಬಾಸ್’ ಎಂದು ಬರೆಸಿರುವ ಉಡುಗೊರೆ ನೀಡಿದರು.
ಎಲ್ಲೆಡೆ ‘ಸಿಎಂ ಫ್ಲೆಕ್ಸ್‘: ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸದ ಮುಂದೆಯಂತೂ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇನ್ನು ದಾವಣಗೆರೆ ಜಿಲ್ಲಾ ಕೇಂದ್ರ, ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ, ಜಗಳೂರು ಸೇರಿದಂತೆ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಸಿದ್ದರಾಮಯ್ಯ ಮಿಂಚುತ್ತಿರುವ ಫ್ಲೆಕ್ಸ್‌ಗಳು ತುಂಬಿ ತುಳುಕುತ್ತಿವೆ.
ಜನಸಾಗರಕ್ಕೆ ಸಿದ್ಧತೆ
* 8 ಲಕ್ಷ ಕಾರ್ಯಕ್ರಮಕ್ಕೆ ಅಭಿಮಾನಿಗಳು ಆಗಮಿಸುವ ನಿರೀಕ್ಷೆ
* 8000 ಅಭಿಮಾನಿಗಳ ಕರೆತರಲು ಬುಕ್ ಮಾಡಲಾದ ಬಸ್‌ಗಳು
* 30000 ರಾಜ್ಯದ ವಿವಿಧ ಭಾಗಗಳಿಂಗ ಆಗಮಿಸುವ ವಾಹನಗಳು
* 38000 ಅಭಿಮಾನಿಗಳಿಗೆ ವಿವಿಧ ಜಿಲ್ಲೆಯಲ್ಲಿ ಕಾಯ್ದಿರಿಸಿದ ರೂಂ
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 75 ಕಿ.ಲೋ ಮೀಟರ್ ಪಾದಯಾತ್ರೆ ಹೊರಟ ಸಿದ್ದು ಅಭಿಮಾನಿಗಳು
ಬೃಹತ್ ವೇದಿಕೆಗಳು
* 50 ಎಕರೆ ಕಾರ‍್ಯಕ್ರಮ ನಡೆವ ಶಾಮನೂರು ಪ್ಯಾಲೇಸ್ ಗ್ರೌಂಡ್ ವಿಸ್ತೀರ್ಣ
* 3 ವೇದಿಕೆ ಕಾರ್ಯಕ್ರಮ ಸ್ಥಳದಲ್ಲಿ 3 ವಾಟರ್ ಪ್ರೂಫ್ ವೇದಿಕೆ ನಿರ್ಮಾಣ
* 33 ಪರದೆ ಬೃಹತ್ ಕಾರ್ಯಕ್ರಮ ವೀಕ್ಷಿಸಲು 33 ಎಲ್‌ಇಡಿ ಪರದೆ ವ್ಯವಸ್ಥೆ
* 3.5 ಲಕ್ಷ ವೇದಿಕೆ ಸ್ಥಳದಲ್ಲಿ ಅಭಿಮಾನಿಗಳಿಗೆ ಹಾಕಲಾದ ಆಸನಗಳು
