Asianet Suvarna News Asianet Suvarna News

Rajya Sabha Election: ಕಾಂಗ್ರೆಸ್ಸಿಗರ ಮೇಲೆ ಸಿದ್ದು, ಡಿಕೆಶಿ ಕಣ್ಣು

*   ಅಡ್ಡಮತದಾನ ಭೀತಿ: ಕೊನೆವರೆಗೂ ಮತ ಹಾಕದೆ ಕಾಯ್ದ ಇಬ್ಬರೂ ನಾಯಕರು
*  ಮತಗಟ್ಟೆ ಏಜೆಂಟಾದ ಡಿಕೆಶಿ
*  ಸಿದ್ದು, ಡಿಕೆಶಿ ಭೇಟಿ ಮಾಡಿಯೇ ಶಾಸಕರ ಮತ
 

Siddaramaiah and DK Shivakumar Eye on Congress Leaders During Rajya Sabha Voting grg
Author
Bengaluru, First Published Jun 11, 2022, 6:36 AM IST

ಬೆಂಗಳೂರು(ಜೂ.11): ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇ ಸ್ಥಾನದ ಅಭ್ಯರ್ಥಿಗೆ ಅಡ್ಡ ಮತದಾನ ಆಗುವ ಭೀತಿಯಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೊನೆಯವರೆಗೂ ಮತದಾನ ಮಾಡದೆ ಪ್ರತಿಯೊಬ್ಬ ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟು ಮತದಾನ ಮಾಡುವುದನ್ನು ಖಾತ್ರಿಪಡಿಸಿಕೊಂಡರು.

ಬೆಳಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆ ಶುರುವಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಕಾಂಗ್ರೆಸ್‌ನ ಮತಗಟ್ಟೆಏಜೆಂಟರಾಗಿ ಕಾರ್ಯನಿರ್ವಹಿಸಿದರು. ಬಳಿಕ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕುಳಿತು ಪ್ರತಿಯೊಬ್ಬ ಶಾಸಕರೂ ಬಂದು ಪಕ್ಷದ ಅಭ್ಯರ್ಥಿಗೆ ಮತ ಹಾಕಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಅಂತಿಮ ಕ್ಷಣದವರೆಗೂ ಒಗ್ಗಟ್ಟಾಗಿಯೇ ಚುನಾವಣೆಯನ್ನು ನಿರ್ವಹಣೆ ಮಾಡಿದರು.

ಚಡ್ಡಿ ಸುಡ್ತೀನಿ ಅಂದರೆ ಎಲೆಕ್ಷನ್‌ನಲ್ಲಿ ಜನ ವಾಸನೆ ತೋರಿಸ್ತಾರೆ: ಸಿದ್ದು ವಿರುದ್ಧ ರಿಷಿಕುಮಾರ ಶ್ರೀ ವಾಗ್ದಾಳಿ

ಮಧ್ಯಾಹ್ನ 1 ಗಂಟೆಯಾದರೂ ಮತದಾನಕ್ಕೆ ಆಗಮಿಸದ ಶಾಮನೂರು ಶಿವಶಂಕರಪ್ಪ, ಸತೀಶ್‌ ಜಾರಕಿಹೊಳಿ, ಗಣೇಶ್‌ ಹುಕ್ಕೇರಿ ಅವರು ಬರುವವರೆಗೂ ಕಾದು ಎಲ್ಲರೂ ಮತದಾನ ಮಾಡಿದ ಬಳಿಕ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಮತದಾನ ಮಾಡಿದರು.

ಗಣೇಶ್‌ ಹುಕ್ಕೇರಿ ಅವರ ಬಗ್ಗೆ ಅನುಮಾನ ಇದ್ದ ಕಾರಣ ಕುಣಿಗಲ್‌ ಶಾಸಕ ರಂಗನಾಥ್‌ ಅವರನ್ನು ಕಳುಹಿಸಿ ಗಣೇಶ್‌ ಹುಕ್ಕೇರಿ ಅವರನ್ನು ಕರೆದುಕೊಂಡು ಬರಲಾಯಿತು. ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರೂ ಮೊದಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಗೆ ತೆರಳಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ ಬಳಿಕವೇ ಮತದಾನ ಮಾಡಿದರು. ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ ಅವರೂ ಸಿಎಲ್‌ಪಿ ಕಚೇರಿಗೆ ಭೇಟಿ ನೀಡಿದ ಬಳಿಕವೇ ಮತದಾನ ಮಾಡಿದರು.

ಗೌರವಕ್ಕೆ ಮತ: ಶರತ್‌ ಬಚ್ಚೇಗೌಡ

ಬೆಂಗಳೂರು: ನಾನು ಗುಪ್ತ ಮತದಾನವನ್ನು ಮಾಡಿದ್ದೇನೆ. ನಾನು ಯಾರಿಗೂ ಮತ ತೋರಿಸಿಲ್ಲ. ಮೂರು ತಲೆಮಾರಿನ ರಾಜಕಾರಣ ನಮ್ಮದು. ನಮ್ಮ ತಾಲೂಕಿನ ಜನರಿಗೆ ಯಾರಿಂದ ಘನತೆ ಗೌರವ ಸಿಗುತ್ತದೆಯೋ ಅವರಿಗೆ ಮತದಾನ ಮಾಡಿ ಬಂದಿದ್ದೇನೆ ಎಂದು ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ಆರ್‌ಎಸ್‌ಎಸ್‌ಗೆ ದಲಿತರನ್ನೇಕೆ ಮುಖ್ಯಸ್ಥರನ್ನಾಗಿ ಮಾಡಿಲ್ಲ: ಸಿದ್ದರಾಮಯ್ಯ

ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಶಾಸಕ ಗೌರಿಶಂಕರ್‌ ಮತದಾನ ಮಾಡಿದರು. ವಿದೇಶ ಪ್ರವಾಸದಲ್ಲಿದ್ದ ಗೌರಿಶಂಕರ್‌ ಮತದಾನಕ್ಕೆ ಗೈರಾಗುತ್ತಾರೆಂಬ ಅನುಮಾನವಿತ್ತು. ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಅವರು ಮತದಾನದಲ್ಲಿ ಭಾಗವಹಿಸಿದ್ದರು.

ಸಿದ್ದರಾಮಯ್ಯ ಕಚೇರಿಗೆ ಸಿ.ಟಿ. ರವಿ ಭೇಟಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಚೇರಿಗೆ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅದೇ ಕೊಠಡಿಗೆ ಹೋಗಿ ಅಭ್ಯಾಸ, ಅದಕ್ಕೆ ಹೋಗಿದ್ದೆ. ಆಮೇಲೆ ನೆನಪಾಗಿ ವಾಪಸು ಬಂದೆ. ಎರಡು ಅಭ್ಯರ್ಥಿಗಳು ಮೆರಿಟ್‌ ಮೇಲೆ, ಇನ್ನಿಬ್ಬರು ಅಭ್ಯರ್ಥಿಗಳು ಅದೃಷ್ಟದ ಮೇಲೆ ಗೆಲ್ಲಲಿದ್ದಾರೆ ಎಂದರು.

Follow Us:
Download App:
  • android
  • ios