* ವಿಧಾನಸಭೆಯಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ-ಯಡಿಯೂರಪ್ಪ ವಾಗ್ವಾದ* ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಬಗ್ಗೆ ಕಲಾಪದಲ್ಲಿ ಚರ್ಚೆ* ಬಿಜೆಪಿ ಅಧಿಕಾರಕ್ಕೆ ಬಂದ್ರೂ ನೀವು ಸಿಎಂ ಆಗಲ್ಲ ಎಂದ ಸಿದ್ದು
ಬೆಂಗಳೂರು, (ಮಾ.11): ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಕರ್ನಾಟಕ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ. ಅಲ್ಲಿನ ಕಾರ್ಯತಂತ್ರಗಳನ್ನೇ ಕರ್ನಾಟಕದಲ್ಲೂ ಸಹ ಮುಂದುವರೆಸಲು ಬಿಜೆಪಿ ಪ್ಲಾನ್ ಮಾಡಿದೆ.
ಇನ್ನು ಈ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಬಗ್ಗೆ ಇಂದು (ಶುಕ್ರವಾರ) ವಿಧಾನಸಭೆಯಲ್ಲಿ ಸ್ವಾರಸ್ಯಕರ, ಬಿಸಿಬಿಸಿ ಚರ್ಚೆಯಾಗಿದೆ.
ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಮಾಡುತ್ತೇವೆ: ಬಿಎಸ್ ಯಡಿಯೂರಪ್ಪ
ಹೌದು... ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಿಎಂ ಆಗುವ ಬಗ್ಗೆ ಮಾತಿಗೆ ತಿರುಗೇಟು ನೀಡಿದರು. ಅಲ್ಲದೇ ಅಧಿಕಾರಕ್ಕೆ ಬರುವ ಬಿಜೆಪಿ, ಯಡಿಯೂರಪ್ಪನರ ಕನಸು ನನಸಾಗಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಬಿಎಸ್‌ವೈ-ಸಿದ್ದು ಮಾತಿನ ಹೇಗಿತ್ತು ಎನ್ನುವುದು ಈ ಕೆಳಗಿನಂತಿದೆ ನೋಡಿ
ಮೊದಲಿಗೆ ಕಲಾಪದಲ್ಲಿ ಮಾತು ಆರಂಭಿಸಿದ ಯಡಿಯೂರಪ್ಪ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿರೋಧ ಪಕ್ಷದವರು ಭ್ರಮೆಯಿಂದ ಹೇಳುತ್ತಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ, ನಮ್ಮ ರಾಜ್ಯದಲ್ಲಿ ಕೂಡ ಬಿಜೆಪಿ ಪರ ಜನರ ಒಲವು ಇದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕನಿಷ್ಠ 130-135 ಸೀಟು ಗೆದ್ದು ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಸಾಮೂಹಿಕವಾಗಿ ನಾವು ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.
ಅಲ್ಲದೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಇದಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್ ಗೆ ನಾಯಕತ್ವವೇ ಇಲ್ಲ ಎಂಬ ಪರಿಸ್ಥಿತಿಯಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮತ್ತು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. ಇದು ಸಿದ್ದರಾಮಯ್ಯನವರನ್ನು ಕೆರಳಿಸಿದೆ.
ಬಳಿಕ ಎದ್ದು ನಿಂತು ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಬಿಜೆಪಿ ವರಿಷ್ಠರು ಅನಗತ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಬೊಮ್ಮಾಯಿಯವರನ್ನು ಕೂರಿಸಿದರು. ಈ ನಿರ್ಧಾರ, ಬೆಳವಣಿಗೆ ಬಿಜೆಪಿಯಲ್ಲಿ ಬೇಕಾಗಿರಲಿಲ್ಲ. ಇಂದು ಯಡಿಯೂರಪ್ಪನವರು ಬಹಳ ನೋವಿನಿಂದ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಭಾವಿಸಿದ್ದೇನೆ ಎಂದು ವ್ಯಂಗ್ಯವಾಡಿದರು.
ಅವರು ರಾಜೀನಾಮೆ ನೀಡಿದಾಗ ಕಣ್ಣೀರು ಹಾಕಿದರು. ಕಣ್ಣೀರು ಸುಮ್ಮನೆ ಬರುತ್ತದೆಯೇ, ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು 2018ರಲ್ಲಿ ಕೂಡ ಯಡಿಯೂರಪ್ಪ ಹೇಳಿದ್ದರು. 150 ಸೀಟು ಗೆಲ್ಲಿಸುತ್ತೇನೆ ಎಂದಿದ್ದರು. ಆದರೆ 2018ರಲ್ಲಿ ರಾಜ್ಯದ ಜನರು ಆಶೀರ್ವಾದ ಕೊಡಲಿಲ್ಲ ಎಂದು ತಿರುಗೇಟು ನೀಡಿದರು.
ವಾಜಪೇಯಿಯವರು ಇಂಡಿಯಾ ಈಸ್ ಶೈನಿಂಗ್ ಎಂದು ಹೇಳಿದ್ದರು. ಆದರೆ ಅವರಿಗೆ ಎರಡನೇ ಸಾರಿ ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಾಗಲಿಲ್ಲ. ಈಗ ನೀವು 130 ಸೀಟುಗಳನ್ನು ಗೆಲ್ಲುವ ಭ್ರಮೆಯಲ್ಲಿದ್ದೀರಿ, ನೀವು ಜನರ ಬಳಿ ಇತ್ತೀಚೆಗೆ ಹೋಗಿಲ್ಲ ಎಂದು ಕಾಣುತ್ತದೆ. ನಿಮ್ಮ ಸರ್ಕಾರ ಬಂದ ಮೇಲೆ ಅನೇಕ ಚುನಾವಣೆಗಳಾಗಿವೆ, ಅದರಲ್ಲಿ ನಿಮ್ಮ ಪರಿಸ್ಥಿತಿಯೇನು, ಕಾಂಗ್ರೆಸ್ ಮೊದಲ ಸ್ಥಾನದಲ್ಲಿ, ಬಿಜೆಪಿ ಎರಡನೇ ಸ್ಥಾನದಲ್ಲಿದೆ, ರಾಜ್ಯದ ಜನತೆ ನಿಮ್ಮನ್ನು ಹೊರಗೆ ಹಾಕಬೇಕೆಂದು ತೀರ್ಮಾನ ಮಾಡಿದ್ದಾರೆ. ಅಧಿಕಾರಕ್ಕೆ ಬರುವ ಬಿಜೆಪಿ, ಯಡಿಯೂರಪ್ಪನರ ಕನಸು ನನಸಾಗಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು.
