ಕರ್ನಾಟಕ ಹೈಕೋರ್ಟ್ ರಾಜ್ಯದಲ್ಲಿ ಎಸಿಬಿಯನ್ನು ರದ್ದುಗೊಳಿಸಿದ್ದು, ಲೋಕಾಯುಕ್ತಕ್ಕೆ ಶಕ್ತಿ ತುಂಬುವಂತೆ ಆದೇಶಿಸಿದೆ. ಇನ್ನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ
ಚಿಕ್ಕಬಳ್ಳಾಪುರ. (ಆಗಸ್ಟ್.12): ಸಿದ್ದರಾಮಯ್ಯನವರ ಸರ್ಕಾರದ ಸಂದರ್ಭದಲ್ಲಿ ರಚಿಸಿದ್ದ ಎಸಿಬಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪಿಸಲು ತಿಳಿಸಿದೆ.
ಎಸಿಬಿಯ ಎಲ್ಲ ಕೇಸ್ ಲೋಕಾಯುಕ್ತಕ್ಕೆ ನೀಡಲು ನ್ಯಾ. ಬಿ. ವೀರಪ್ಪ ನೇತೃತ್ವದಲ್ಲಿ ವಿಭಾಗೀಯ ಪೀಠ ಇಂದು (ಗುರುವಾರ) ಮಹತ್ವದ ಆದೇಶಿಸಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ...
ಬೊಮ್ಮಾಯಿ ಹೇಳಿದ್ದಿಷ್ಟು
ಹೈಕೋರ್ಟ್ ಎಸಿಬಿ ವಜಾ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನನಗೆ ಈಗ ತಾನೇ ಮಾಹಿತಿ ಬಂದಿದೆ. ನಾನು ಬೆಂಗಳೂರಿಗೆ ಹೋದ ನಂತರ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡ್ತೀನಿ. ಜಡ್ಜ್‌ಮೆಂಟ್ ವಿವರ ನೋಡದೇ ಏನು ಹೇಳುವುದಕ್ಕೆ ಆಗಲ್ಲ. ಬೆಂಗಳೂರಿಗೆ ಹೋಗುವವರೆಗೆ ಅವಕಾಶ ನೀಡಿ ಆ ಮೇಲೆ ಹೇಳ್ತೀನಿ ಎಂದು ಹೇಳಿದರು.
Breaking ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಪುರದಲ್ಲಿ ಪ್ರತಿಕ್ರಿಯಿಸಿದ್ದು, ಎಸಿವಿ ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಇದೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಗೌರವಿಸಬೇಕು. ಆದೇಶ ಯಾವ ರೀತಿ ಬಂದಿದೆ ಎಂದು ನಾನು ನೋಡಿಲ್ಲ, ನೋಡಿದ ಬಳಿಕ ಪ್ರತಿಕ್ರಿಯಿಸುವೆ ಎಂದು ಸ್ಪಷ್ಟಪಡಿಸಿದರು.
2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಬಿಜೆಪಿಯ ಭಾರೀ ವಿರೋಧದ ನಡುವೆಯೂ ಲೋಕಾಯುಕ್ತವನ್ನು ಬಲಹೀನ ಮಾಡಿ ಎಸಿಬಿ ರಚನೆ ಮಾಡಿದ್ದರು, ಇದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಇನ್ನು ಬಿಜೆಪಿ ಲೋಕಾಯುಕ್ತ ಮರುಜಾರಿಗೆ ತರುವುದಾಗಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಳಿತ್ತು.
ಕೋರ್ಟ್ ಹೇಳಿದ್ದೇನು?
ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪಿಸಲು ತಿಳಿಸಿದ್ದು. ಎಸಿಬಿಯ ಎಲ್ಲ ಕೇಸ್ ಲೋಕಾಯುಕ್ತಕ್ಕೆ ನೀಡಲು ನ್ಯಾ. ಬಿ. ವೀರಪ್ಪ ನೇತೃತ್ವದಲ್ಲಿ ವಿಭಾಗೀಯ ಪೀಠ,ಮಹತ್ವದ ಆದೇಶಿಸಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು. ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
2016ರ ಮಾ.14ರಂದು ಕಾಂಗ್ರೆಸ್ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಸಿಬಿ ರಚಿಸಿ ಆದೇಶ ಹೊರಡಿಸಿತ್ತು. ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿದ್ದ ಅಧಿಸೂಚನೆಯನ್ನು 2016ರ ಮಾ.19ರಂದು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣದ ಕುರಿತು ತೀರ್ಪು ಪ್ರಕಟಿಸಿದ ಹೈಕೋರ್ಟ್, ಎಸಿಬಿ ರಚನೆಯಲ್ಲೇ ರದ್ದು ಮಾಡಿದೆ.
