ಮಹಿಳಾ ಮೀಸಲಾತಿಯು ಒಂದು ಚರಿತ್ರಾರ್ಹ ನಿರ್ಣಯವಾಗಿದ್ದು, ಮಹಿಳೆಯರ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬೆಂಗಳೂರು (ಏ.14): ಮಹಿಳಾ ಮೀಸಲಾತಿಯು ಒಂದು ಚರಿತ್ರಾರ್ಹ ನಿರ್ಣಯವಾಗಿದ್ದು, ಮಹಿಳೆಯರ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದ ಪುರಭವನದಲ್ಲಿ ನಾರಿ ಶಕ್ತಿ ಫೋರಂ ವತಿಯಿಂದ ‘ನಾರಿ ಶಕ್ತಿ ವಂದನೆ ಅಧಿನಿಯಮ -2026’ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೈಕ್ಷಣಿಕ, ಆರ್ಥಿಕ, ರಕ್ಷಣಾ ಕ್ಷೇತ್ರ ಸೇರಿ ಎಲ್ಲೆಡೆ ಮಹಿಳೆಯರಿಗೆ ಅವಕಾಶಗಳನ್ನು ನೀಡಿದ್ದಾರೆ. ಇದೀಗ ರಾಜಕೀಯವಾಗಿ ಅವಕಾಶ ನೀಡುತ್ತಿದ್ದಾರೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಲವಾರು ಮಹಿಳೆಯರು ರಾಜ್ಯ ಹಾಗೂ ದೇಶದ ಆಡಳಿತದ ನೇತೃತ್ವ ವಹಿಸಿ ಯಶಸ್ವಿಯಾಗಿದ್ದಾರೆ. ಮೀಸಲಾತಿಯಿಂದ ಬಹಳಷ್ಟು ಮಹಿಳೆಯರಿಗೆ ಅವಕಾಶ ಸಿಗಲಿದೆ. ನಾರಿ ಶಕ್ತಿ ವಂದನೆ ಅಧಿನಿಯಮ ಕೇವಲ ನಮ್ಮನ್ನು ಕುರ್ಚಿಯಲ್ಲಿ ಕೂರಿಸಲು ಅಲ್ಲ. ದೇಶ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅವರು ಜವಾಬ್ದಾರಿ ನೀಡುತ್ತಿದ್ದಾರೆ. 2047ರಲ್ಲಿ ವಿಕಸಿತ ಭಾರತದ ಸಾಧನೆಗೆ ದೇಶದ 140 ಕೋಟಿ ಜನರ ಪಾಲ್ಗೊಳ್ಳುವಿಕೆ ಅಗತ್ಯ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ನೆನಪಿಸಿದರು. ಕ್ಯಾನ್ಸರ್ ಚಿಕಿತ್ಸಾ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ, ಸಮಾಜ ಸೇವಕಿ ಡಾ. ಸುಶೀಲಮ್ಮ, ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್, ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ, ಲೇಖಕಿ ಸೀನು ಜೋಸೆಫ್, ನಟಿ ಮಾಳವಿಕ ಅವಿನಾಶ್, ವಕೀಲೆ ಸಿ. ಮಂಜುಳ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರಿಗೂ ಸಾಮಾಜಿಕ ನ್ಯಾಯ ಬೇಕು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಭಾರತವು 2047ನೇ ಇಸವಿಗೆ ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತನೆ ಹೊಂದಲು ದೇಶದಲ್ಲಿ ಶೇ.50ಕ್ಕಿಂತ ಹೆಚ್ಚಿರುವ ಮಹಿಳೆಯರಿಗೂ ಸಾಮಾಜಿಕ ನ್ಯಾಯ ಕೊಡಬೇಕು. ದೇಶದ ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ನೀಡುವ ಸದುದ್ದೇಶದೊಂದಿಗೆ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ ಎಂದು ಹೇಳಿದರು.

ಗ್ರಾಮೀಣ ಕ್ಷೇತ್ರದಲ್ಲಿ ಹೆಣ್ಣು ಮಗುವನ್ನು ಶಾಪ ಎಂಬಂತೆ ನೋಡಲಾಗುತ್ತಿತ್ತು. ಅದು ಶಾಪವಲ್ಲ, ಭಾಗ್ಯಲಕ್ಷ್ಮಿ ಎಂದು ತಿಳಿಸಿ ವಿಶೇಷ ಯೋಜನೆ ತಂದವರು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು. ಮೂಲಭೂತ ಸೌಕರ್ಯವಿಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ಯೋಜನೆ ಜಾರಿಗೊಳಿಸಿ ಸ್ವಾಭಿಮಾನ ಹೆಚ್ಚಿಸುವ ಕೆಲಸ ಮಾಡಿದರು. ಗ್ರಾಮೀಣ ಹೆಣ್ಣುಮಕ್ಕಳು ಸ್ವಾಭಿಮಾನಿ ಬದುಕನ್ನು ಕಾಣುವಂತಾಗಲು ಹೈನುಗಾರಿಕೆಗೆ ಪ್ರೋತ್ಸಾಹವನ್ನೂ ನೀಡಿದರು ಎಂದು ಯಡಿಯೂರಪ್ಪ ಅವರ ಕಾರ್ಯಗಳನ್ನು ಸ್ಮರಿಸಿದರು.