ಬೆಂಗಳೂರು (ನ.30):  ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದ ತೀರ್ಥಹಳ್ಳಿಯ 66 ವರ್ಷದ ಟಿ.ಡಿ.ಆರ್‌ ಹರಿಶ್ಚಂದ್ರಗೌಡ ಎಂಬುವವರು ಅರ್ಜಿ ಹಾಕಿದ್ದಾರೆ. ತಮ್ಮನ್ನು 2021ರ ಜೂನ್‌ 19ರವರೆಗೆ ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

‘ನಾನು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್‌ (ಐ) ಸಂಸ್ಥಾಪಕರಲ್ಲಿ ಒಬ್ಬ. ನನಗೆ ಮುಂದೊಂದು ದಿನ ಎಐಸಿಸಿ ಅಧ್ಯಕ್ಷ ಆಗುತ್ತೀರಿ ಎಂದು ಇಂದಿರಾಗಾಂಧಿ ಅವರು ಹೇಳಿದ್ದರು. ಹೀಗಾಗಿ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದು, ‘2021ರ ಜೂನ್‌ 19 ರವರೆಗೆ ತಾತ್ಕಾಲಿಕವಾಗಿ ಎಐಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಿ. ಜೂ.19ರಂದು ರಾಹುಲ್‌ಗಾಂಧಿ ಅವರ ಜನ್ಮ ದಿನದ ಪ್ರಯುಕ್ತ ಅವರನ್ನು ಎಐಸಿಸಿಯ ಕಾಯಂ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಲಾಗುವುದು. ಅಲ್ಲಿಯವರೆಗೂ ನೆಹರೂ ಕುಟುಂಬಕ್ಕೆ ನಂಬಿಕಸ್ಥನಾಗಿರುವ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ’ ಎಂದು ಕೇಳಿದ್ದೇನೆ’ ಎಂದು ಹೇಳಿದರು.

ಅಲ್ಲದೆ, ‘ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ಗಾಂಧಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲು ಯೋಚನೆ ಮಾಡಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು 1972 ರಿಂದ 75ರವರೆಗೆ ಡಾ. ಶಂಕರ್‌ ದಯಾಳ್‌ ಶರ್ಮಾ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

 ಅದೇ ರೀತಿ 1977-79ರಲ್ಲಿ ಜನತಾ ಪಕ್ಷ ಅಧಿಕಾರ ಕಳೆದುಕೊಳ್ಳಲು ಪಾತ್ರವಹಿಸಿದ ನನ್ನನ್ನು ಅಧ್ಯಕ್ಷನಾಗಿ ಮಾಡುವಂತೆ ಫೆಬ್ರುವರಿ 29ರಂದು ಪತ್ರ ಬರೆದಿದ್ದೇನೆ. ಪತ್ರ ಸ್ವೀಕರಿಸಿರುವ ಬಗ್ಗೆ ಎಐಸಿಸಿ ವತಿಯಿಂದಲೂ ಹಿಂಬರಹ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.