ಬಿಜೆಪಿಗೆ ಬಿಸಿತುಪ್ಪ ಆಗುವರೇ ಆಯನೂರು ಮಂಜುನಾಥ್? : ಪಕ್ಷೇತರವಾಗಿ ಸ್ಪರ್ಧೆ ಖಚಿತ
- ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್. ಈಶ್ವರಪ್ಪ ಸಿಡಿದೆದ್ದ ಆಯನೂರು ಮಂಜುನಾಥ್
- ಬಂಡಾಯ ಬಾವುಟ ಹಾರಿಸಲು ವಿಪ ಸದಸ್ಯ ತೆರೆಮರೆಯಲ್ಲಿ ಸಿದ್ಧತೆ
-ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಮಾಡುವುದಕ್ಕೆ ನಿರ್ಧಾರ
ವರದಿ- ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ (ಮಾ.21): ವಯಸ್ಸಿನ ಕಾರಣದಿಂದ ಟಿಕೆಟ್ ಸಿಗುತ್ತದೆಯೋ ಇಲ್ಲವೊ ಎಂದು ಉಂಟಾಗಿದ್ದ ಗೊಂದಲ ಪರಿಹಾರಗೊಂಡು ಬಹುತೇಕ ಟಿಕೆಟ್ ನಿಕ್ಕಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿರಾಳದಿಂದ ಇದ್ದರು. ಆದರೆ, ಇದಕ್ಕೂ ಮೊದಲೇ ಬಿಜೆಪಿಯ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಬಿಸಿತುಪ್ಪವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳ ನಿಚ್ಚಳವಾಗಿದೆ.
ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗುವ ಮೂಲಕ ಅಪರೂಪದ ಸಾಧನೆ ಮಾಡಿರುವ ಆಯನೂರು ಮಂಜುನಾಥ್ ತಮಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಬೇಕೇಬೇಕು ಎಂಬ ಹಠಕ್ಕೆ ಬಿದ್ದಿರುವುದು ಪಕ್ಷಕ್ಕೂ ಉಭಯ ಸಂಕಟವನ್ನು ತಂದಿಟ್ಟಿದೆ.
ದೇಶದ್ರೋಹಿ SDPI_PFI ಜತೆ ಕಾಂಗ್ರೆಸ್ ನಂಟಿದೆ: ಕೆಎಸ್ ಈಶ್ವರಪ್ಪ ಆರೋಪ
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಆರಂಭದಲ್ಲಿ ಆಯನೂರು ಮಂಜುನಾಥ್ ಹೆಸರು ಇರಲಿಲ್ಲ. ಆದರೆ 20-25 ದಿನಗಳಿಂದ ಏಕಾಏಕಿ ಇವರು ತಮ್ಮ ಹಕ್ಕು ಮತ್ತು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಸಧ್ಯಕ್ಕೆ ಫ್ಲೆಕ್ಸ್ ಮೂಲಕ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿರುವ ಆಯನೂರು ಮಂಜುನಾಥ್ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡ ಪ್ರಕಾರ, ವಿಧಾನ ಪರಿಷತ್ತು ಸದಸ್ಯನಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಕೂಡ ಸರಿಯಾದ ಗೌರವ ಮತ್ತು ಸಿಗಬೇಕಾದ್ದು ಸಿಗುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಲಾಗುತ್ತಿದೆ. ನನ್ನ ನಂಬಿದವರಿಗೆ ನ್ಯಾಯ ಒದಗಿಸಲಾಗುತ್ತಿಲ್ಲ. ಅರ್ಹ ಫಲಾನುಭವಿಗಳಿಗೂ ಸೌಲಭ್ಯ ಕೊಡಿಸಲಾಗುತ್ತಿಲ್ಲ. ಇಷ್ಟುವರ್ಷ ಪಕ್ಷದಲ್ಲಿ ಕೆಲಸ ಮಾಡಿದರೂ ಪಕ್ಷದ ಒಳಗೂ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಬೇಸರ ಹೊರ ಹಾಕಿದ್ದಾರೆ.
ಅಧಿಕಾರವಿಲ್ಲದೇ ಜೀವನಪೂರ್ತಿ ದುಡಿಯಬೇಕಾ?: ಇಷ್ಟುವರ್ಷ ಈಶ್ವರಪ್ಪ ಅವರು ಶಾಸಕರಾಗಿದ್ದು ಸಾಕು. ಇನ್ನು ಬೇರೆಯವರಿಗೆ ಬಿಟ್ಟುಕೊಡಲಿ. ನಾನು ಸೇರಿದಂತೆ ನಗರದಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಆದರೆ ಇವರನ್ನೆಲ್ಲಾ ಬಿಟ್ಟು ಈಶ್ವರಪ್ಪ ಅವರು ನನಗೆ ಟಿಕೆಟ್ ಸಿಗದಿದ್ದರೆ ಮಗನಿಗೆ ಕೊಡಿ ಎಂದು ಪಕ್ಷ ವರಿಷ್ಠರಲ್ಲಿ ಕೇಳಿದ್ದೇನೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಹಾಗಾದರೆ, ಪಕ್ಷಕ್ಕಾಗಿ ಇಷ್ಟುವರ್ಷ ದುಡಿದವರು ತಮ್ಮ ಜೀವನಪೂರ್ತಿ ಹೀಗೆಯೇ ಇರಬೇಕಾ ಎಂದು ಪ್ರಶ್ನಿಸುತ್ತಾರೆ.
ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಖಚಿತ: ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಅವರು ಈಗಾಗಲೇ ತಮ್ಮ ರಾಜಕೀಯ ಗುರುಗಳೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ ಯಡಿಯೂರಪ್ಪ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸಂಸದ ರಾಘವೇಂದ್ರ ಕೂಡ ಯಾವುದೇ ಮಾತನ್ನು ಆಡುತ್ತಿಲ್ಲ. ಇದರಿಂದ ತೀವ್ರ ನಿರಾಶೆಗೆ ಒಳಗಾಗಿರುವ ಆಯನೂರು ಮಂಜುನಾಥ್ ತಮ್ಮದೇ ಆದ ದಾರಿ ಕಂಡುಕೊಳ್ಳಲು ನಿರ್ಧರಿಸಿದಂತೆ ಕಂಡುಬರುತ್ತಿದೆ. ತಮಗೆ ಪಕ್ಷದ ಟಿಕೆಟ್ ಬೇಕೇ ಬೇಕು ಎಂಬ ಮಾಹಿತಿಯನ್ನು ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ರವಾನಿಸಿರುವ ಅವರು ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಜಾನ್ ಕೂಗಿನಿಂದ ಆಗುವ ಸಮಸ್ಯೆಗಳ ಬಹಿರಂಗಕ್ಕೆ ಹಿಂಜರಿಯಲ್ಲ: ಕೆಎಸ್ ಈಶ್ವರಪ್ಪ
ಬೇರೆ ಪಕ್ಷದಿಂದಲೂ ಆಹ್ವಾನ?: ಬಿಜೆಪಿಯಲ್ಲಿ ಆಯನೂರು ಮಂಜುನಾಥ್ ಬಿಸಿ ಮುಟ್ಟಿಸಿರುವಂತೆಯೇ ಬೇರೆ ಪಕ್ಷದ ಕಣ್ಣು ಇವರ ಮೇಲೆ ಬಿದ್ದಂತೆ ಕಾಣುತ್ತಿದೆ. ನೇರಾನೇರಾ ಯಾರೂ ಇದರ ಬಗ್ಗೆ ಚರ್ಚೆ ಮಾಡದಿದ್ದರೂ ಒಳಗೊಳಗೇ ಗುಸುಗುಸು ಸುದ್ದಿ ಶುರುವಾಗಿದೆ. ಕಾಂಗ್ರೆಸ್, ಜೆಡಿಎಸ್ ಕಡೆ ಹೋಗುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದ್ದಂತೆ ಇದನ್ನು ಆಯನೂರು ನಿರಾಕರಿಸಿದ್ದಾರೆ. ತಾವು ಬಿಜೆಪಿಯ ಟಿಕೆಟ್ ಕೇಳಿದ್ದು. ಬೇರೆ ಪಕ್ಷದ್ದಲ್ಲ. ನಾನು ಬೇರೆ ಯಾರನ್ನೂ ಸಂಪರ್ಕಿಸಿಲ್ಲ. ನನ್ನನ್ನೂ ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಲಿಂಗಾಯತ ಮತಗಳನ್ನು ಗಳಿಸುವುದು ಸುಲಭ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ ಮತಗಳು ನಿರ್ಣಾಯಕವಾಗಿರುವ ಹೊತ್ತಿನಲ್ಲಿಯೇ ಅದೇ ಸಮುದಾಯಕ್ಕೆ ಸೇರಿರುವ ಆಯನೂರು ಮಂಜುನಾಥ್ ರೆಬೆಲ್ ಆಗಿರುವುದು ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಸಿದೆ. 2013 ರ ಫಲಿತಾಂಶ ಮತ್ತೆ ಮತ್ತೆ ಬಿಜೆಪಿಗರ ಕನಸಿನಲ್ಲಿ ಬರುವಂತಾಗಿದೆ. ಪಕ್ಷದ ಮತಗಳು ಒಡೆದರೆ ಮೂರನೇ ವ್ಯಕ್ತಿಗೆ ಲಾಭವಾಗಬಹುದು ಎಂಬ ಆತಂಕ ಒಳಗೊಳಗೇ ಎದ್ದಿದೆ. ಆದರೆ ಇದುವರೆಗೆ ಪಕ್ಷದಿಂದ ಈ ಕುರಿತು ಯಾವುದೇ ರೀತಿಯ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ದಿನಕ್ಕೆ ನಾಲ್ಕೈದು ಬಾರಿ ಕೂಗಿದ್ರೆ ಸಾರ್ವಜನಿಕರಿಗೆ ಕಿರಿಕಿರಿ: ಅಜಾನ್ ಬಗ್ಗೆ ಮತ್ತೆ ಹೇಳಿಕೆ ನೀಡಿದ ಈಶ್ವರಪ್ಪ!
ವಿಜಯ ಸಂಕಲ್ಪ ಯಾತ್ರೆಗೆ ಗೈರು: ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಮುನಿಸಿಕೊಂಡಿರುವ ಆಯನೂರು ಮಂಜುನಾಥ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕಾರಿಪುರದ ಉಡುತಡಿ ಕಾರ್ಯಕ್ರಮಕ್ಕೆ ಬಂದಾಗ ಗೈರುಹಾಜರಾದರು. ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗಿಯಾಗಿದ್ದ ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಗೂ ಗೈರುಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು.