ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಶಿಂಧೆ ಬಣದ 20 ಶಾಸಕರಿಗೆ ನೀಡಲಾಗಿದ್ದ ವೈ ಶ್ರೇಣಿಯ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಕ್ರಮವು ಶಿಂಧೆ ಮತ್ತು ಫಡ್ನವೀಸ್‌ ನಡುವಿನ ಬಿರುಕನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಫಡ್ನವೀಸ್‌ ಈ ಕ್ರಮವನ್ನು ಭದ್ರತಾ ಪರಿಶೀಲನಾ ಸಮಿತಿಯ ಶಿಫಾರಸು ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಫಡ್ನವೀಸ್‌ ಮತ್ತು ಡಿಸಿಎಂ ಏಕನಾಥ್‌ ಶಿಂಧೆ ನಡುವೆ ಬಿರುಕು ಮೂಡಿರುವ ಹೊತ್ತಿನಲ್ಲೇ, ಶಿಂಧೆ ಬಣದ ಶಿವಸೇನೆಯ 20 ಶಾಸಕರಿಗೆ ನೀಡಲಾಗಿದ್ದ ವೈ ಶ್ರೇಣಿಯ ಭದ್ರತೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಇದು ಮುಂಬರುವ ದಿನಗಳಲ್ಲಿ ಎರಡೂ ಪಕ್ಷಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ದೊಡ್ಡ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಗೃಹ ಸಚಿವಾಲಯವು ಬಿಜೆಪಿ, ಎನ್‌ಸಿಪಿ, ಶಿವಸೇನೆಯ ಹಲವು ಶಾಸಕರ ಭದ್ರತೆ ಕಡಿತಗೊಳಿಸಿದ್ದರೂ ಅದರಲ್ಲಿ ಶಿವಸೇನೆಯವರೇ ಅಧಿಕವಿದ್ದಾರೆ. ಇದು ಶಿಂಧೆ ಬಣದ ಆಕ್ರೋಶಕ್ಕೆ ಕಾರಣವಾಗಿದೆ. 2022ರಲ್ಲಿ ಶಿಂಧೆ ಶಿವಸೇನೆಯಿಂದ ಬಂಡಾಯವೆದ್ದು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾಗ ಸರ್ಕಾರದಿಂದ ಪಕ್ಷದ 44 ಶಾಸಕರು ಹಾಗೂ 11 ಲೋಕಸಭಾ ಸದಸ್ಯರಿಗೆ ವೈ ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಇದೀಗ ಅದನ್ನು ಕಡಿತ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ದೇವೆಂದ್ರ ಫಡ್ನವೀಸ್‌, ‘ಕಾಲಕಾಲಕ್ಕೆ ನಡೆಯುವ ಭದ್ರತಾ ಪರಿಶೀಲನಾ ಸಮಿತಿಯ ಶಿಫಾರಸಿನನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಿರುಕು ಹೊಸತಲ್ಲ:

ಮೊದಲಿಗೆ ಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಶಿಂಧೆ ಗರಂ ಆಗಿದ್ದರು, ಬಳಿಕ ಸೂಕ್ತ ಖಾತೆ ನೀಡದೇ ಹೋಗಿದ್ದು ಅವರ ಅಸಮಾಧಾನ ಇನ್ನಷ್ಟು ಹೆಚ್ಚಿಸಿತ್ತು. ಹೀಗಾಗಿ ಇತ್ತೀಚೆಗೆ ನಡೆದ ಎರಡು ಸಚಿವ ಸಂಪುಟ ಸಭೆಗೆ ಶಿಂಧೆ ಗೈರಾಗಿದ್ದರು. ಜೊತೆಗೆ ರಾಯ್‌ಗಢ, ನಾಸಿಕ್‌ಗೆ ಉಸ್ತುವಾರಿ ನೇಮಿಸುವ ಬಗ್ಗೆಯೂ ಶಿಂಧೆ ಹಾಗೂ ಅಜಿತ್‌ ಪವಾರ್‌ ನಡುವೆ ವೈಮನಸ್ಯ ಉಂಟಾಗಿತ್ತು.