ಬೆಂಗಳೂರು(ಸೆ. 30): ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಕಾಂಗ್ರೆಸ್‌ ತೊರೆದಿದ್ದ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರಿಗೆ ಕೊನೆಗೂ ಉಪ ಚುನಾವಣೆಯ ಅಗ್ನಿಪರೀಕ್ಷೆ ಎದುರಾಗಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ಗೆ ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆ ಅಖಾಡ ಪ್ರತಿಷ್ಠೆಯಾಗಿದೆ. ಜೆಡಿಎಸ್‌ ಸಹ ಇಲ್ಲಿ ಪೈಪೋಟಿ ನೀಡಲು ಮುಂದಾಗಿದೆ.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಮುನಿರತ್ನ, 2019ರ ಜುಲೈನಲ್ಲಿ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸರ್ಕಾರ ರಚನೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುನಿರತ್ನ ಅವರಿಗೆ ಟಿಕೆಟ್‌ ನೀಡುವ ಬಹುತೇಕ ಖಚಿತವಾಗಿದೆ. ಮುನಿರತ್ನಗೆ ತಕ್ಕಪಾಠ ಕಲಿಸಲು ಕಾಂಗ್ರೆಸ್‌ ರಾಜಕೀಯ ರಣತಂತ್ರ ರೂಪಿಸಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ತೊಡಗಿದೆ.

ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ ಡಿ.ಕೆ.ರವಿ ಪತ್ನಿ?:

ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾಗಿ ದಿವಂಗತ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಪತ್ನಿ ಮತ್ತು ಕಾಂಗ್ರೆಸ್‌ ನಾಯಕ ಹನುಮಂತರಾಯಪ್ಪ ಪುತ್ರಿ ಎಚ್‌.ಕುಸುಮಾ ಅವರನ್ನು ಅಖಾಡಕ್ಕಿಳಿಸಲು ಸಿದ್ಧತೆ ನಡೆಸಿದೆ. ಬೆಂಗಳೂರು ಉತ್ತರ ತಾಲೂಕು ಅಧ್ಯಕ್ಷ ರಾಜ್‌ಕುಮಾರ್‌ ಮತ್ತು ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡ ರಾಮಚಂದ್ರ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಇದಲ್ಲದೆ, ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಸಹ ಟಿಕೆಟ್‌ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಒಕ್ಕಲಿಗ ಸಮುದಾಯದವರು ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಹೆಚ್ಚಿದ್ದು, ನಿರ್ಣಾಯಕರಾಗಿದ್ದಾರೆ. ಕಳೆದ ಎರಡು ಬಾರಿ ಮುನಿರತ್ನ ಗೆಲುವು ಸಾಧಿಸಿರುವುದು ಇದೇ ಸಮುದಾಯದ ಬೆಂಬಲದಿಂದ. ಆದರೆ, ಈ ಬಾರಿ ಕಾಂಗ್ರೆಸ್‌ ತೊರೆದಿರುವ ಹಿನ್ನೆಲೆಯಲ್ಲಿ ಮುನಿರತ್ನ ಗೆಲುವು ಅಷ್ಟೊಂದು ಸುಲಭವಾಗಿರುವುದಿಲ್ಲ. ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗಂಭೀರವಾಗಿ ಚಿಂತನೆ ನಡೆಸಿದೆ. ಇದು ಕಾಂಗ್ರೆಸ್‌ ಪಾಲಿಗೆ ವರದಾನವಾಗುವ ಸಾಧ್ಯತೆ ಇದೆ. ಜೆಡಿಎಸ್‌ ಸಹ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್‌ ನೀಡುವ ಆಲೋಚನೆಯಲ್ಲಿದ್ದು, ಒಕ್ಕಲಿಗ ಸಮುದಾಯದ ಮತಗಳು ವಿಭಜನೆಯಾಗಲಿವೆ ಎಂದು ವಿಶ್ಲೇಷಿಸಲಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಆರ್‌.ಆರ್‌.ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರು ಚುನಾವಣಾ ಅಕ್ರಮ ಎಸಗಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ನನ್ನನ್ನು ಆಯ್ಕೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ತಳ್ಳಿ ಹಾಕಿ ಉಪಚುನಾವಣೆ ನಡೆಸಲು ಹೈಕೋರ್ಟ್‌ ಅನುಮತಿ ನೀಡಿತ್ತು. 2019ರ ಡಿಸೆಂಬರ್‌ನಲ್ಲಿ 12 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರೂ ಮುನಿರತ್ನ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿರಲಿಲ್ಲ.

ಇಂದು ಜೆಡಿಎಸ್‌ ಸಭೆ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ಕರೆದಿದೆ. ನಗರದ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಬುಧವಾರ ಸಂಜೆ 4 ಗಂಟೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.