18 ಕ್ರಿಮಿನಲ್‌ ಕೇಸ್‌, 11 ಕೋಟಿ ಆಸ್ತಿ, 6 ಕಾರು, ಪಿಸ್ತೂಲ್‌-ರಿವಾಲ್ವರ್‌ ಇರಿಸಿಕೊಂಡಿರುವ ಮಹಾ 'ಸರ್ಕಾರ್‌'!

ಇಂದು ಥಾಣೆಯ ಠಾಕ್ರೆ ಎಂದೇ ಗುರುತಿಸಿಕೊಂಡಿರುವ ಏಕನಾಥ್‌ ಶಿಂಧೆ, ಕಲಿಯುವ ಕಾರಣಕ್ಕಾಗಿ ಥಾಣೆಗೆ ಬಂದಿದ್ದವರು. ಆದರೆ, ಕಲಿತಿದ್ದು ಬರೀ 11ನೇ ಕ್ಲಾದ್ ಮಾತ್ರ. ಆ ಬಳಿಕ ಥಾಣೆಯಲ್ಲಿ ಆಟೋ ಓಡಿಸಿಕೊಂಡು ಪ್ರದೇಶದ ಜನರಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಏಕನಾಥ್‌ ಶಿಂಧೆ, ಶಿವಸೇನಾ ನಾಯಕ ಅನಂದ್ ದಿಘೆ ಅವರನ್ನು ಭೇಟಿಯಾಗಿದ್ದು ಅವರ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿತು. 18ನೇ ವರ್ಷದಲ್ಲಿ ರಾಜಕೀಯಕ್ಕೆ ಕಾಲಿಟ್ಟ ಏಕನಾಥ್‌ ಶಿಂಧೆ, 58ನೇ ವರ್ಷಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಹಂತಕ್ಕೆ ಬೆಳೆದು ನಿಂತಿದ್ದಾರೆ.

Shinde used to drive an auto  left politics after losing two children know everything about Eknath Shinde New CM of Maharashtra san

ಮುಂಬೈ (ಜೂನ್‌ 30): ಥಾಣೆಯ ಠಾಕ್ರೆ (Thane Thackeray), ಶಿವಸೇನೆಯ (Shiv Sena) ಹೊಸ ಸರ್ಕಾರ್‌ ಏಕನಾಥ್‌ ಶಿಂಧೆ (Eknath Shinde), ಗುರುವಾರ ಸಂಜೆ 7.30ಕ್ಕೆ ಮಹಾರಾಷ್ಟ್ರದ (Maharashtra) 20ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇಡೀ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸೂತ್ರಧಾರಿಯಾಗಿದ್ದ ಏಕನಾಥ್‌ ಶಿಂಧೆ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್‌ ದೊಡ್ಡ ರಣತಂತ್ರ ಮಾಡಿದೆ. ಶಿವಸೇನೆ ಇತಿಹಾಸದ ಅತೀದೊಡ್ಡ ಬಂಡಾಯ ಮಾಡಿದ ಏಕನಾಥ್‌ ಶಿಂಧೆ ಯಾರು, ಇಡೀ ಠಾಕ್ರೆ ಕುಟುಂಬವನ್ನೇ ಎದುರು ಹಾಕಿಕೊಂಡ ಶಿಂಧೆಯ ಇತಿಹಾಸ ಏನು ಎನ್ನುವುದರ ವರದಿ.

ಏಕನಾಥ್‌ ಶಿಂಧೆ ಹುಟ್ಟಿದ್ದು 1964ರ ಫೆಬ್ರವರಿ 9 ರಂದು, ಮಹಾರಾಷ್ಟ್ರದ ಸತಾರ  (Satara) ಜಿಲ್ಲೆಯಲ್ಲಿ. ಅವರು ಥಾಣೆಗೆ ಬಂದಿದ್ದು ಕಲಿಯುವ ಕಾರಣಕ್ಕಾಗಿ. ಆದರೆ, 11ನೇ ಕ್ಲಾಸ್‌ವರೆಗೆ ಕಲಿತ ಏಕನಾಥ್‌ ಶಿಂಧೆ ಆ ಬಳಿಕ ಸೆಕೆಂಡ್‌ ಹ್ಯಾಂಡ್‌ ಆಟೋ ತೆಗೆದುಕೊಂಡು ಥಾಣೆಯಲ್ಲಿ ಹೊಟ್ಟೆಪಾಡಿನ ಕೆಲಸ ಆರಂಭಿಸಿದ್ದರು. ಈ ಅವಧಿಯಲ್ಲಿ ತಮ್ಮ ಆಟೋದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದ ಶಿವಸೇನೆಯ ಬಲಾಢ್ಯ ನಾಯಕ ಅನಂದ್‌ ದಿಘೆ (Anand Dighe) ಅವರ ಪರಿಚಯವಾಗಿತ್ತು. 18ನೇ ವರ್ಷದಲ್ಲಿ ರಾಜಕೀಯಕ್ಕೆ ಇಳಿದ, ಏಕನಾಥ್‌ ಶಿಂಧೆ, ಸಾಮಾನ್ಯ ಶಿವಸೇನೆ ಕಾರ್ಯಕರ್ತನಾಗಿ ರಾಜಕಾರಣಕ್ಕೆ ಇಳಿದಿದ್ದರು.

ಅಂದಾಜು 15 ವರ್ಷಗಳ ಕಾಲ ಶಿವಸೇನೆಯ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಏಕನಾಥ್‌ ಶಿಂಧೆ, 1997ರಲ್ಲಿ ಚುನಾವಣಾ ರಾಜಕೀಯಕ್ಕೆ ಇಳಿದರು. 1997ರಲ್ಲಿ ಆನಂದ್‌ ದಿಘೆ ಥಾಣೆ ಮಹಾನಗರ ಪಾಲಿಕೆಯ ಚುನಾವಣೆಯ ಕೌನ್ಸಿಲರ್‌ ಟಿಕೆಟ್‌ ನೀಡಿದ್ದರು. ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಏಕನಾಥ್‌ ಶಿಂಧೆ ಗೆಲುವಿನ ಖುಷಿ ಕಂಡಿದ್ದರು. 2011ರಲ್ಲಿ ಥಾಣೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನಾಗುವವರೆಗೆ ಬೆಳೆದರು. ಅದಾದ ಬಳಿಕ, 2002ರಲ್ಲಿ ಮತ್ತೊಮ್ಮೆ ಕೌನ್ಸಿಲರ್‌ ಆಗಿ 2ನೇ ಬಾರಿಗೆ ಆಯ್ಕೆಯಾದರು.

ಆನಂದ್‌ ದಿಘೆ ಸಾವು ಹಾಗೂ ರಾಜಕೀಯ ಬದಲಾವಣೆ: ಶಿವಸೇನೆ ನಾಯಕ ಆನಂದ್‌ ದಿಘೆ ಸಾವಿನ ಬಳಿಕ ಅಂದರೆ, 2001ರ ನಂತರ ಏಕನಾಥ್‌ ಶಿಂಧೆ ರಾಜಕೀಯದಲ್ಲಿ ಉಚ್ಛ್ರಾಯ ಸ್ಥಿತಿಗೇರಿದರು. ಅಲ್ಲಿಯವರೆಗೂ ಥಾಣೆ ರಾಜಕೀಯದ ಸರ್ಕಾರ್‌ ಆಗಿದ್ದವರು ಆನಂದ್‌ ದಿಘೆ. ಅವರ ಸಾವಿನ ಬಳಿಕ ಶಿಷ್ಯನಾಗಿದ್ದ ಏಕನಾಥ್‌ ಶಿಂಧೆಗೆ ಅಧಿಕಾರ ಸಲೀಸಾಗಿ ಬಂದು ತಲುಪಿತ್ತು. 2005ರಲ್ಲಿ ನಾರಾಯಣ ರಾಣೆ ಪಕ್ಷ ತೊರೆದ ನಂತರ ಶಿವಸೇನೆಯಲ್ಲಿ ಶಿಂಧೆ ಅವರ ಸ್ಥಾನಮಾನ ಬೆಳೆಯುತ್ತಲೇ ಇತ್ತು. ರಾಜ್ ಠಾಕ್ರೆ ಪಕ್ಷ ತೊರೆದಾಗ ಶಿಂಧೆ, ಠಾಕ್ರೆ ಕುಟುಂಬಕ್ಕೆ ಹತ್ತಿರವಾದರು.

2004ರಲ್ಲಿ ಮೊದಲ ಬಾರಿಗೆ ಶಾಸಕ: 2004 ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ, ಶಿಂಧೆ ಅವರಿಗೆ ಥಾಣೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿತು. ಇಲ್ಲಿಯೂ ಶಿಂಧೆ ಜಯ ಕಂಡಿದ್ದರು. ಅವರು ಕಾಂಗ್ರೆಸ್‌ನ ಮನೋಜ್ ಶಿಂಧೆ ಅವರನ್ನು 37 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಇದಾದ ನಂತರ 2009, 2014 ಮತ್ತು 2019ರಲ್ಲಿ ಶಿಂಧೆ ಅವರು ಥಾಣೆ ಜಿಲ್ಲೆಯ ಕೊಪ್ರಿ ಪಚ್ಪಖಾಡಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಶಿಂಧೆ ಅವರು ರಾಜ್ಯದ ಲೋಕೋಪಯೋಗಿ ಸಚಿವರಾಗಿದ್ದರು.

2019 ರ ವಿಧಾನಸಭಾ ಚುನಾವಣೆ ವೇಳೆಗೆ ನಂತರ ಭವಿಷ್ಯದ ಮುಖ್ಯಮಂತ್ರಿ ಶಿಂಧೆ  ಎನ್ನುವ ಪೋಸ್ಟರ್‌ಗಳನ್ನು ಥಾಣೆಯಲ್ಲಿ ಹಾಕಲಾಗಿತ್ತು. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಶಿಂಧೆ ಮುಂಚೂಣಿಯಲ್ಲಿದ್ದರು. ಚುನಾವಣೆಯ ನಂತರ, ಆದಿತ್ಯ ಠಾಕ್ರೆ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿಂಧೆ ಅವರ ಹೆಸರನ್ನು ಪ್ರಸ್ತಾಪಿಸಿದರು ಮತ್ತು ಅವರು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಇದಾದ ನಂತರ, ಅವರ ಬೆಂಬಲಿಗರು ಥಾಣೆಯಲ್ಲಿ ಭಾವಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪೋಸ್ಟರ್‌ಗಳನ್ನು ಸಹ ಹಾಕಿದರು.

ಆದಾಗ್ಯೂ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಒತ್ತಡದಿಂದ ಉದ್ಧವ್ ಠಾಕ್ರೆ (Uddhav Thackeray) ಹೆಸರು ಮುನ್ನಲೆಗೆ ಬಂದಿತು. ಉದ್ಧವ್ ಸರ್ಕಾರದಲ್ಲಿ, ಶಿಂಧೆ ಅವರು ರಾಜ್ಯದ ನಗರಾಭಿವೃದ್ಧಿ ಸಚಿವ ಹಾಗೂ ಥಾಣೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕಾಂಗ್ರೆಸ್ (Congress) ಮತ್ತು ಎನ್‌ಸಿಪಿ (NCP) ಜೊತೆಗಿನ ಮೈತ್ರಿಯಿಂದ ಶಿಂಧೆ ಸಂತಸಗೊಂಡಿಲ್ಲ ಎನ್ನಲಾಗಿದೆ. ಇದಾದ ನಂತರ ಅವರ ಮತ್ತು ಉದ್ಧವ್ ಠಾಕ್ರೆ ನಡುವಿನ ಅಂತರ ಹೆಚ್ಚಾಗತೊಡಗಿತು. ಫೆಬ್ರವರಿ 2022 ರಲ್ಲಿ ಏಕನಾಥ್ ಶಿಂಧೆ ಅವರ ಜನ್ಮದಿನದಂದು ಅವರ ಬೆಂಬಲಿಗರು ಭವಿಷ್ಯದ ಮುಖ್ಯಮಂತ್ರಿಯ ಪೋಸ್ಟರ್‌ಗಳನ್ನು ಹಾಕಿದ್ದರು.

ಮಕ್ಕಳ ಸಾವನ್ನು ಕಣ್ಣೆದುರೇ ಕಂಡಿದ್ದ ಶಿಂಧೆ:  ಶಿಂಧೆಯವರು ಕೌನ್ಸಿಲರ್ ಆಗಿದ್ದ ಸಮಯ. ಈ ವೇಳೆ ಅವರ ಕುಟುಂಬ ಸತಾರಾಕ್ಕೆ ಪ್ರವಾಸ ತೆರಳಿತ್ತು. ಇಲ್ಲಿ ನಡೆದ ಅಪಘಾತದಲ್ಲಿ 11 ವರ್ಷದ ಮಗ ದೀಪೇಶ್ ಮತ್ತು 7 ವರ್ಷದ ಮಗಳು ಶುಭದಾ ಅವರ ಸಾವನ್ನು ಕಂಡಿದ್ದರು. ಬೋಟಿಂಗ್ ವೇಳೆ ಸಂಭವಿಸಿದ ಅವಘಢದಲ್ಲಿ , ಶಿಂಧೆಯ ಮಕ್ಕಳಿಬ್ಬರೂ ಕಣ್ಣೆದುರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆಗ ಶಿಂಧೆಯವರ ಎರಡನೇ ಮಗ ಶ್ರೀಕಾಂತನಿಗೆ ಕೇವಲ 13 ವರ್ಷ. ಶ್ರೀಕಾಂತ್ ಪ್ರಸ್ತುತ ಕಲ್ಯಾಣ್ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಸಂಸದರಾಗಿದ್ದಾರೆ. ಈ ಘಟನೆಯ ನಂತರ ಶಿಂಧೆ ಸಾಕಷ್ಟು ಮನನೊಂದಿದ್ದರು. ಅವರು ರಾಜಕೀಯವನ್ನೂ ದೂರವಿಟ್ಟಿದ್ದರು. ಈ ಅವಧಿಯಲ್ಲೂ ಆನಂದ್ ದಿಘೆ ಅವರನ್ನು ಬೆಂಬಲಿಸಿ ಸಾರ್ವಜನಿಕ ಜೀವನಕ್ಕೆ ಕರೆತಂದರು.

ಮಕ್ಕಳ ಸಾವನ್ನು ಕಣ್ಣೆದುರೇ ಕಂಡಿದ್ದ ಏಕನಾಥ್ ಶಿಂಧೆ, ಇಂದು ಇಡಿ ಶಿವಸೇನೆಯೆ ಅವರ ಬೆನ್ನಹಿಂದೆ!

18 ಕ್ರಿಮಿನಲ್‌ ಪ್ರಕರಣ: 2019 ರ ವಿಧಾನಸಭಾ ಚುನಾವಣೆಯಲ್ಲಿ ಏಕನಾಥ್ ಶಿಂಧೆ ಅವರು ನೀಡಿರುವ ಅಫಿಡವಿಟ್ ಪ್ರಕಾರ, ಅವರ ವಿರುದ್ಧ ಒಟ್ಟು 18 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಬೆಂಕಿ ಅಥವಾ ಸ್ಫೋಟಕ ವಸ್ತುಗಳಿಂದ ಹಾನಿಯನ್ನುಂಟುಮಾಡುವ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ. ಕಾನೂನುಬಾಹಿರವಾಗಿ ಒಟ್ಟುಗೂಡಿದ ಗುಂಪಿನ ಭಾಗವಾಗಿರುವುದು, ಸರ್ಕಾರಿ ನೌಕರನ ಆದೇಶಗಳನ್ನು ಪಾಲಿಸದಿರುವ ಆರೋಪಗಳು ಸೇರಿವೆ. ಈ ಅಫಿಡವಿಟ್ ಪ್ರಕಾರ, ಶಿಂಧೆ ಒಟ್ಟು 11 ಕೋಟಿ 56 ಲಕ್ಷಕ್ಕೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಇದರಲ್ಲಿ 2.10 ಕೋಟಿಗೂ ಹೆಚ್ಚು ಚರಾಸ್ತಿ ಹಾಗೂ 9.45 ಕೋಟಿಗೂ ಹೆಚ್ಚು ಸ್ಥಿರಾಸ್ತಿ ಘೋಷಿಸಲಾಗಿದೆ.

ಆರು ಕಾರು ಒಂದು ಟೆಂಪೋ: ಚುನಾವಣಾ ಅಫಿಡವಿಟ್ ಪ್ರಕಾರ ಶಿಂಧೆ ಬಳಿ ಒಟ್ಟು ಆರು ಕಾರುಗಳಿವೆ. ಈ ಪೈಕಿ ಮೂರು ಶಿಂಧೆ ಹೆಸರಿನಲ್ಲಿ ಹಾಗೂ ಮೂರು ಪತ್ನಿಯ ಹೆಸರಿನಲ್ಲಿವೆ. ಶಿಂಧೆ ಅವರ ಪತ್ನಿಯ ಹೆಸರಿನ ಟೆಂಪೋ ಕೂಡ ಇದೆ. ಶಿಂಧೆ ಅವರ ಆರು ಕಾರುಗಳ ಸಂಗ್ರಹದಲ್ಲಿ ಎರಡು ಇನ್ನೋವಾ, ಎರಡು ಸ್ಕಾರ್ಪಿಯೊ, ಒಂದು ಬೊಲೆರೊ ಮತ್ತು ಒಂದು ಮಹೀಂದ್ರ ಅರ್ಮಡಾ ಹೊಂದಿದ್ದಾರೆ. ಶಿಂಧೆ ಬಳಿ ಪಿಸ್ತೂಲ್ ಮತ್ತು ರಿವಾಲ್ವರ್ ಕೂಡ ಇದೆ.

ಮಹಾರಾಷ್ಟ್ರ ಸರ್ಕಾರವನ್ನು ಅಲುಗಾಡಿಸಿದ ಆಟೋರಾಜ!

ಶಿಂಧೆ ಹಾಗೂ ಅವರ ಪತ್ನಿ ಇಬ್ಬರೂ ಗುತ್ತಿಗೆದಾರರು: ಚುನಾವಣಾ ಅಫಿಡವಿಟ್‌ನಲ್ಲಿ ಶಿಂಧೆ ತಮ್ಮನ್ನು ಗುತ್ತಿಗೆದಾರ ಮತ್ತು ಉದ್ಯಮಿ ಎಂದು ಹೇಳಿಕೊಂಡಿದ್ದಾರೆ. ಅವರ ಪತ್ನಿಯೂ ಕಟ್ಟಡ ನಿರ್ಮಾಣದ ಗುತ್ತಿಗೆ ಕೆಲಸ ಮಾಡುತ್ತಾರೆ. ಶಿಂಧೆ ಅವರು ಶಾಸಕರಾಗಿ ಪಡೆಯುವ ಸಂಬಳ, ಮನೆಗಳಿಂದ ಬರುವ ಬಾಡಿಗೆ ಮತ್ತು ಬಡ್ಡಿಯಿಂದ ಬರುವ ಆದಾಯವೇ ತಮ್ಮ ಆದಾಯದ ಮೂಲ ಎಂದು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios