ಬೆಂಗಳೂರು (ಫೆ.25):  ಹೊಸಕೋಟೆ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರು ಗುರುವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಹ-ಸದಸ್ಯತ್ವ ಪಡೆಯಲಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸದಾಶಿವನಗರದ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಅವರು ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರತ್‌, ನಮ್ಮ ಕಾರ್ಯಕರ್ತರು ಕೂಡ ಕಾಂಗ್ರೆಸ್‌ ಸೇರ್ಪಡೆಗೆ ಒಪ್ಪಿದ್ದಾರೆ. ಹೀಗಾಗಿ ನಾನು ಮೊದಲು ಕಾಂಗ್ರೆಸ್‌ ಶಾಸಕಾಂಗ ಪಕ್ಷ (ಸಿಎಲ್‌ಪಿ)ದ ಸಹ ಸದಸ್ಯತ್ವ ಪಡೆಯುತ್ತಿದ್ದೇನೆ. ಗುರುವಾರ ಬೆಳಗ್ಗೆ 10.30ಕ್ಕೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ಸದಸ್ಯತ್ವ ನೀಡಲಿದ್ದಾರೆ. ಕಾಂಗ್ರೆಸ್‌ ಪಕ್ಷದ ನಿಲುವು ಮತ್ತು ನನ್ನ ನಿಲುವು ಒಂದೇ ಆಗಿರುವ ಹಿನ್ನೆಲೆಯಲ್ಲಿ ಸಿಎಲ್‌ಪಿ ಸದಸ್ಯತ್ವ ಪಡೆಯಲು ತೀರ್ಮಾನಿಸಿದ್ದೇನೆ. ನನ್ನ ಬೆಂಬಲಿಗರೂ ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸೇರ್ಪಡೆಗೆ ಅಂತಿಮ ಮಾತುಕತೆ ನಡೆಸಿದ ಕರ್ನಾಟಕ ಬಿಜೆಪಿ ಸಂಸದರ ಪುತ್ರ ...

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಂದ ಡಿ.ಕೆ.ಶಿವಕುಮಾರ್‌ ಅವರು ಶರತ್‌ ಬಚ್ಚೇಗೌಡ ಪಕ್ಷ ಸೇರ್ಪಡೆಗೆ ಕಳೆದ ವಾರ ಅನುಮತಿ ಪಡೆದುಕೊಂಡಿದ್ದರು. ಅಲ್ಲದೇ ಖುದ್ದಾಗಿ ಶರತ್‌ ಅವರು ಕೂಡ ಕುಮಾರಕೃಪಾ ಅತಿಥಿಗೃಹದಲ್ಲಿ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಆದರೆ, ನಿಯಮಾವಳಿ ಅಡ್ಡಿ ಇರುವುದರಿಂದ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಬದಲಾಗಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಲಿದ್ದಾರೆ ಎಂದು ತಿಳಿಸಿದರು.

ಶರತ್‌ ಕಾಂಗ್ರೆಸ್‌ ಸೇರಲ್ಲ: ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ಪಕ್ಷ ಸೇರಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್‌ ಸಹ ಸದಸ್ಯರಾಗಿ ಕೆಲಸ ಮಾಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ಪಕ್ಷೇತರ ಅಭ್ಯರ್ಥಿಯು ಸಿದ್ಧಾಂತದ ಆಧಾರದ ಮೇಲೆ ಸಹ ಸದಸ್ಯನಾಗಿ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದು. ಹಾಗಾಗಿ ವಿಧಾನಸಭೆಯಲ್ಲಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದರು