ನವದೆಹಲಿ (ಡಿ.11): ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಬಯಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಸೋನಿಯಾ ಅವರ ನಂತರ ಯುಪಿಎ ಪಕ್ಷಗಳ ನೇತೃತ್ವವನ್ನು ವಹಿಸುವ ಸಮರ್ಥ ನಾಯಕರಾಗಿ ಮಹಾರಾಷ್ಟ್ರದ ರಾಜಕೀಯ ದಿಗ್ಗಜ ಶರದ್‌ ಪವಾರ್‌ ಅವರು ಹೊರಹೊಮ್ಮಿದ್ದಾರೆ. ಹೀಗಾಗಿ ಸೋನಿಯಾರಿಂದ ತೆರವಾಗಲಿರುವ ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಶರದ್‌ ಪವಾರ್‌ ಅವರೇ ನೇಮಕವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಹಿರಿಯ ಕಾಂಗ್ರೆಸ್‌ ನಾಯಕರು ಪಕ್ಷದ ನಾಯಕತ್ವದ ವಿರುದ್ಧವೇ ಬಹಿರಂಗ ಹೇಳಿಕೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಸರಿದೂಗಿಸುವುದಲ್ಲಿ ಹೈರಾಣಾಗಿರುವ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷೆಯಾಗಿ ಮುಂದುವರಿಯಲು ಹಿಂದೇಟು ಹಾಕುತ್ತಿದ್ದಾರೆ.

'ಶಾಲಾ ಪಠ್ಯಕ್ಕೆ ಸೋನಿಯಾ ಸಾಧನೆ ಸೇರಿಸಿ' ಸಿಎಂಗೆ ಒತ್ತಾಯ ...

ಅಲ್ಲದೆ ತಮ್ಮ ಉತ್ತರಾಧಿಕಾರಿಯನ್ನು ಶೀಘ್ರವೇ ಹುಡುಕಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಸೋನಿಯಾ. ಯುಪಿಎ ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿಯುತ, ಹಿರಿಯ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಎದುರಿಸುವ ಪ್ರಬಲ ನಾಯಕತ್ವ ಯುಪಿಎ ಕೂಟಕ್ಕೆ ಬೇಕಿದೆ. ಯುಪಿಎ ಒಕ್ಕೂಟದಲ್ಲಿರುವ ಎಲ್ಲಾ ಪಕ್ಷಗಳ ನಾಯಕರ ಪೈಕಿ ಈ ಎಲ್ಲಾ ಸಾಮರ್ಥ್ಯ ಹೊಂದಿದ ಏಕೈಕ ನಾಯಕರಾಗಿರುವ ಪವಾರ್‌ ಅವರೇ ಯುಪಿಎ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.