ಕಾಂಗ್ರೆಸ್‌ನ ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೆಗಲ ಮೇಲೆ ಶನಿಮಹಾತ್ಮ ದೇವರು ಕುಳಿತಿರುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವಿಲ್ಲ, ಶನಿಮಹಾತ್ಮ ದೇವರನ್ನು ಹೆಗಲ ಮೇಲಿಂದ ಇಳಿಸಿಕೊಳ್ಳಲು ದೇವಾಲಯಗಳು ಸುತ್ತಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ದ ಟೀಕಾ ಪ್ರಹಾರ ಮಾಡಿದರು.

ಬಂಗಾರಪೇಟೆ (ಫೆ.4) : ಕಾಂಗ್ರೆಸ್‌ನ ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೆಗಲ ಮೇಲೆ ಶನಿಮಹಾತ್ಮ ದೇವರು ಕುಳಿತಿರುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವಿಲ್ಲ, ಶನಿಮಹಾತ್ಮ ದೇವರನ್ನು ಹೆಗಲ ಮೇಲಿಂದ ಇಳಿಸಿಕೊಳ್ಳಲು ದೇವಾಲಯಗಳು ಸುತ್ತಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ದ ಟೀಕಾ ಪ್ರಹಾರ ಮಾಡಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ 4ನೇ ಹಂತದ 4.54 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರು ಹೆಚ್ಚಿನ ಮತಗಳನ್ನು ಕೊಟ್ಟು ಗೆಲ್ಲಿಸಿದಕ್ಕೆ ಜನರಿಗೆ ಅನುಕೂಲ ಮಾಡಿಕೊಡದೆ ಅವರ ಸ್ವಂತಕ್ಕೆ ಅನುಕೂಲ ಮಾಡಿಕೊಂಡಿದ್ದರಿಂದ ಶನಿ ದೇವರು ಹೆಗಲೇರಿದ್ದಾರೆ ಎಂದರು.

ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ಸಿಎಂ ಭರವಸೆ

ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್‌ ಕಮೀಷನ್‌ ಸರ್ಕಾರವೆಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮೇಲೆ ಗುತ್ತಿಗೆದಾರರಿಂದ ಎಷ್ಟೆಷ್ಟುಕಮಿಷನ್‌ ಪಡೆಯುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮಾಗೊಂದಿ ಗ್ರಾಮದ ರಸ್ತೆಯ ಅಭಿವೃದ್ಧಿಗೆ 9 ಕೋಟಿ ಅಂದಾಜಿನ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಮಾಡಿರುವುದು ಸಾಬೀತಾಗಿರುವುದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ನಾನಾಗಲೀ, ಬಿಜೆಪಿ ಮುಖಂಡರಾಗಲೀ ಕನಿಷ್ಠ ಒಂದು ಟೀ ಸಹ ಕುಡಿದಿಲ್ಲ. ನಮಗೆ ಜನರು ಅಧಿಕಾರ ನೀಡಿರುವುದರನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಗಳ ಸೌಲಭ್ಯ ತಲುಪುವ ಕೆಲಸ ಮಾಡುತ್ತಿದ್ದೇವೆ. ನಾವ್ಯಾರೂ ಕಂಟ್ರಾಕ್ಟರ್‌ ಆಗಿಲ್ಲ. ನಮ್ಮ ಸ್ವಂತದವರೂ ಯಾರೂ ಕಂಟ್ರಾಕ್ಟರೂ ಇಲ್ಲ. ನಮಗೆಲ್ಲಾ ಮುಖ್ಯವಾಗಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕಾಗಿದೆಯೇ ಹೊರತು, ಪರ್ಸೇಂಟೇಜ್‌ ಬೇಕಾಗಿಲ್ಲ ಎಂದು ಹೇಳಿದರು.

ಉಸ್ತುವಾರಿ ಸಚಿವರು, ಶಾಸಕರು ಗೈರುಹಾಜರಿ:

ಕಾರ್ಯಕ್ರಮಕ್ಕೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಗೈರುಹಾಜರಿಯಾಗಿದ್ದರು. ಪುರಸಭೆಯಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಬೆಂಬಲಿಗರಾದ ಅಧ್ಯಕ್ಷೆ ಫರ್ಜಾನ ಸುಹೇಲ್‌, ಉಪಾಧ್ಯಕ್ಷೆ ಶಾರದ ವಿವೇಕಾನಂದ್‌ ಸೇರಿದಂತೆ 22ಕ್ಕೂ ಹೆಚ್ಚು ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದರೂ ಯಾರೂ ಸಹ ಬಂದಿಲ್ಲ. ಪಟ್ಟಣದ ಪ್ರಥಮ ಪ್ರಜೆಯಾಗಿರುವ ಫರ್ಜಾನಾ ಸುಹೇಲ್‌ ಗೈರುಹಾಜರಿ ಆಗಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

ಇನ್ನೂ ರಾಜ್ಯ ಬಿಜೆಪಿ ಸರ್ಕಾರದ ತೋಟಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಈ ಕಾರ‍್ಯಕ್ರಮದ ಭೂಮಿ ಪೂಜೆ ನೆರವೇರಿಸುವ ಜವಾಬ್ದಾರಿ ಹೊಂದಿದ್ದರೂ ಗೈರುಹಾಜರಿಯಾಗಿದ್ದು ಸಾರ್ವಜನಿಕರಿಂದ ಟೀಕೆಗೆ ಗುರಿಯಾದರು.

Mandya Politics: ಸುಮಲತಾ ಬಿಜೆಪಿಗೆ ಬಂದರೆ ತಕ್ಕದಾದ ಸ್ಥಾನಮಾನ: ಸಚಿವ ನಾರಾಯಣಗೌಡ

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಮಾವು ನಿಗಮದ ಅಧ್ಯಕ್ಷ ವಾಸುದೇವ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌, ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್‌, ತಾಲೂಕು ಅಧ್ಯಕ್ಷ ನಾಗೇಶ್‌, ವಿ.ಶೇಷು, ತಹಶೀಲ್ದಾರ್‌ ಎಂ.ದಯಾನಂದ್‌, ತಾಪಂ ಇಓ ಎನ್‌.ವೆಂಕಟೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ಎನ್‌.ಚಲಪತಿ, ಸದಸ್ಯರಾದ ಕಪಾಲಿ ಶಂಕರ್‌, ಪ್ರಭಾಕರ್‌ ರಾವ್‌, ವೆನ್ನೆಲಾ, ದೇಶಿಹಳ್ಳಿ ಶ್ರೀನಿವಾಸ್‌, ಬಿಪಿ.ಮಹೇಶ್‌, ಬಿಂದು ಮಾಧವ್‌, ಶೋಭ, ಮುಖಂಡರಾದ ಬಿ.ಹೊಸರಾಯಪ್ಪ, ಎಂ;ಪಿ.ಶ್ರೀನಿವಾಸಗೌಡ, ಮಾರ್ಕಂಡೇಯಗೌಡ, ಹನುಮಪ್ಪ, ಪಿ.ಅಮರೇಶ್‌, ಶಶಿಕುಮಾರ್‌, ಶಾಂತಿನಗರ ಮಂಜುನಾಥ್‌, ಜೆಸಿಬಿ ನಾರಾಯಣಪ್ಪ, ಕಲಾವತಿ ರಮೇಶ್‌ ಸೇರಿದಂತೆ ಮುಖಂಡರು ಹಾಜರಿದ್ದರು.