ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಲ್ಲೊಂದಾಗಿರುವ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಶತಕೋಟಿ ದಾಟಿರುವುದು ಅಭಿನಂದನೀಯ. ಜೂ.11ಕ್ಕೆ ಆರಂಭವಾಗಿದ್ದ ಯೋಜನೆ ಅಡಿಯಲ್ಲಿ ನ. 23ಕ್ಕೆ 100.47 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ದಾಖಲೆಗಳು ಹೇಳುತ್ತವೆ. ಯೋಜನೆಯು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ನ.25): ಶಕ್ತಿ ಯೋಜನೆ ಅಡಿಯಲ್ಲಿ 100.47 ಕೋಟಿ ಮಹಿಳೆಯರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಆ ಮೂಲಕ ಯೋಜನೆ ವಿರೋಧಿಸಿದ್ದ ಪ್ರತಿಪಕ್ಷಗಳಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಲ್ಲೊಂದಾಗಿರುವ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಶತಕೋಟಿ ದಾಟಿರುವುದು ಅಭಿನಂದನೀಯ. ಜೂ.11ಕ್ಕೆ ಆರಂಭವಾಗಿದ್ದ ಯೋಜನೆ ಅಡಿಯಲ್ಲಿ ನ. 23ಕ್ಕೆ 100.47 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ದಾಖಲೆಗಳು ಹೇಳುತ್ತವೆ. ಯೋಜನೆಯು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಶಕ್ತಿ ಯೋಜನೆಯಿಂದ ನಷ್ಟವುಂಟಾಗುತ್ತದೆ, ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಸಾಕಷ್ಟು ಆರೋಪ ಮಾಡಿದ್ದವು. ಆದರೆ, ಶಕ್ತಿ ಯೋಜನೆಯ ಯಶಸ್ಸು ಅದಕ್ಕೆ ತಕ್ಕ ಉತ್ತರ ನೀಡಿದೆ. ಆರ್ಥಿಕವಾಗಿ ಹೆಚ್ಚು ಸಹಕಾರಿಯಾದ ಯೋಜನೆ ಇದು ಎಂಬುದನ್ನು ತೋರಿಸಿದೆ. ಎಲ್ಲ ಆರೋಪಗಳನ್ನು ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಕ್ತಿ ಯೋಜನೆ: 100 ಕೋಟಿ ದಾಟಿದ ಉಚಿತ ಬಸ್‌ ಪ್ರಯಾಣಿಕರ ಸಂಖ್ಯೆ!

ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಬಲ ನೀಡಿದೆ. ಅದೇ ರೀತಿ ಯೋಜನೆ ಯಶಸ್ಸಿನಿಂದ ಕಾಂಗ್ರೆಸ್‌ ಸರ್ಕಾರಕ್ಕೆ ಮಹಿಳಾ ಶಕ್ತಿ ದೊರೆತಂತಾಗಿದೆ. ರಾಜ್ಯದ ಮಾತೆಯರು ನಮಗೆ ನೀಡಿರುವ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಹಾಗೂ ಅವರ ಶಕ್ತಿ ಯಾವಾಗಲೂ ನಮ್ಮೊಂದಿಗಿರುತ್ತದೆ ಎಂಬ ವಿಶ್ವಾಸ ನಮಗಿದೆ. ನಾವು ನೀಡಿದ್ದ ಗ್ಯಾರಂಟಿ ಭರವಸೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಮತ್ತು ಈಡೇರಿಸುವುದು ನಮ್ಮ ಗ್ಯಾರಂಟಿಯಾಗಿರುತ್ತದೆ. ನಾವು ನುಡಿದಂತೆ ನಡೆದಿದ್ದು, ಮುಂದೆಯೂ ನಡೆಯುತ್ತೇವೆ. ಇದು ನಮ್ಮ ಬದ್ಧತೆಯಾಗಿದೆ. ಹೀಗಾಗಿ ರಾಜ್ಯದ ಮಹಿಳೆಯರ ಗ್ಯಾರಂಟಿಯೂ ನಮ್ಮ ಪರವಾಗಿರಬೇಕು ಎಂದು ಹೇಳಿದ್ದಾರೆ.

ಶಕ್ತಿ ಯೋಜನೆಯಿಂದ ಬಸ್‌ಗಳು ತುಂಬಿ ತುಳುಕುತ್ತಿವೆ. ಧಾರ್ಮಿಕ ಕೇಂದ್ರಗಳು, ಪ್ರವಾಸಿ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಹಣದ ಹರಿವು ಹೆಚ್ಚಾಗಿದೆ. ಮುಜರಾಯಿ ದೇವಸ್ಥಾನಗಳ ಹುಂಡಿಗಳಲ್ಲಿ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.