* ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ* ಏಳು ಮಂದಿಗೆ ಪ್ರತಿಜ್ಞಾವಿಧಿ ಬೋಧಿಸಿದ ಹಂಗಾಮಿ ಸಭಾಪತಿ ರಘುನಾಥ್‌ರಾವ್ ಮಲ್ಕಾಪೂರೆ* ಸತತವಾಗಿ ಎರಡನೇ ಬಾರಿ ಮೇಲ್ಮನೆಗೆ ಪ್ರವೇಶಿಸಿದ ಲಕ್ಷ್ಮಣ್ ಸವದಿ
ಬೆಂಗಳೂರು(ಜೂ.17): ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಏಳು ಮಂದಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಗಾಮಿ ಸಭಾಪತಿ ರಘುನಾಥ್‌ರಾವ್ ಮಲ್ಕಾಪೂರೆ ಅವರು ಏಳು ಮಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಸದಸ್ಯರಾದ ಲಕ್ಷ್ಮಣ್ ಸವದಿ, ಕೇಶವ್ ಪ್ರಸಾದ್, ಎಂ.ನಾಗರಾಜ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಅಬ್ದುಲ್ ಜಬ್ಬಾರ್ ಅಲ್ಲಾನ ಹೆಸರಲ್ಲಿ ಸ್ವೀಕರಿಸಿದರು. ಛಲವಾದಿ ನಾರಾಯಣಸ್ವಾಮಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಲ್ಲಿ, ಟಿ.ಎ.ಶರವಣ ಶಿರಡಿ ಸಾಯಿಬಾಬಾ ಮತ್ತು ತಿರುಪತಿ ವೆಂಕಟೇಶ್ವರ ಹೆಸರಲ್ಲಿ ಮತ್ತು ಹೇಮಲತಾ ನಾಯಕ್ ಅವರು ವಾಲ್ಮೀಕಿ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಲಕ್ಷ್ಮಣ್ ಸವದಿ ಅವರು ಸತತವಾಗಿ ಎರಡನೇ ಬಾರಿ ಮೇಲ್ಮನೆಗೆ ಪ್ರವೇಶಿಸಿದ್ದಾರೆ. ಬಿಜೆಪಿಯ ಕೇಶವ್ ಪ್ರಸಾದ್, ಹೇಮಲತಾ ನಾಯಕ್, ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್‌ನ ಎಂ.ನಾಗರಾಜ್ ಅವರು ಮೊದಲ ಬಾರಿಗೆ ಮೇಲ್ಮನೆಗೆ ಪ್ರವೇಶಿಸಿದ್ದಾರೆ. ಜೆಡಿಎಸ್‌ನ ಟಿ.ಎ.ಶರವಣ ಮತ್ತು ಅಬ್ದುಲ್ ಜಬ್ಬಾರ್ ಅವರು ಎರಡನೇ ಬಾರಿ ವಿಧಾನಪರಿಷತ್‌ಗೆ ತೆರಳಿದ್ದಾರೆ.
MLC Election: ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಹೊರಟ್ಟಿ ಬಾದಶಾ!
ಇದೇ ವೇಳೆ ಟಿ.ಎ.ಶರವಣ ವಿತರಿಸಿದ ತಿರುಪತಿ ಲಡ್ಡನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ನೂತನ ಸದಸ್ಯರ ಬಳಿ ತೆರಳಿ ತಿನಿಸಿದರು. ಅಂತೆಯೇ ಶರವಣ ಅವರಿಗೂ ತಿನಿಸಿದರು. ಆಗ ಶಾಸಕ ಜಮೀರ್ ಅಹ್ಮದ್ ಅವರು, ನಿನ್ನ ಲಡ್ಡು ನಿನಗೆ ಎಂದು ಶರವಣ ಅವರನ್ನು ಉದ್ದೇಶಿಸಿ ಹಾಸ್ಯ ಚಟಾಕಿ ಹಾರಿಸಿದರು. ಆಗ ಶರವಣ ಕೆರೆಯ ನೀರನ್ನೂ ಕೆರೆಗೆ ಚೆಲ್ಲಿ ಎಂದು ಹೇಳಿದಾಗ ಕಾರ್ಯಕ್ರಮವು ನಗೆಗಡಲಿನಲ್ಲಿ ತೇಲಿತು.
ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ್ ಮಾಮನಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಲ್ಮನೆ ಆಡಳಿತ ಪಕ್ಷದ ಮುಖ್ಯಸಚೇತಕ ವೈ.ಎ.ನಾರಾಯಣ ಸ್ವಾಮಿ, ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೇ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ. ಅಲ್ಲಿಯೇ ಇದ್ದಿದ್ದರೆ ನನ್ನ ಭವಿಷ್ಯ ಹಾಳಾಗುತ್ತಿತ್ತು. ಬಿಜೆಪಿಗೆ ಬಂದು ಬೆಳೆಯುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿನ ನನ್ನ ಸ್ನೇಹಿತರು ನನ್ನ ದಾರಿ ಹಿಡಿದರೆ ಸಂತೋಷ ಪಡುತ್ತೇನೆ. ನಾನು ಬಹಳ ವರ್ಷ ಕಾಂಗ್ರೆಸ್‌ನಲ್ಲಿ ದುಡಿದ್ದೇನೆ. ಅಲ್ಲಿ ಪ್ರಮುಖ ನಾಯಕರ ಕುಟುಂಬಕ್ಕೆ ಮಾತ್ರ ಅವಕಾಶ. ಬಿಜೆಪಿ ನನಗೆ ಸೂಕ್ತ ಸ್ಥಾನ ನೀಡಿದೆ ಅಂತ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಶಿಕ್ಷಕರು, ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆರಿಸುವುದರ ಹಿನ್ನೆಲೆ ಏನು?
ಜೆಡಿಎಸ್‌ನ ಹಿರಿಯರು ಎಲ್ಲರೂ ಸೇರಿ ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಎರಡನೇ ಬಾರಿಗೆ ಪರಿಷತ್ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದಾರೆ. ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಸೇವೆ ಮಾಡುತ್ತೇನೆ ಅಂತ ಜೆಡಿಎಸ್ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.
ಮೇಲ್ಮನೆ ಚಿಂತಕರ ಚಾವಡಿ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಗುರುತಿಸಿದೆ. ಬಿಜೆಪಿ ವಿಶಿಷ್ಟಎನ್ನುವುದಕ್ಕೆ ನಾನೇ ಉದಾಹರಣೆ. ತಳಮಟ್ಟದ ಕಾರ್ಯಕರ್ತ ಆದ ನನಗೆ ಅವಕಾಶ ನೀಡಲಾಗಿದೆ. ಸಮಾಜದ ಸಮಸ್ಯೆಗಳು, ಹಿಂದುಳಿದವರು, ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ಮಾಡುತ್ತೇನೆ ಅಂತ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಹೇಳಿದ್ದಾರೆ.
ಮೇಲ್ಮನೆ ಸದಸ್ಯನಾಗಿರುವುದು ನನಗೆ ಸುದಿನ. ಜೀವನದಲ್ಲಿ ದೊಡ್ಡ ದಿನ. ಪದವಿ ಎಂದು ಭಾವಿಸುವುದಿಲ್ಲ. ಬದಲಿಗೆ ಸೇವೆ ಮಾಡಲು ಸಿಕ್ಕ ಅವಕಾಶ ಎಂದು ಪರಿಗಣಿಸುತ್ತೇನೆ ಅಂತ ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ತಿಳಿಸಿದ್ದಾರೆ.
