ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗುತ್ತಾರೆ ಎಂಬ ವಿಶ್ವಾಸವಿದೆ. ಹೈಕಮಾಂಡ್ ಮೇಲೆ ನನಗೆ ನಂಬಿಕೆಯಿದೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ನವದೆಹಲಿ(ಫೆ.11): ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ದೆಹಲಿ ನಿವಾಸದಲ್ಲಿ ಸೋಮವಾರ ಗೃಹ ಪ್ರವೇಶದ ನೆಪದಲ್ಲಿ ಬಿಜೆಪಿಯ ಕೆಲ ನಾಯಕರು, ಅದರಲ್ಲೂ ಲಿಂಗಾಯತ ನಾಯಕರು ಪ್ರತ್ಯೇಕ ಸಭೆ ನಡೆಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಗೃಹಪ್ರವೇಶ ನಿಮಿತ್ತ ಬಿಜೆಪಿಯ ಭಿನ್ನರ ಗುಂಪಿನ ನಾಯಕರ ಸಹಿತ ಹಲವು ಮುಖಂಡರು ಸೋಮಣ್ಣ ನಿವಾಸಕ್ಕೆ ಭೇಟಿ ನೀಡಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕುಮಾರ್ ಬಂಗಾರಪ್ಪ ಅವರು ಹೈದರಾಬಾದ್‌ಗೆ ಹೊರಟ ಬಳಿಕ ಸೋಮಣ್ಣ ನಿವಾಸದಲ್ಲಿ ಲಿಂಗಾಯತನಾಯಕರಸಭೆ ನಡೆಯಿತು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ್, ಬಿ.ಪಿ.ಹರೀಶ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶ್ರೀಮಂತ ಪಾಟೀಲ್, ಮುಖಂಡ ಎನ್.ಆರ್.ಸಂತೋಷ್ ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಹೈಕಮಾಂಡ್ ನಿಲುವು ಸೇರಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.
ಭಿನ್ನರ ಪಡೆಗೆ ಹೈಕಮಾಂಡ್ ಶಾಕ್, ಯತ್ನಾಳಗೆ ನೋಟಿಸ್: ಕಠಿಣ ಕ್ರಮದ ಎಚ್ಚರಿಕೆ!
ರಾಜಕೀಯ ಚರ್ಚೆ ನಡೆದಿಲ್ಲ-ನಿರಾಣಿ: ಸಭೆ ಬಳಿಕ ಮಾತನಾಡಿದ ಮುರುಗೇಶ್ ನಿರಾಣಿ, ದೆಹಲಿಯಲ್ಲಿ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಕಂಪನಿಯ ಸ್ಟಾಲ್ ಹಾಕಿದ್ದೇವೆ. ಹಾಗಾಗಿ, ದೆಹಲಿಗೆ ಬಂದಿದ್ದೇನೆ. ಇದೇ ವೇಳೆ, ಸೋಮಣ್ಣನವರ ಗೃಹಪ್ರವೇಶ ಇತ್ತು. ಕೇವಲ ಲಿಂಗಾಯತರಿಗೆ ಮಾತ್ರ ಆಹ್ವಾನ ನೀಡಿರಲಿಲ್ಲ. ಎಲ್ಲಾ ಸಮಾಜದ ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದರು ನಾವೆಲ್ಲ ಪೂಜೆಯಲ್ಲಿ ಭಾಗಿಯಾಗಿ ಊಟ ಮಾಡಿ ಬಂದವು. ಸೋಮಣ್ಣ ನಿವಾಸದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಗೈರು ಹಾಜರಿ ಕುರಿತು ಪ್ರತಿಕ್ರಿಯಿಸಿ, ನಮ್ಮ ರಾಜ್ಯಾಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರಿಗೆ ಆಹ್ವಾನ ಕೊಟ್ಟಿದ್ದಾರೋ, ಇಲ್ಲವೋ ಗೊತ್ತಿಲ್ಲ, ಸಂಜೆವರೆಗೂ ವಿಜಯೇಂದ್ರ ಅವರು ಸೋಮಣ್ಣ ಅವರ ನಿವಾಸಕ್ಕೆ ಬಂದಿರಲಿಲ್ಲ. ಬಹುಶ: ಕೆಲಸದ ಒತ್ತಡದಿಂದ ಕಾರ್ಯಕ್ರಮಕ್ಕೆ ಬಾರದಿರಬಹುದು ಎಂದರು.
ನಮ್ಮಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ, ನಾವೇ ಆಶಾಕಿರಣ: ಯತ್ನಾಳ್
ಪಕ್ಷದಲ್ಲಿನ ಭಿನ್ನಮತ ಕುರಿತು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನ ಸಹಜ. ಎರಡೂ ಕಡೆಯವರು ತಪ್ಪು ತಿದ್ದಿಕೊಂಡು ಹೋಗಬೇಕು. ವಿಜಯೇಂದ್ರ ಕೂಡ ತಮ್ಮ ತಪ್ಪು ತಿದ್ದಿಕೊಳ್ಳಬೇಕು. ಇನ್ನೊಂದುಗುಂಪು ಕೂಡ ತಮ್ಮ ತಪ್ಪು ತಿದ್ದಿಕೊಳ್ಳಬೇಕು. ಎಲ್ಲರೂ ಪ್ರತಿಷ್ಠೆ ಬಿಟ್ಟು ಕೆಲಸ ಮಾಡಿಕೊಂಡು ಹೋಗಬೇಕು. ಯಾರಿಗೂ ತೊಂದರೆಯಾಗದಂತೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೈಕಮಾಂಡ್ ನವರು ರಾಜ್ಯಾಧ್ಯಕ್ಷರನ್ನಾಗಿ ಯಾರನ್ನು ಘೋಷಣೆ ಮಾಡುತ್ತಾರೋ ಅವರ ಜೊತೆ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗುತ್ತಾರೆ ಎಂಬ ವಿಶ್ವಾಸವಿದೆ. ಹೈಕಮಾಂಡ್ ಮೇಲೆ ನನಗೆ ನಂಬಿಕೆಯಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
