ಸಿದ್ದು, ಡಿಕೆಶಿ ಪ್ರತ್ಯೇಕ ಬಸ್‌ ಯಾತ್ರೆ ಇಂದಿನಿಂದ ಆರಂಭ

ಬೀದರ್‌ನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋಲಾರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಯಾತ್ರೆ, ಉತ್ತರ ಕರ್ನಾಟಕದಲ್ಲಿ ಸಿದ್ದು, ದಕ್ಷಿಣ ಕರ್ನಾಟಕದಲ್ಲಿ ಡಿಕೆಶಿ ಸಂಚಾರ. 

Separate Bus Journey from Siddaramaiah to DK Shivakumar will Start from Jan 3rd grg

ಬೆಂಗಳೂರು(ಫೆ.03):  ರಾಜ್ಯ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಪ್ರಜಾಧ್ವನಿ’ ಬಸ್‌ ಯಾತ್ರೆಯ ಎರಡನೇ ಹಂತ ಇಂದಿನಿಂದ(ಶುಕ್ರವಾರ) ಆರಂಭವಾಗಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಕೈಗೊಳ್ಳುವುದು ಈ ಹಂತದ ವಿಶೇಷತೆ. ಡಿ.ಕೆ.ಶಿವಕುಮಾರ್‌ ಅವರು ಮುಳಬಾಗಿಲಿನ ಕುರುಡುಮಲೆಯಿಂದ ಆರಂಭಿಸಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದರೆ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಸವ ಕಲ್ಯಾಣದಿಂದ ಯಾತ್ರೆಗೆ ಚಾಲನೆ ನೀಡಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಕಳೆದ ತಿಂಗಳು ಬೆಳಗಾವಿಯ ವೀರಸೌಧದಿಂದ ಚಾಲನೆ ನೀಡಿದ್ದ ಮೊದಲ ಹಂತದ ಜಂಟಿ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ವೈಫಲ್ಯಗಳ ಆರೋಪ ಪಟ್ಟಿಯನ್ನು ಜನರ ಮುಂದಿಡುವ ಜತೆಗೆ ಮುಂದಿನ ಚುನಾವಣೆಗೆ ಪ್ರಮುಖ ಘೋಷಣೆಗಳನ್ನೂ ಕಾಂಗ್ರೆಸ್‌ ನಾಯಕರು ಈ ವೇಳೆ ಮಾಡಿದ್ದಾರೆ.

ರಾಜಕೀಯ ಜಿದ್ದಾಜಿದ್ದಿ: ಶುರುವಾದ ಪಕ್ಷಾಂತರ ಪರ್ವ..!

ಇದೀಗ ಮೊದಲ ಹಂತದ ಯಾತ್ರೆಯ ಯಶಸ್ಸಿನ ಹುಮ್ಮಸ್ಸಿನಲ್ಲಿಯೇ ಫೆ.3ರಿಂದ 9 ರವರೆಗೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಹಾಗೂ ಫೆ.3ರಿಂದ 12 ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳು ಯಾತ್ರೆ ಶುರು ಮಾಡಲಿವೆ. ಭ್ರಷ್ಟಾಚಾರದ ಕೊಳೆ ತೊಲಗಿಸಲು ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡುತ್ತಿರುವುದಾಗಿ ಇಬ್ಬರೂ ನಾಯಕರು ಘೋಷಿಸಿದ್ದಾರೆ. ಜತೆಗೆ ಈ ಯಾತ್ರೆಯನ್ನು ಇಬ್ಬರೂ ನಾಯಕರು ಪ್ರತ್ಯೇಕವಾಗಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಯಾತ್ರೆಯು ತೀವ್ರ ಕುತೂಹಲ ಕೆರಳಿಸಿದೆ.

ಬಸವ ಕಲ್ಯಾಣದಿಂದ ಸಿದ್ದರಾಮಯ್ಯ ಯಾತ್ರೆ:

ಸಿದ್ದರಾಮಯ್ಯ ಅವರು ಫೆ.3 ಶುಕ್ರವಾರದಿಂದ ಬಸವ ಕಲ್ಯಾಣದ ಅನುಭವ ಮಂಟಪದ ಬಳಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಮ್ಮೊಂದಿಗೆ ಆ ಭಾಗದ ಪ್ರಮುಖ ನಾಯಕರೊಂದಿಗೆ ಬಸ್‌ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಫೆ.4ರಂದು ಭಾಲ್ಕಿ, ಔರಾದ್‌, ಬೀದರ್‌, ಹುಮ್ನಾಬಾದ್‌, ಫೆ.5ರಂದು ಕಲಬುರಗಿ, ಹೂವಿನ ಹಡಗಲಿ, ಫೆ.6ರಂದು ಕಲಬುರಗಿ, ಕಮಲಾಪುರ (ಕಲಬುರಗಿ ಗ್ರಾಮೀಣ), ಚಿಂಚೋಳಿ, ಸೇಡಂ, ಫೆ.7ರಂದು ಕಲಬುರಗಿಯ ಆಳಂದ, ಅಫ್ಜಲಪುರ, ಯಡ್ರಾಮಿ, ಫೆ.8ರಂದು ಚಿತ್ತಾಪುರ, ಕಲಬುರಗಿ, ಫೆ.9ರಂದು ದಾವಣಗೆರೆ ರಾಜನಹಳ್ಳಿ, ಫೆ.10ರಂದು ಸುರಪುರ, ಶಹಾಪುರ, ಕಲಬುರಗಿ ಉತ್ತರ, ಫೆ.11ರಂದು ಸಿಂದಗಿ, ಇಂಡಿ, ನಾಗಠಾಣ, ಫೆ.12ರಂದು ವಿಜಯಪುರ, ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಆಲಮಟ್ಟಿಗಳಲ್ಲಿ ಯಾತ್ರೆ ನಡೆಸಲಿದ್ದಾರೆ. ಬಳಿಕ ಫೆ.13ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಕುರುಡುಮಲೆಯಿಂದ ಡಿಕೆಶಿ ಯಾತ್ರೆ:

ಇನ್ನು ಶಿವಕುಮಾರ್‌ ಅವರು ಫೆ.3ರಂದು ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಸ್‌ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಮೊದಲ ದಿನ ಕೆಜಿಎಫ್‌ ಕ್ಷೇತ್ರದಲ್ಲಿ ಯಾತ್ರೆ ಮಾಡಲಿದ್ದಾರೆ. ಫೆ.4ರಂದು ಮಾಲೂರು, ದೇವನಹಳ್ಳಿ, ಫೆ.6ರಂದು ಚಿತ್ರದುರ್ಗದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಫೆ.7ರಂದು ಚಿತ್ರದುರ್ಗದ ಹೊಳಲ್ಕೆರೆ, ಹೊಸದುರ್ಗ, ಶಿವಮೊಗ್ಗ, ಫೆ.8ರಂದು ಶಿಕಾರಿಪುರ, ಸೊರಬ, ಸಾಗರ, ಫೆ.9ರಂದು ತೀರ್ಥಹಳ್ಳಿ, ಭದ್ರಾವತಿಯಲ್ಲಿ ಎರಡನೇ ಹಂತದ ಕೊನೆಯ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Chikkamagaluru: ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಯುವಕನ ಕೈ ಮುರಿದ ಕಾಂಗ್ರೆಸ್ ಕಾರ್ಯಕರ್ತರು!

89 ಮಂದಿ ಸಮನ್ವಯ ಸದಸ್ಯರ ತಂಡ:

ಯಾತ್ರೆ ಯಶಸ್ಸಿಗೆ ಎರಡೂ ತಂಡಗಳಿಗೆ 89 ಮಂದಿ ಸಮನ್ವಯ ಸದಸ್ಯರ ತಂಡ ರಚನೆ ಮಾಡಿದ್ದು, ಯಾತ್ರೆ ಸಾಗಲಿರುವ ಕ್ಷೇತ್ರಗಳಲ್ಲಿನ ಸಿದ್ಧತೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ಸಮನ್ವಯ ಸಾಧಿಸಲಿದೆ. ಸಿದ್ದರಾಮಯ್ಯ ಅವರ ಉತ್ತರ ಕರ್ನಾಟಕ ಯಾತ್ರೆಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಬಸವರಾಜ ರಾಯರೆಡ್ಡಿ, ಸಂಚಾಲಕರಾಗಿ ಪ್ರಕಾಶ್‌ ಕೆ.ರಾಥೋಡ್‌ ನೇಮಕಗೊಂಡಿದ್ದು, ಎಂ.ಬಿ.ಪಾಟೀಲ್‌ ಸೇರಿ 35 ಮಂದಿ ಸಮನ್ವಯ ಸಮಿತಿ ಸದಸ್ಯರು ನೇಮಕಗೊಂಡಿದ್ದಾರೆ.

ಉಳಿದಂತೆ ಡಿ.ಕೆ.ಶಿವಕುಮಾರ್‌ ಅವರ ದಕ್ಷಿಣ ಕರ್ನಾಟಕ ಬಸ್‌ ಯಾತ್ರೆಯ ಸಮನ್ವಯ ಸಮಿತಿಗೆ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್‌ ಅಧ್ಯಕ್ಷರಾಗಿ ಹಾಗೂ ಎಸ್‌.ಹುಸೇನ್‌ ಸಂಚಾಲಕ ನೇಮಕಗೊಂಡಿದ್ದು, ಸಮನ್ವಯ ಸಮಿತಿ ಸದಸ್ಯರಾಗಿ 54 ಮಂದಿಯನ್ನು ನೇಮಿಸಲಾಗಿದೆ.

Latest Videos
Follow Us:
Download App:
  • android
  • ios