ಬೆಂಗಳೂರು[ನ.16]: ಅಥಣಿ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರ ಬಗ್ಗೆ ಮುನಿಸಿಕೊಂಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಅವರು ತಮ್ಮ ಮುನಿಸನ್ನು ಬದಿಗಿರಿಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ.

‘ಶಾಸಕನೇ ಅಲ್ಲದವನನ್ನು ಗುರುತಿಸಿ ಸಚಿವ ಸ್ಥಾನವನ್ನು ಬಿಜೆಪಿ ಹೈಕಮಾಂಡ್‌ ನೀಡಿದೆ. ಅದೇ ಹೈಕಮಾಂಡ್‌ ನನ್ನ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ. ಪಕ್ಷದ ಅಭ್ಯರ್ಥಿಯ ಪರ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ’ ಎಂದು ಲಕ್ಷ್ಮಣ್‌ ಸವದಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ ಸವದಿ ಅವರನ್ನು ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ನಿವಾಸಕ್ಕೆ ಕರೆದೊಯ್ದು ಸುದೀರ್ಘ ಮಾತುಕತೆ ನಡೆಸುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ಮಾಡಿ ಯಶಸ್ವಿಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್‌ ಸವದಿ, ಸಚಿವ ಸಂಪುಟದಲ್ಲಿ ಮುಂದುವರಿಸಬೇಕು ಎಂದಾದರೆ ಯಾವುದಾದರೂ ರೂಪದಲ್ಲಿ ಹೈಕಮಾಂಡ್‌ ಮುಂದುವರಿಸಲಿದೆ. ಇಲ್ಲವಾದರೆ ಇಲ್ಲ. ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಒಪ್ಪುವುದು ಅನಿವಾರ್ಯ. ಸಚಿವನನ್ನಾಗಿ ಮಾಡುವಾಗಲೇ ವರಿಷ್ಠರು ಆಲೋಚನೆ ಮಾಡಿರುತ್ತಾರೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ನನಗೆ ಟಿಕೆಟ್‌ ಕೈತಪ್ಪಿರುವುದಕ್ಕೆ ಯಾವುದೇ ರೀತಿಯ ಬೇಸರ ಇಲ್ಲ. ಉಪಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದು ನಿಜ. ಟಿಕೆಟ್‌ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೆ. ನನ್ನನ್ನು ಬೆಳೆಸಿದ ಕ್ಷೇತ್ರ ಬಿಟ್ಟುಕೊಡುತ್ತಿರುವುದಕ್ಕೆ ನೋವಾಗುತ್ತಿದೆ. ಈ ನೋವಿನ ಬಗ್ಗೆ ಪಕ್ಷದ ಹೈಕಮಾಂಡ್‌ಗೂ ಗೊತ್ತಿದೆ. ಆದರೆ, ಅಂತಿಮವಾಗಿ ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ನೀಡಲಾಗಿದೆ. ನನ್ನ ವೈಯಕ್ತಿಕ ಹಿತಾಸಕ್ತಿ ಏನೇ ಇರಲಿ, ಪಕ್ಷದ ಗೆಲುವು ಮುಖ್ಯ. ನನಗೆ ಅಧಿಕಾರ ನೀಡಿದ ವರಿಷ್ಠರಿಗೆ ನನ್ನ ಬೆಳವಣಿಗೆಯ ಅರಿವಿದೆ. ಅಧಿಕಾರ ಕೊಟ್ಟಪಕ್ಷದ ನಾಯಕತ್ವಕ್ಕೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ಕ್ಷೇತ್ರದಲ್ಲಿನ ಕಾರ್ಯಕರ್ತರಿಗೆ ಇದನ್ನು ಮನವರಿಕೆ ಮಾಡಿಕೊಡಲಾಗುವುದು. ಯಾರೂ ನನ್ನನ್ನು ಅನುಮಾನದಿಂದ ನೋಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಟಿಕೆಟ್‌ ಕೇಳಿದ್ದೆ. ಹಾಗಂತ ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ನೀಡಬಾರದು ಎಂದು ನಾನು ಎಲ್ಲಿಯೂ ಹೇಳಿಲ್ಲ. ಒಂದು ಬಾರಿ ಕ್ಷೇತ್ರ ಕೈತಪ್ಪಿಹೋದರೆ, ಅದರನ್ನು ಮರಳಿ ಪಡೆಯುವುದು ಕಷ್ಟ. ನನ್ನ ರಾಜಕೀಯ ನಿಲುವು ಏನೇ ಇದ್ದರೂ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ವರಿಷ್ಠರು ಕೊಟ್ಟಿರುವ ಸೂಚನೆಯನ್ನು ಚಾಚೂತಪ್ಪದೆ ಪಾಲನೆ ಮಾಡುತ್ತೇನೆ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ನಮಗೆ ಅಧಿಕಾರ ಬಂದಿದೆ ಎನ್ನುವುದು ಗೊತ್ತಿದೆ. ಅವರ ಗೆಲುವಿಗೆ ಪ್ರಯತ್ನ ಮಾಡುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಕಾಗವಾಡ ಮತ್ತು ಅಥಣಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದರು ಭರವಸೆ ನೀಡಿದರು.

ಭಾನುವಾರ ಅಥಣಿಯಲ್ಲಿ ಆಯೋಜಿಸಿರುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳುವ ಮೂಲಕ ಮಹೇಶ್‌ ಕುಮಟಳ್ಳಿ ಜತೆ ವೇದಿಕೆ ಹಂಚಿಕೆಕೊಳ್ಳುವ ಬಗ್ಗೆಯೂ ಅವರು ಖಚಿತ ಪಡಿಸಿದರು. ಕುಮಟಳ್ಳಿ ಬಿಜೆಪಿ ಸೇರ್ಪಡೆಯಾದ ಬಳಿಕ ಲಕ್ಷ್ಮಣ ಸವದಿ ಜತೆ ಈ ವೇದಿಕೆಯಲ್ಲಿ ಮೊದಲ ಬಾರಿ ಭಾನುವಾರ ಮುಖಾಮುಖಿಯಾಗಲಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಲಕ್ಷ್ಮಣ ಸವದಿ ಮನವೊಲಿಸುವ ಪ್ರಶ್ನೆ ಏನೂ ಇಲ್ಲ. ಮೊದಲಿನಿಂದಲೂ ಅವರು ಪಕ್ಷದ ನಾಯಕರು. ಅವರಿಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದೇವೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸ ಇದೆ. ಸವದಿ ಅವರು ರಾಜೀನಾಮೆ ನೀಡುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ಅದು ಶುದ್ಧ ಸುಳ್ಳು. ಸವದಿ ಸ್ಥಾನಕ್ಕೆ ಯಾವುದೇ ತೊಂದರೆಯಾಗದಂತೆ ಪಕ್ಷ ನಿರ್ಧರಿಸಿದೆ. ಅವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.