ಬೆಂಗಳೂರು[ಜ.30]: ಕಾಂಗ್ರೆಸ್‌ನ ರಾಜ್ಯ ನಾಯಕರಿಗೆ ಅಹಂ ಪ್ರವೃತ್ತಿ ಬೆಳೆದುಬಿಟ್ಟಿದೆ. ಹಿರಿಯರನ್ನು ಬಳಸಿಕೊಳ್ಳುವ ಕೆಲಸಕ್ಕೂ ಮುಂದಾಗುತ್ತಿಲ್ಲ. ಹೀಗಾಗಿಯೇ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಈ ಸ್ಥಿತಿ ಬಂದಿದೆ ಎಂದು ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ರಾಜ್ಯ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ಮಾಡುತ್ತಿರುವ ಹೈಕಮಾಂಡ್‌ ಧೋರಣೆಯನ್ನು ಟೀಕಿಸಿರುವ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದಿದ್ದಾಗ ಮತ್ತೊಂದು ರೀತಿ ಹೈಕಮಾಂಡ್‌ ವರ್ತಿಸುತ್ತದೆ. ಅಧಿಕಾರ ಇದ್ದಾಗ ಬಹಳ ಉತ್ಸಾಹದಿಂದ ರಾಜ್ಯದ ಕಡೆ ನೋಡುತ್ತಾರೆ. ಅಧಿಕಾರ ಇಲ್ಲದಾಗ ಎಲ್ಲಿಗೆ ಹೋಗುತ್ತಾರೆಂಬುದು ಗೊತ್ತಾಗುವುದಿಲ್ಲ ಎಂದು ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ನಾಯಕರು ಪಕ್ಷದ ಹಿರಿಯರನ್ನು ಸಮರ್ಪಕವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿರೋಧಪಕ್ಷದ ನಾಯಕರ ನೇಮಕದ ವಿಚಾರವಾಗಿ ಹೈಕಮಾಂಡ್‌ ಮಧ್ಯಪ್ರವೇಶದವರೆಗೂ ಕಾಯಬಾರದು. ರಾಜ್ಯದಲ್ಲೇ ನಾಯಕರು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ದೇಶದಲ್ಲಿ ಹಿರಿಯ ಪಕ್ಷವಾಗಿದೆ. ಆದರೆ, ಪ್ರಸ್ತುತ ರಾಜ್ಯ ರಾಜಕೀಯ ನಾಯಕರಿಗೆ ಅಹಂ ಪ್ರವೃತ್ತಿ ಬೆಳೆದುಬಂದಿದೆ. ಹಿರಿಯರನ್ನು ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಹೀಗಾಗಿ ಪಕ್ಷದ ಸಂಘಟನೆ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುರ್ತಾಗಿ ಪಕ್ಷ ಸಂಘಟನೆ ಆಗಬೇಕಿದೆ:

ಈ ವೇಳೆ ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್‌ ಮೊದಲೇ ನಾಯಕರಾಗಿ ಬೆಳೆದು ನಿಂತವರಲ್ಲ. ಸಿದ್ದರಾಮಯ್ಯ ಎಲ್ಲರ ನೆರವಿನಿಂದಲೂ ಅಧಿಕಾರಕ್ಕೆ ಬಂದವರು. ಪರಮೇಶ್ವರ್‌ ಸಹ ಸಂಸ್ಥೆಗಳನ್ನು ಕಟ್ಟಿಕೊಂಡು ಇದ್ದರು. ಅವುಗಳ ಮೂಲಕವೇ ರಾಜಕೀಯಕ್ಕೆ ಬಂದವರು ಎಂದರು.

ಸ್ಥಳೀಯವಾಗಿ ಪಕ್ಷದಲ್ಲಿ ಆಡಳಿತದ ಮೇಲೆ ಹಿಡಿತ ಇಲ್ಲವಾಗಿದೆ. ಸಿದ್ದರಾಮಯ್ಯ ಅವರೇ ಎಲ್ಲ ಕಡೆ ಓಡಾಡುತ್ತಿದ್ದಾರೆ. ಆದರೂ ಯಾವುದೂ ಬಗೆಹರಿಯುತ್ತಿಲ್ಲ. ತುರ್ತಾಗಿ ಪಕ್ಷವನ್ನು ಸಂಘಟಿಸಬೇಕಾದ ಅವಶ್ಯಕತೆ ಇದೆ. ಎಲ್ಲರೂ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ನೆರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರವು ಹಣವಿಲ್ಲವೆಂದು ಸುಮ್ಮನಾಗಬಾರದು. ಇರುವ ಆದಾಯ ಮೂಲಗಳಿಂದಲೇ ಕ್ರೂಢೀಕರಿಸಿಕೊಂಡು ಸಮಸ್ಯೆ ಬಗೆಹರಿಸಬೇಕು. ಮೊದಲು ಪರಿಹಾರ ವ್ಯವಸ್ಥೆ ಕಲ್ಪಿಸುವತ್ತ ಗಮನಹರಿಸಿ ಎಂದು ಹೇಳಿದರು.