'ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು' ಕಿರುಹೊತ್ತಿಗೆ ಬಿಡುಗಡೆ ಮಾಡಿದ SDPI

• ಬಿಜೆಪಿ ಸರ್ಕಾರದ ವಿರುದ್ಧ SDPI ಆಕ್ರೋಶ
• ಬೆಳಗಾವಿಯಲ್ಲಿ ಪುಸ್ತಕ ಬಿಡುಗಡೆ ಮಾಡಿದ SDPI ಮುಖಂಡ ಸಲೀಂ ಖಾನ್
• ಕೋಮುವಾದಿ ಬಿಜೆಪಿ ಸರ್ಕಾರ ಎಲ್ಲಾ ಆಯಾಮಗಳಲ್ಲಿ ವಿಫಲ ಎಂದು ಅಕ್ರೋಶ

SDPI Releases Book Titled Days of Anarchy of BJP Govt rbj

ಬೆಳಗಾವಿ, (ಜುಲೈ.08): ಬಿಜೆಪಿ ಸರ್ಕಾರದ ವಿರುದ್ಧ 'ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು' ಹೆಸರಿನಲ್ಲಿ 34 ಪುಟಗಳ ಕಿರುಹೊತ್ತಿಗೆಯನ್ನು ಎಸ್‌ಡಿಪಿಐ ಬಿಡುಗಡೆ ಮಾಡಿದೆ. 

ಬೆಳಗಾವಿಯಲ್ಲಿ ಇಂದು(ಶುಕ್ರವಾರ) ಸುದ್ದಿಗೋಷ್ಠಿ‌ ನಡೆಸಿದ ಎಸ್‌ಡಿಪಿಐ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಲೀಂ ಖಾನ್ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಲೀಂ ಖಾನ್ 'ಕೋಮುವಾದಿ ಬಿಜೆಪಿ ಸರ್ಕಾರ ಎಲ್ಲಾ ಆಯಾಮಗಳಲ್ಲಿ ವಿಫಲವಾಗಿದೆ. ಆಡಳಿತ, ಅಭಿವೃದ್ಧಿ ಎಲ್ಲಾ ವಿಚಾರಗಳಲ್ಲೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಮುಸಲ್ಮಾನ, ದಲಿತರು, ಕ್ರಿಶ್ಚಿಯನ್ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಕೋಮುಗಳ ಮಧ್ಯೆ ದ್ವೇಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಈ ಅರಾಜಕತೆ ವಿರುದ್ಧ ಸಣ್ಣ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದೇವೆ ಎಂದು ಕಿಡಿಕಾರಿದರು. 

ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದೇವೆ. ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಅರ್ಬಾಜ್ ಖಾನ್ ಹತ್ಯೆಯನ್ನು ಶ್ರೀರಾಮಸೇನೆ ಗೂಂಡಾಗಳು ಮಾಡಿದ್ದಾರೆ. ಗದಗದಲ್ಲಿ ಸಮೀರ್ ಹತ್ಯೆ ನಡೆದಿದೆ. ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಹರ್ಷ ಒಬ್ಬ ರೌಡಿಶೀಟರ್ ಆಗಿದ್ದ. ಖಾನಾಪುರದಲ್ಲಿ ನಡೆದ ಅರ್ಬಾಜ್ ಖಾನ್ ಕೊಲೆ ಕೇಸ್ NIAಗೆ ವಹಿಸಬೇಕು. ಸರ್ಕಾರ ತನ್ನ ಹಿಡನ್ ಅಜೆಂಡಾ ಜನರ ಎದುರು ತರುವ ಪ್ರಯತ್ನ ಮಾಡ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

'ಮೋದಿ ವರ್ಷ 8, ಅವಾಂತರಗಳು ನೂರೆಂಟು' ಕಿರುಹೊತ್ತಿಗೆ ಬಿಡುಗಡೆ ಮಾಡಿದ ಸಿದ್ದು

ಇದೇ ವೇಳೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಕೊಲೆ ಪ್ರಕರಣ ಏಕೆ ಖಂಡಿಸಲಿಲ್ಲ, ಏಕೆ ಪ್ರತಿಭಟನೆ ನಡೆಸಲಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಲೀಂ ಖಾನ್, 'ಕನ್ಹಯ್ಯಲಾಲ್ ಕೊಲೆ ಪ್ರಕರಣವನ್ನೂ ಸಹ ನಾವು ಖಂಡಿಸಿದ್ದೇವೆ. ಆಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದೇವೆ' ಎಂದು ಸ್ಪಷ್ಟನೆ ಕೊಟ್ಟರು.

SDPI ಬಿಡುಗಡೆ ಮಾಡಿದ ಕಿರುಹೊತ್ತಿಗೆಯಲ್ಲಿ ಏನಿದೆ?
ಎಸ್‌ಡಿಪಿಐ ಬಿಡುಗಡೆ ಮಾಡಿದ 'ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು ಪುಸ್ತಕದಲ್ಲಿ ಮೂರು ಅಧ್ಯಾಯಗಳನ್ನು ಪ್ರಕಟಿಸಿರುವ SDPI, 'ಶರಣತತ್ವದಿಂದ ಮನುವಾದದ ಕಡೆಗೆ ಬಸವರಾಜ ಬೊಮ್ಮಾಯಿ, ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿಯಂತೆ,'ಕರ್ನಾಟಕ ಫೈಲ್ಸ್' ಹೆಸರಿನಲ್ಲಿ ಮೂರು ಅಧ್ಯಾಯಗಳಿವೆ. ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಹೋಲಿಸಿ ಕರ್ನಾಟಕ ಫೈಲ್ಸ್ ಅಧ್ಯಾಯವಿದೆ‌‌. 

ಈ ಅಧ್ಯಾಯದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರದ ಅರ್ಬಾಜ್ ಖಾನ್ ಕೊಲೆ ಪ್ರಕರಣ, ಗದಗ ಜಿಲ್ಲೆ ನರಗುಂದದಲ್ಲಿ ಸಮೀರ್ ಕೊಲೆ ಪ್ರಕರಣ, ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ, ಧರ್ಮಸ್ಥಳದಲ್ಲಿ ದಿನೇಶ್ ಕನ್ಯಾಡಿ ಕೊಲೆ ಪ್ರಕರಣ, ಶ್ರೀರಂಗಪಟ್ಟಣದಲ್ಲಿ ನಡೆದ ಕೋಮುಗಲಭೆ ಸೇರಿ ವಿವಿಧ ಪ್ರಕರಣ ಉಲ್ಲೇಖಿಸಲಾಗಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆದಿತ್ತು.‌ ಇದನ್ನ ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ ಸೇಡಿಗೆ ಕರೆ ನೀಡಲಾಯಿತು ಎಂದು ಕಿರುಹೊತ್ತಿಗೆಯಲ್ಲಿ ಉಲ್ಲೇಖಿಸಲಾಗಿದೆ.

Latest Videos
Follow Us:
Download App:
  • android
  • ios