ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಎಂಬ ಕಾಂಗ್ರೆಸ್‌ ಭರವಸೆ ಉಲ್ಲೇಖಿಸಿ ರಾಜ್ಯದ ಕೆಲವೆಡೆ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. 

ಬೆಂಗಳೂರು (ಮೇ.26): ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಎಂಬ ಕಾಂಗ್ರೆಸ್‌ ಭರವಸೆ ಉಲ್ಲೇಖಿಸಿ ರಾಜ್ಯದ ಕೆಲವೆಡೆ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚದಂತೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ರಹಿತ ಪ್ರಯಾಣದ ಭರವಸೆಯನ್ನು ಕೂಡಲೇ ಜಾರಿಗೊಳಿಸುವಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟ ಒತ್ತಾಯಿಸಿದೆ. ಗುರುವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್‌ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿರುವುದರಿಂದ ಸಹಜವಾಗಿಯೇ ಮಹಿಳೆಯರು ಕೂಡಲೇ ಈ ಸೌಲಭ್ಯವನ್ನು ಬಯಸುತ್ತಿದ್ದಾರೆ. ಈ ಕುರಿತು ಕೆಲ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ನೀಡಿರುವ ಮಾಹಿತಿಯಂತೆ ಅನೇಕ ಕಡೆ ಮಹಿಳಾ ಪ್ರಯಾಣಿಕರು ಹಣ ಕೊಡದೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕೆಂದು ನಿರ್ವಾಹಕ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬಸ್ಸು ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಮಂತ್ರಿಮಂಡಲ ಪೂರ್ಣ ಭರ್ತಿಗೆ ನಿರ್ಧಾರ, 24 ಮಂದಿಗೆ ಸಚಿವ ಸ್ಥಾನ: ಪ್ರಭಾವಿ ಖಾತೆಗೆ ಸಿದ್ದು-ಡಿಕೆಶಿ ಪೈಪೋಟಿ

ಶೀಘ್ರದಲ್ಲಿಯೇ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು. ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ತೀರ್ಮಾನದಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಸೂಕ್ತ ಅಂದಾಜು ಮಾಡಿ ನಿಗಮಗಳಿಗೆ ವೆಚ್ಚದ ಮುಂಗಡವನ್ನು ಮಂಜೂರು ಮಾಡಬೇಕೆಂದು ಒಕ್ಕೂಟವು ಪತ್ರದಲ್ಲಿ ಒತ್ತಾಯಿಸಿದೆ.

ನಾವು ಕರೆಂಟ್‌ ಬಿಲ್‌ ಕಟ್ಟಲ್ಲ. ಬೇಕಿದ್ದರೆ ಸಿದ್ದು, ಡಿಕೆಶಿಯನ್ನೇ ಕರೆದುಕೊಂಡು ಬನ್ನಿ: ಪಟ್ಟು ಹಿಡಿದ ಮತ್ತೆರಡು ಹಳ್ಳಿ

ನೌಕರರ ಸಮಸ್ಯೆ ಏನು?
- ಚುನಾವಣೆ ಪೂರ್ವದಲ್ಲಿ ಮಹಿಳೆಯರಿಗೆ ಕಾಂಗ್ರೆಸ್‌ ಉಚಿತ ಪ್ರಯಾಣ ಭರವಸೆ ನೀಡಿತ್ತು
- ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದರಿಂದ ಮಹಿಳೆಯರು ಈ ಸೌಲಭ್ಯ ಬಯಸುತ್ತಿದ್ದಾರೆ
- ಹಲವೆಡೆ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಕ್ಕೆ ನಿರ್ವಾಹಕರಿಗೆ ಒತ್ತಡ ಹೇರುತ್ತಿದ್ದಾರೆ
- ಇದರಿಂದ ಬಸ್‌ ಪ್ರಯಾಣ ಸಂದರ್ಭ ಸಿಬ್ಬಂದಿ, ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿವೆ