ಸೆಪ್ಟೆಂಬರ್ ನಂತರ ರಾಜ್ಯ ರಾಜಕಾರಣದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಲಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಪ್ರಯತ್ನಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ನಾವು ಎಲ್ಲಿದ್ದೇವೆಯೋ ಅಲ್ಲಿಯೇ ಇದ್ದೇವೆ, ಪುಷ್ ಮಾಡೋರು ಯಾರೂ ಇಲ್ಲವೆಂದರು.

ಬೆಂಗಳೂರು (ಜೂ. 26): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹುದ್ದೆ ಸೇರಿದಂತೆ 'ನಾನು ಪಕ್ಷದ ಯಾವುದೇ ಹುದ್ದೆಗೆ ಪ್ರಯತ್ನವನ್ನೇ ಮಾಡಿಲ್ಲ. ನಾನು ಎಲ್ಲಿದ್ದೇನೋ ಅಲ್ಲಿಯೇ ಇದ್ದೇನೆ. ನಮ್ಮನ್ನು ಪುಷ್ ಮಾಡೋರು ಯಾರೂ ಇಲ್ಲ. ಸೆಪ್ಟಂಬರ್ ನಂತರ ರಾಜ್ಯ ರಾಜಕಾರಣದಲ್ಲಿ ಅತ್ಯಲ್ಪ ಬದಲಾವಣೆಯಾಗಲಿದೆ' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗಲಿದೆ, ಸಣ್ಣಪುಟ್ಟ ಬದಲಾವಣೆಗಳಾಗಲಿದೆ. ಹಾಗಂತ ಭಾರೀ ಬದಲಾವಣೆ ಯಾವುದೂ ಆಗೋದಿಲ್ಲ. ಸರ್ಕಾರದ ಮಟ್ಟದಲ್ಲಿ ಯಾವುದೇ ದೊಡ್ಡ ಬದಲಾವಣೆ ಆಗೋದಿಲ್ಲ. ಸಚಿವರ ಬದಲಾವಣೆ ಆಗಲಿದೆ. ಇನ್ನು ಜಲಸಂಪನ್ಮೂಲ ಇಲಾಖೆ ಮೇಲೆ ಶಾಸಕ ರಾಜು ಕಾಗೆ ಆರೋಪ ವಿಚಾರದ ಬಗ್ಗೆ ಮಾತನಾಡಿ, ಮೊದಲಿನಿಂದ ನೀರಾವರಿ ಸಮಸ್ಯೆ ಬಗ್ಗೆ ರಾಜು ಕಾಗೆ ಹೇಳುತ್ತಲೇ ಇದ್ದಾರೆ. ಇದು ಸಿಎಂ ಗಮನಕ್ಕೆ ಕೂಡ ಬಂದಿದೆ. ಈ ಬಗ್ಗೆ ಸಿಎಂ ಅವರು ಡಿಸಿಎಂ ಕರೆದು ಹೇಳ್ತಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಹಣವಿದೆ, ಹಣವಿಲ್ಲ ಅಂತ ಯಾರು ಹೇಳಿದ್ದು? ಬಾಕಿ ಬಿಲ್‌ಗಳು ಕೂಡ ಇದ್ದಾವೆ. ಸುಮಾರು 3 ವರ್ಷದಷ್ಟು ಬಿಲ್ ಬಾಕಿ ಇದ್ದೇ ಇರುತ್ತವೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪೈಪೋಟಿ ಕುರಿತು ಮಾತನಾಡಿ, 'ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡಿಸೇ ಇಲ್ಲ. ಪ್ರಯತ್ನ ನಡೆಸಿದ್ದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ ಅಲ್ಲೇ ಇದ್ದೇನೆ. ನಮ್ಮನ್ನ ಪುಶ್ ಮಾಡೋರು ಯಾರೂ ಇಲ್ವಲ್ಲಾ. ರಾಜಣ್ಣ ನಾವು ಹಾಗಾಗ್ಗೆ ಸೇರುತ್ತಾನೇ ಇರ್ತೇವೆ ಅಲ್ವಾ. ಹುಲಿ ಯಾವತ್ತಿದ್ರೂ ಹುಲಿನೇ, ವಯಸ್ಸಾದ್ರೂ ಹುಲಿ ಹುಲಿನೇ. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ನೋಡಿಕೊಂಡು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತಾ ಅನ್ನೋ‌ ಪ್ರಶ್ನೆ ಕುರಿತಂತೆ ಬಿಜೆಪಿ ಫಾರ್ಮುಲಾ ಬೇರೆ, ನಮ್ಮದು ಬೇರೆ. ಅವರ ಐಡಿಯಾಲಜಿ ಬೇರೆ, ನಮ್ಮದು ಬೇರೆ. ಬಿಜೆಪಿಗೂ ನಮಗೂ ವ್ಯತ್ಯಾಸ ಇದೆ ಎಂದರು.

ಸಿಎಂ, ಆಪ್ತ ಸಚಿವರ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಇದರಲ್ಲಿ ಏನೂ ಸಂದೇಶ ಇಲ್ಲ, ಸಿಎಂ ಜೊತೆ ದೆಹಲಿಗೆ ಹೋಗಿದ್ದೆವು ಅಷ್ಟೇ. ರಾಷ್ಟ್ರಪತಿಗಳನ್ನ ಭೇಟಿ ಮಾಡಿದ್ದೆವು, ಹೋದಾಗಲೆಲ್ಲಾ ವರಿಷ್ಠರನ್ನ ಭೇಟಿ ಮಾಡಿದ್ದೆವು. ಸಿಎಂ ಕೂಡ ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ನಾವು ಎಲ್ಲರನ್ನೂ ಜನರಲ್ ಆಗಿ ಭೇಟಿ ಮಾಡಿದೆವು. ದೆಹಲಿಗೆ ಹೋದಮೇಲೆ ಆ್ಯಕ್ಟೀವ್ ಆಗೋದು ಸ್ವಾಭಾವಿಕ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯುದ್ಧ ಇದ್ದಾಗ ಶಸ್ತ್ರವನ್ನ ಹಿಡಿಯಬೇಕು. ಯುದ್ಧ ಇಲ್ಲದೇ ಇರುವಾಗ ಶಸ್ತ್ರ ಹಿಡಿಯುವ ಅಗತ್ಯ ಇಲ್ಲ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಯಾರಿಗೆ ಏನು ಕೊಡಬೇಕು ಅಂತಾ ಹೈಕಮಾಂಡ್‌ಗೆ ಗೊತ್ತಿದೆ ಎಂದು ತಿಳಿಸಿದರು.

ಬಿ.ಆರ್. ಪಾಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಬಿ.ಆರ್. ಪಾಟೀಲ್ ಹೇಳಿಕೆ ವಿಷಯವೂ ದೆಹಲಿಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಯ್ಯ ಅವರೊಂದಿಗೆ ಮಾತನಾಡಿದ್ದಾರೆ. ಅನುದಾನ, ವರ್ಗಾವಣೆ ಅಂತಾ ಹೇಳೋಕೆ ಆಗೋದಿಲ್ಲ. ಕ್ಷೇತ್ರದಲ್ಲಿ ಬೇರೆ ಬೇರೆ ಇರುತ್ತದೆ. ರಾಜು ಕಾಗೆ ಅವರದ್ದು ಬೇರೆ ಬೇರೆ ಸಮಸ್ಯೆ ಇದೆ ಅಂತಾ ಹೇಳ್ತಾ ಇರ್ತಾರೆ. ಒಂದು ವರ್ಷದಿಂದ ನಮ್ಮ ಬಳಿಯೂ ಸಾಕಷ್ಟು ಹೇಳಿದ್ದಾರೆ. ಇದಕ್ಕೆಲ್ಲಾ ರಾಜೀನಾಮೆ ನೀಡುವ ಅಗತ್ಯವಿಲ್ಲ. ಮುಂದೆ ಸಿಎಂ ಸಿದ್ದರಾಮಯ್ಯ ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.