ನಾನ್ಯಾಕೆ ರಾಜೀನಾಮೆ ನೀಡಲಿ, ಆರೋಪಗಳಿಗೆ ಬಿಜೆಪಿಗರು ಸಾಕ್ಷಿ ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿಯವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು? ಅವರ ಆರೋಪಗಳಿಗೆ ಸಾಕ್ಷಿ, ಪುರಾವೆ ಕೊಡಬೇಕಲ್ಲವೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದರು.
ಬೆಂಗಳೂರು (ಡಿ.30): ಬಿಜೆಪಿಯವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು? ಅವರ ಆರೋಪಗಳಿಗೆ ಸಾಕ್ಷಿ, ಪುರಾವೆ ಕೊಡಬೇಕಲ್ಲವೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿನ್ ನನ್ನ ಆಪ್ತರು ಅನ್ನುವುದು ನಿಜ ಇರಬಹುದು. ಆದರೆ, ಅವರ ಸಾವಿಗೆ ನಾನೇ ಕಾರಣ ಎಂದು ಆರೋಪಿಸಿದರೆ ಹೇಗಾಗುತ್ತದೆ. ಬಿಜೆಪಿಯವರು ಹೆಣ ಬಿದ್ದಾಗ ರಾಜಕೀಯ ಮಾಡೋದನ್ನ ಮೊದಲು ಬಿಡಬೇಕು. ಅವರು ಏನು ಬೇಕಾದರೂ ಆರೋಪ ಮಾಡಬಹುದು. ಮಾಡಲಿ ಐದು ಜನರ ಹೆಸರಿದೆ. ಆ ಬಗ್ಗೆ ತನಿಖೆ ನಡೆಸಲಿ ಎಂದು ಹೇಳಿದರು.
ಈಶ್ವರಪ್ಪ ಮಾದರಿಯಲ್ಲಿ ರಾಜೀನಾಮೆಗೆ ಆಗ್ರಹಿಸಿರುವ ಬಗ್ಗೆ ಕೇಳಿದಾಗ, ನನಗೆ ನೈತಿಕತೆ ಇರೋದಕ್ಕೆ ಮಾಧ್ಯಮಗಳ ಮುಂದೆ ನಿಂತು ಪ್ರಕರಣ ತನಿಖೆ ಆಗಲಿ ಅಂತ ಹೇಳಿದ್ದೇನೆ. ಸತ್ಯಶೋಧನೆ ಅಂತ ಎಲ್ಲೆಡೆ ಓಡಾಡ್ತಿದ್ದಾರೆ. ಬಿಜೆಪಿಯವರು ಇಂಡಿಪೆಂಡೆಂಟ್ ಸಂಸ್ಥೆಯಾಗಿ ತನಿಖೆ ಮಾಡುತ್ತಿದ್ದಾರಾ? ಇದುವರೆಗೂ ಏನಾದರೂ ಸಾಕ್ಷ್ಯ ನೀಡಿದ್ದಾರಾ ತೋರಿಸಲಿ ಎಂದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಒಂದು ಸಲಹೆ ಕೊಡುತ್ತೇನೆ. ನನ್ನ ಬಗ್ಗೆ ಆರೋಪಿಸುವ ಮೊದಲು ನಿಮ್ಮ ಕಲಬುರಗಿ ನಾಯಕರ ಬಗ್ಗೆ ತಿಳಿದುಕೊಂಡು ಬನ್ನಿ. ಇಲ್ಲದಿದ್ದರೆ ನಿಮ್ಮ ಕುರ್ಚಿಗೆ ಜನ ಗೌರವ ಕೊಡಲ್ಲ. ನಾವು ಮೂರು ಬಾರಿ ಸಚಿವನಾಗಿದ್ದೇನೆ. ಒಂದು ರೂಪಾಯಿ ಭ್ರಷ್ಟಾಚಾರ ನನ್ನ ಅವಧಿಯಲ್ಲಿ ಮಾಡಿಲ್ಲ. ನಾನು ಆರೆಸ್ಸೆಸ್ ಹಾಗೂ ಬಿಜೆಪಿ ಸಿದ್ದಾಂತದ ವಿರೋಧಿ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡಿದ್ದೀರಿ. ಐಟಿ, ಇಡಿ, ಅಮಿತ್ ಶಾ ಅವರನ್ನ ಬಿಟ್ರೂ ನಾನು ಹೆದರೋದಿಲ್ಲ. ನಮ್ಮ ತಂದೆ ಕೂಡ ಅದೇ ರೀತಿ ರಾಜಕೀಯದಲ್ಲಿ ಸಾಗಿ ಬಂದವರು ಎಂದು ಸವಾಲು ಹಾಕಿದರು.
ವೈಯಕ್ತಿಕ ವಿಷಯಕ್ಕೆ ಸಚಿನ್ ಪಂಚಾಳ ಸತ್ತಿದ್ದಾನೆ: ಸಚಿವ ಪ್ರಿಯಾಂಕ್ ಖರ್ಗೆ
ಸಿಎಂಗೆ ಪ್ರಿಯಾಂಕ್ ವಿವರಣೆ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಉರುಳುಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ, ಪ್ರತಿಪಕ್ಷ ಬಿಜೆಪಿಯವರು ಅನಗತ್ಯವಾಗಿ ನನ್ನನ್ನು ಗುರಿಯಾಗಿಸಿ ಹೋರಾಟ, ತನಿಖೆಗೆ ಆಗ್ರಹಿಸುತ್ತಿದ್ದಾರೆ. ಅಗತ್ಯವೆನಿಸಿದರೆ ತಾವು ಯಾವುದೇ ತನಿಖೆಗೆ ನೀಡಿ. ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ ಎಂಬ ಸ್ಪಷ್ಟನೆ ನೀಡಿದರು ಎಂದು ಮೂಲಗಳು ತಿಳಿಸಿವೆ.