ಮಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಕರ್ನಾಟಕದಲ್ಲಿ ಈ ಬಾರಿ 25 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿಗೆ ಆರೆಸ್ಸೆಸ್‌ ಸ್ಪಷ್ಟಸೂಚನೆ ರವಾನಿಸಿದೆ.

ಮಂಗಳೂರಿನ ಸಂಘನಿಕೇತನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಆರೆಸ್ಸೆಸ್‌ನ ಅಖಿಲ ಭಾರತ ಮಟ್ಟದ ದಕ್ಷಿಣ ಭಾರತದ ರಾಜ್ಯಗಳ ವಿಶೇಷ ವರ್ಗದ ಸಮಾರೋಪದಲ್ಲಿ ಗುರುವಾರ ಈ ಸೂಚನೆ ರವಾನಿಸಲಾಯಿತು. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಆರೆಸ್ಸೆಸ್‌ನ ಆಯ್ದ ಪ್ರಮುಖ ಮುಖಂಡರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ತಯಾರಿ ಹಾಗೂ ಶಬರಿಮಲೆ ವಿವಾದವನ್ನು ಮುಂದಿಟ್ಟುಕೊಂಡು ದಕ್ಷಿಣ ಭಾರತದಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ಜತೆಗೆ, ಶಬರಿಮಲೆ ಹೋರಾಟ ಹಾಗೂ ರಾಮಮಂದಿರ ನಿರ್ಮಾಣ ವಿಚಾರ ಕೂಡ ಈ ಸಭೆಯಲ್ಲಿ ಪ್ರಸ್ತಾಪವಾಯಿತು.

ಸಂಸತ್‌ ಚುನಾವಣೆ ಗೆಲ್ಲುವ ದಿಕ್ಸೂಚಿ:  2019ರ ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಏರಬೇಕು. ಇದಕ್ಕೆ ಪೂರಕವಾದ ಸ್ಥಳೀಯ ವಿಚಾರಗಳನ್ನು ಸಾಧ್ಯವಾದಷ್ಟುಜನಾಂದೋಲನ ಮಾದರಿಯಲ್ಲಿ ಕೈಗೆತ್ತಿಕೊಳ್ಳಬೇಕು. ದೇಶದಲ್ಲಿ ಪ್ರತಿಪಕ್ಷಗಳು ಮಹಾಗಠಬಂಧನ್‌ಗೆ ಪ್ರಯತ್ನ ನಡೆಸುತ್ತಿವೆ. ಈ ಮೈತ್ರಿಯನ್ನು ಬಿಜೆಪಿ ಲಘುವಾಗಿ ಪರಿಗಣಿಸಬಾರದು. ಏಕಾಂಗಿಯಾಗಿ ಹೋರಾಟ ನಡೆಸಿ ಗೆಲುವು ಪಡೆಯುವ ತಂತ್ರಗಾರಿಕೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು. ಹೀಗಾದಲ್ಲಿ ಮುಂದೆ ಬಿಜೆಪಿ ಸಂಘಟನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿಯು 18 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯ ನಡುವೆಯೂ ರಾಜ್ಯದಲ್ಲಿ 25 ಸ್ಥಾನಗಳನ್ನಾದರೂ ಗೆಲ್ಲುವ ಗುರಿ ಇಟ್ಟುಕೊಂಡು ಪಕ್ಷ ಶಕ್ತಿಮೀರಿ ಶ್ರಮಿಸಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಪ್ರಚಾರ, ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸಬೇಕು. ಪಕ್ಷದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿರುವ ರಾಜ್ಯ ನಾಯಕರ ನಡುವಿನ ಮನಸ್ತಾಪಗಳನ್ನು ಸರಿಪಡಿಸಲು ಆದ್ಯತೆ ಮೇಲೆ ಶ್ರಮಿಸಬೇಕು. ಅಗತ್ಯಬಿದ್ದರೆ ನಾಯಕತ್ವದಲ್ಲಿ ಬದಲಾವಣೆ ಮಾಡಿಯಾದರೂ ಈ ವಿಚಾರಕ್ಕೆ ಸಂಬಂಧಿಸಿ ಸೂಕ್ತ ಸಂದೇಶ ರವಾನಿಸಬೇಕು. ಪಕ್ಷದ ಹಿತದೃಷ್ಟಿಯಿಂದ ಈ ವಿಚಾರದಲ್ಲಿ ತುರ್ತು ಕ್ರಮಕೈಗೊಳ್ಳಲು ಯಾವುದೇ ಹಿಂದೇಟು ಹಾಕದಂತೆ ಅಮಿತ್‌ ಶಾ ಅವರಿಗೆ ಆರೆಸ್ಸೆಸ್‌ ಮುಖಂಡರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನಿವಾರ್ಯವಾದರೆ ಬದಲಾವಣೆ:

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ತಿಣುಕಾಡಿ ಗೆದ್ದಿದೆ. ಬಳ್ಳಾರಿಯಲ್ಲಿ ಬಿಜೆಪಿ ಸೋಲಾಗಿದೆ. ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದು ಪಕ್ಷಕ್ಕೆ ಮುಜುಗರವಾದ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು ಎಂದು ಹೇಳಲಾಗಿದೆ. 

ಇಂತಹ ತಪ್ಪುಗಳು ಭವಿಷ್ಯದಲ್ಲಿ ನಡೆಯದಂತೆ ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಜತೆಗೆ, ಅನಿವಾರ್ಯ ಎನಿಸಿದರೆ, ರಾಜ್ಯ ಬಿಜೆಪಿಯಲ್ಲೂ ಪದಾಧಿಕಾರಿಗಳ ಬದಲಾವಣೆ ಮಾಡಬಹುದು. ಆದರೆ ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಈ ಬದಲಾವಣೆಯಿಂದ ಆಗಬಹುದಾದ ಲಾಭ-ನಷ್ಟಗಳನ್ನು ಗಮನದಲ್ಲಿರಿಸಿಕೊಂಡೇ ಈ ಕುರಿತು ಮುಂದಡಿಯಿಡಬೇಕು ಎಂದು ಅಮಿತ್‌ ಶಾ ಅವರಿಗೆ ಸಲಹೆ ನೀಡಲಾಗಿದೆ.

ಗುರುವಾರ ಬೆಳಗ್ಗೆ 9ರಿಂದ 10ರವರೆಗೆ ಸುಮಾರು ಒಂದು ಗಂಟೆ ಕಾಲ ಸಂಘನಿಕೇತನದಲ್ಲಿ ನಡೆದ ಚರ್ಚೆಯಲ್ಲಿ 2019ರ ಲೋಕಸಭಾ ಚುನಾವಣೆ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬಂತು. ಆರೆಸ್ಸೆಸ್‌ ಸರಕಾರ್ಯವಾಹ ಸುರೇಶ್‌ ಭಯ್ಯಾಜಿ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮಿತ್‌ ಶಾ ಮಾತ್ರವಲ್ಲದೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್‌, ಸಹಸಂಘಟನಾ ಕಾರ್ಯದರ್ಶಿ ಸಂತೋಷ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಭಾಗವಹಿಸಿದ್ದರು. 

ಬುಧವಾರ ರಾತ್ರಿ ವಿಶೇಷ ವಿಮಾನದಲ್ಲಿ ಆಗಮಿಸಿ ಆರೆಸ್ಸೆಸ್‌ ಸಭೆಯಲ್ಲಿ ಪಾಲ್ಗೊಂಡಿದ್ದ ಶಾ ಅವರು ಸಭೆಯಲ್ಲಿ ಚರ್ಚೆಯಾದ ವಿಚಾರಗಳು, ವ್ಯಕ್ತವಾದ ಸಲಹೆ ಸೂಚನೆಗಳ ಕುರಿತು ಪ್ರಧಾನಿ ಮೋದಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.