ರಾಯಚೂರು[ಫೆ.14]: ಸಿಎಎ, ಎನ್‌ಆರ್‌ಸಿ ಕಾಯ್ದೆಗಳಿಂದ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಅಜೆಂಡಾ ಏನಿತ್ತೋ ಅದು ದೆಹಲಿಯಲ್ಲಿ ಬಿಜೆಪಿಗೆ ತಿರುಗುಬಾಣವಾಗಿದೆ. ರೈತರ, ನಿರುದ್ಯೋಗಿಗಳ ಸಮಸ್ಯೆಗಳ ಬಗ್ಗೆ ಮೋದಿಗೆ ಇದೀಗ ಜ್ಞಾನೋದಯವಾಗಿದೆ. ಸಿಎಎ ಬಗ್ಗೆ ಇಡೀ ದಿನ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.

ಹಿರಿಯ ಅಧಿಕಾರಿಗಳಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಅದನ್ನು ಹತೋಟಿಗೆ ತರಲು ಆಗುತ್ತಿಲ್ಲವೆಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಅದೇ ಪಕ್ಷದ ಒಂದು ಗುಂಪು ಈ ಕುರಿತು ಹೈಕಮಾಂಡ್‌ಗೆ ದೂರು ಕೊಟ್ಟಿದೆ. ಇದರ ಬಗ್ಗೆ ನಾನೇನು ಮಾತನಾಡಲಾರೆ ಎಂದು ಹೇಳಿದರು.

ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಐದು ಸ್ಥಾನ ಹೆಚ್ಚಾಗಿದ್ದರೂ ಶೇಕಡಾವಾರು ಮತದಾನದಲ್ಲಿ ಕುಸಿತ ಕಂಡಿದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ನಾಯಕತ್ವದಲ್ಲೇ ಚುನಾವಣೆ ನಡೆದು, 40 ಜನ ಸ್ಟಾರ್‌ಗಳು ಪ್ರಚಾರ ಮಾಡಿದರೂ ಸಹ ಕಳೆದ ಮೂರು ಚುನಾವಣೆಗಳಲ್ಲಿ ಆ ಪಕ್ಷ ಸೋಲು ಕಂಡಿದೆ ಎಂದು ಹೇಳಿದರು.

ದೆಹಲಿಯಲ್ಲಿ ಕೇಜ್ರಿವಾಲ್‌ ಜಾತಿ ಆಧಾರದ ಮೇಲೆ ಗೆದ್ದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಗದ್ದುಗೆ ಹಿಡಿದಿದ್ದಾರೆ. ಜನರಲ್ಲಿ ಅರಿವು ಬರುತ್ತಿದೆ. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ಕುರಿತು ಏನನ್ನೂ ಮಾತನಾಡುವುದಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಚುನಾವಣೆಗಳಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಜಾತ್ಯತೀತ ಪಕ್ಷವೆಂದು ಹೇಳುವುದಿಲ್ಲ ಎಂದು ಹೇಳಿದರು.