ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ: ಸಿದ್ದರಾಮಯ್ಯ
ಸಮಾಜದಲ್ಲಿನ ವೈರುಧ್ಯಗಳು, ಜಾತೀಯತೆ, ಅಸಮಾನತೆಗಳು ತೊಲಗಿದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರು (ಡಿ.31): ಸಮಾಜದಲ್ಲಿನ ವೈರುಧ್ಯಗಳು, ಜಾತೀಯತೆ, ಅಸಮಾನತೆಗಳು ತೊಲಗಿದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ‘ನಿಡುಮಾಮಿಡಿ ಶ್ರೀ ಪೀಠಾರೋಹಣ-33’ ಸಮಾರಂಭದಲ್ಲಿ ‘ಹೋರಾಟಕ್ಕೆ ಸಾವಿಲ್ಲ’ ಮತ್ತು ‘ಓಲೆ ಒಳಧ್ವನಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಸಮಾಜ ನಿರ್ಮಾಣವಾಗಲು ಅಸಮಾನತೆ ತೊಲಗಲೇಬೇಕು. ಮನುಷ್ಯನ ಸ್ವಾರ್ಥದಿಂದ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿ ಕಾರ್ಯನಿರ್ವಹಿಸುವುದು ಎಲ್ಲರ ಜವಾಬ್ದಾರಿ. ಸಂವಿಧಾನ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸಂವಿಧಾನದ ಆಶಯಗಳನ್ನು ಈಡೇರಿಸಲು ದುರ್ಬಲ ವರ್ಗದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಅಯೋಧ್ಯೆಗೆ ಬಂದು ಪ್ರಾಯಶ್ಚಿತ್ತ ಮಾಡಿಕೊಳ್ಳಿ: ಕಾಂಗ್ರೆಸ್ ನಾಯಕರಿಗೆ ಸುನಿಲ್ ಕುಮಾರ್ ಸಲಹೆ
ಮನುಷ್ಯತ್ವ ಅಂತಿಮ ಗುರಿಯಾಗಬೇಕು. ಅಲ್ಪಮಾನವರಾಗದೇ, ವಿಶ್ವಮಾನವರಾಗುವತ್ತ ನಮ್ಮೆಲ್ಲರ ಪ್ರಯತ್ನವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಚಲನೆ ಉಂಟಾಗುತ್ತದೆ. ಸಮಾಜದಲ್ಲಿ ಬದಲಾವಣೆ ಆಗುವವರೆಗೂ ಹೋರಾಟ ನಡೆಸುವ ಗುರಿಯಿಂದಲೇ ‘ಹೋರಾಟಕ್ಕೆ ಸಾವಿಲ್ಲ’ ಎಂಬ ಕೃತಿಯನ್ನು ಹೊರತರಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವನ್ನು ಹತ್ತಿಕ್ಕಬಾರದು. ಆದರೆ ಹೋರಾಟಗಳು ಅಹಿಂಸಾತ್ಮಕವಾಗಿರಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ನಿಡುಮಾಮಿಡಿ ಮಠದಿಂದ ಧಾರ್ಮಿಕ ಚಟುವಟಿಕೆಗಳು, ಶಿಕ್ಷಣ ಸಂಸ್ಥೆಗಳು ನಡೆಯುತ್ತವೆ. ಶ್ರೀ ಮಠವು ಯಾವುದೇ ಜಾತಿ, ಧರ್ಮ, ಸಂಸ್ಕೃತಿಗಳಿಗೆ ಮೀಸಲಾಗದ ಜಾತ್ಯತೀತವಾದ ಮಾನವ ಧರ್ಮ ಪೀಠ ಎನಿಸಿದೆ. ಸ್ವಾಮೀಜಿಗಳು ನಿರ್ಭಿತಿಯಿಂದ ನಿಷ್ಕಲ್ಮಶವಾಗಿ ಜಾತ್ಯತೀತ, ಮಾನವೀಯ ಸಮಾಜ ಸ್ಥಾಪನೆಯಾಗಬೇಕೆಂಬ ಆಶಯವನ್ನು ಹೊಂದಿದ್ದು, ತಮ್ಮ ಜೀವನದುದ್ದಕ್ಕೂ ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಮಾನವ ಧರ್ಮ ಸ್ಥಾಪಿಸುವ ಶ್ರೀಮಠದ ಗುರಿ ಈಡೇರಿಕೆಗೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಯೋಗ್ಯ ಅಭ್ಯರ್ಥಿ: ಸಚಿವ ಮಂಕಾಳ ವೈದ್ಯ
ವಿಮರ್ಶಕ ಡಾ.ನಟರಾಜ ಹುಳಿಯಾರ್ ಮಾತನಾಡಿ, ಕರ್ನಾಟಕದ ಸಾಮಾಜಿಕ ವಾತಾವರಣ ಬದಲಾಗಿದೆ. ಸಾಂಸ್ಕೃತಿಕ ವಾತಾವರಣವೂ ಬದಲಾಗುತ್ತಿದೆ. ಇಲ್ಲಿ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಪ್ರಗತಿಪರ ವ್ಯಕ್ತಿಗಳು ನೆಮ್ಮದಿಯಿಂದ ಬಾಳುವ ಮಾಡುವ, ಚಿಂತನೆ ಮಾಡುವ ಕಾಲ ನಿಧಾನವಾಗಿ ಸೃಷ್ಟಿಯಾಗುತ್ತಿದೆ. ಆ ಕಾಲ ಸೃಷ್ಟಿಯಾಗುವುದಕ್ಕೆ ಅನೇಕ ರಾಜಕೀಯ ಪಕ್ಷಗಳು, ಸಂಘಟನೆಗಳು ಹೇಗೆ ಕಾರಣವೋ ಹಾಗೆಯೇ ಮಾನವಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಕೂಡ ತಮ್ಮ ಕಾಣಿಕೆಯನ್ನು ಕೊಟ್ಟಿದ್ದಾರೆ ಎಂದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಚಿಂತಕ ರಂಜಾನ್ ದರ್ಗಾ, ಕಲಬುರಗಿ ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.