ಬೆಂಗಳೂರು (ಫೆ. 12): ಯಾವುದೇ ರಾಜ್ಯದಲ್ಲಿ ಮೀಸಲಾತಿ ಕೂಗು ಹೋರಾಟದ ಸ್ವರೂಪ ಪಡೆದಿದೆ ಎಂದರೆ ಚುನಾವಣೆ ಬರುತ್ತಿದೆ, ತೆರೆಮರೆಯ ತಯಾರಿ ಆರಂಭವಾಗಿದೆ ಎಂದು ಅರ್ಥ. ಗುಜರಾತ್‌ನ ಪಾಟಿದಾರರ ಪ್ರತಿಭಟನೆ, ಹರ್ಯಾಣದ ಜಾಟರ ಆಂದೋಲನ ಮತ್ತು ಮಹಾರಾಷ್ಟ್ರದ ಮರಾಠರ ಚಳವಳಿ ಎಲ್ಲವೂ ನಡೆದಿದ್ದು ಅಲ್ಲಿನ ಸ್ಥಳೀಯ ಚುನಾವಣೆಗಳಿಗಿಂತ ಮುಂಚೆ. ಆದರೆ ನಂತರ ಎಲ್ಲವೂ ತಣ್ಣಗೆ. ಈಗ ರಾಜ್ಯದಲ್ಲಿ ಪಂಚಮಸಾಲಿ ಮತ್ತು ಕುರುಬರ ಆಂದೋಲನಗಳು ಆರಂಭವಾಗಿವೆ.

ಮೊದಲನೆಯದು ಲಿಂಗಾಯತರ ವೋಟ್‌ ಬ್ಯಾಂಕ್‌ ಒಡೆದು ಯಡಿಯೂರಪ್ಪ ಅವರ ಪ್ರಾಬಲ್ಯ ತಪ್ಪಿಸಲು ನಡೆಯುತ್ತಿರುವ ಆಂದೋಲನ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಎರಡನೆಯದು ಸಿದ್ದರಾಮಯ್ಯ ಅವರಿಂದ ಕುರುಬರ ನೇತೃತ್ವ ಕಸಿದುಕೊಳ್ಳಲು ನಡೆಯುತ್ತಿರುವ ಪ್ರಯತ್ನ ಎಂಬ ವ್ಯಾಖ್ಯಾನಗಳಿವೆ. 2004ರಿಂದ ಈಚೆಗೆ ರಾಜ್ಯ ರಾಜಕಾರಣ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಸುತ್ತ ಸುತ್ತುತ್ತಿದೆ. ಇವತ್ತಿನ ಮಟ್ಟಿಗೆ ಪೂರ್ತಿ ಲಿಂಗಾಯತ ಸಮುದಾಯ ಒಟ್ಟಿಗೆ ಬಂದು ಬಿಜೆಪಿ ಮತ್ತು ಯಡಿಯೂರಪ್ಪನವರಿಗೆ ಲಾಭವಾಗಿದ್ದು, ಒಂದು ವೇಳೆ ಪಂಚಮಸಾಲಿಗಳು ಈಗ ಬೇರ್ಪಟ್ಟರೆ ನಷ್ಟನೇರವಾಗಿ ಬಿಜೆಪಿಗೇ ಎಂಬ ಮಾತುಗಳಿವೆ.

ಇನ್ನು ಕುರುಬರು, ಮುಸ್ಲಿಮರು, ದಲಿತ ಬಲಗೈ ಕಾಂಗ್ರೆಸ್‌ನ ಕಟ್ಟಾವೋಟ್‌ಬ್ಯಾಂಕ್‌. ಇದರಲ್ಲಿ ಕುರುಬರ ಅರ್ಧದಷ್ಟುವೋಟ್‌ ಬ್ಯಾಂಕ್‌ ಅಲ್ಲಾಡಿಸಿದರೂ ಸಾಕು ಸಿದ್ದು ನೇತೃತ್ವ ದುರ್ಬಲ ಆಗುತ್ತದೆ. ಅಷ್ಟೇ ಅಲ್ಲ, ಸ್ವಲ್ಪ ಲಿಂಗಾಯತರು ವಿಭಜನೆಗೊಂಡರೆ ಬಿಜೆಪಿಗೆ ಕುರುಬರು ನಷ್ಟತುಂಬಿಸಿಕೊಡಬಲ್ಲರು. ಆದರೆ ಇದೆಲ್ಲ ಅಂದುಕೊಂಡಷ್ಟುಸುಲಭ ಅಲ್ಲ. ಜಾತಿ ಮತ್ತು ಮೀಸಲಾತಿ ಎರಡು ಅಲಗಿನ ಕತ್ತಿ ಇದ್ದ ಹಾಗೆ. ಒಮ್ಮೊಮ್ಮೆ ಉಪಯೋಗಿಸುವ ಕೈಗಳನ್ನೇ ಕಡಿದು ಬಿಡುವ ಅಪಾಯವಿದೆ.

ಕುರುಬರ ಕಡೆ ಬಿಜೆಪಿ ದೃಷ್ಟಿ

ಕಾಗಿನೆಲೆ ಶ್ರೀಗಳು ಆಂದೋಲನ ಆರಂಭಿಸುವ ಮುನ್ನ ಸಿದ್ದರಾಮಯ್ಯರನ್ನು ನೋಡಲು ಹೋಗಿದ್ದರಂತೆ. ಆದರೆ ಇದೆಲ್ಲ ಆಗೋಲ್ಲ ಹೋಗೋಲ್ಲ ಬೇಡ ಎಂದು ಸಿದ್ದು ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ಶ್ರೀಗಳು ಈಶ್ವರಪ್ಪ ಬಳಿ ಹೋದಾಗ ಭರಪೂರ ಸ್ಪಂದನೆ ಸಿಕ್ಕಿದೆಯಂತೆ. ಇನ್ನು ದಿಲ್ಲಿಗೆ ಶ್ರೀಗಳು ಈಶ್ವರಪ್ಪ ಜೊತೆ ಹೋದಾಗ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಾವೇ ಮನೆಯಲ್ಲಿ ಊಟ ಹಾಕಿಸಿ ಆದಿವಾಸಿ ಮಂತ್ರಿಗಳ ಬಳಿ ಕರೆದುಕೊಂಡು ಹೋಗಿದ್ದಾರೆ ಎಂದು ದೆಹಲಿಯಲ್ಲಿ ಸುದ್ದಿಗಳಿವೆ. ಜೊತೆಗೆ ಆದಿವಾಸಿ ಇಲಾಖೆಯಿಂದ ನಿಮ್ಮ ಬೇಡಿಕೆ ಪರಿಶೀಲಿಸುತ್ತೇವೆ ಎಂಬ ಪತ್ರವೂ ಬಂದಿದ್ದು, ಶ್ರೀಗಳ ಉತ್ಸಾಹ ಹೆಚ್ಚಿಸಿದೆ.

ಅಷ್ಟಕ್ಕೇ ನಿಲ್ಲದೆ, ಕಾಗಿನೆಲೆ ಶ್ರೀಗಳ ಬಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಹೋಗಿ ಒಂದು ಗಂಟೆ ಮಾತನಾಡಿ ಬಂದಿದ್ದಾರೆ ಎನ್ನಲಾಗಿದೆ. ಶ್ರೀಗಳ ಪಾದಯಾತ್ರೆಗೆ ಹೋಗಿ ಆರ್‌ಎಸ್‌ಎಸ್‌ ನಿಯೋಗವೊಂದು ಕೂಡ ಮಾತಾಡಿಸಿಕೊಂಡು ಬಂದಿದೆ. ಸುಮಾರು ವರ್ಷಗಳ ಹಿಂದೆ ಕುರುಬರ ಸಂಘದ ಮುಖಂಡರು ಇದೇ ಬೇಡಿಕೆ ಇಟ್ಟುಕೊಂಡು ಅನಂತ ಕುಮಾರ್‌ ಬಳಿಗೆ ದಿಲ್ಲಿಗೆ ಬಂದಿದ್ದರು. ಎಲ್ಲ ಕೇಳಿಸಿಕೊಂಡ ಅನಂತಕುಮಾರ್‌, ‘ನೋಡಿ ನಿಮ್ಮ ಬೇಡಿಕೆ ಒಪ್ಪಿದರೆ ವಾಲ್ಮೀಕಿ ನಾಯಕರು ಬೀದಿಗಿಳಿಯುತ್ತಾರೆ. 15 ಶೇಕಡಾ ಮೀಸಲಾತಿ ಇದೆ, ಅಲ್ಲೇ ಇರಿ’ ಎಂದು ಹೇಳಿ ಕಳುಹಿಸಿದ್ದರಂತೆ. ಆದರೆ ಈಗ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿಗಳಿಗೆ ಸ್ವಲ್ಪ ಆಸಕ್ತಿ ಇದ್ದ ಹಾಗೆ ಕಾಣುತ್ತಿದೆ.

ಅಮಿತ್‌ ಶಾ ವಾರ್ನಿಂಗ್‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎದುರು ನಡೆದಿದ್ದ ಕೋರ್‌ ಕಮಿಟಿ ಸಭೆಯಲ್ಲಿ ಸಿ.ಟಿ.ರವಿ ಕುರುಬರ ಮತ್ತು ಪಂಚಮಸಾಲಿ ಹೋರಾಟ ಪ್ರಸ್ತಾಪಿಸಿ, ‘ಈಶ್ವರಪ್ಪ ನೇರವಾಗಿ ಕುರುಬರ ಸಭೆಗೆ ಹೋಗ್ತಾರೆ, ನಿರಾಣಿ, ಯತ್ನಾಳ್‌, ಸಿ.ಸಿ.ಪಾಟೀಲ, ಬೆಲ್ಲದ ಕಾಣಿಸಿಕೊಳ್ತಾರೆ. ನಮ್ಮ ಪಾರ್ಟಿ ನಿಲುವು ಏನು?’ ಎಂದು ಕೇಳಿದ್ದರು. ಆಗ ಖಾರವಾಗಿಯೇ ಮಾತಾಡಿದ ಅಮಿತ್‌ ಶಾ, ‘ಮೌನವಾಗಿ ಇರಿ. ಏನೇ ಕೇಳಿದರೂ ದಿಲ್ಲಿ ಹೆಸರು ಹೇಳಿ. ನಾವು ಸೂಚನೆ ಕೊಡದೇ ಒಂದು ಹೆಜ್ಜೆ ಆಚೀಚೆ ಇಡಬೇಡಿ’ ಎಂದು ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರಿಗೂ ಹೇಳಿದ್ದರಂತೆ.

ಅಮಿತ್‌ ಶಾ ಮತ್ತು ನಡ್ಡಾ ರಾಜ್ಯದ ಹಿರಿಯ ಆರ್‌ಎಸ್‌ಎಸ್‌ ಪ್ರಚಾರಕ ಮುಕುಂದ ಅವರಿಂದ ಪೂರ್ತಿ ಜಾತಿ ಸಾಧಕ-ಬಾಧಕಗಳ ವರದಿ ತೆಗೆದುಕೊಂಡಿದ್ದಾರಂತೆ. ಆದರೆ ಈ ಮೀಸಲಾತಿ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಂಘ ಮತ್ತು ಬಿಜೆಪಿ ಹೈಕಮಾಂಡ್‌ ಇಬ್ಬರಲ್ಲೂ ಬಹಳ ಹಿಂಜರಿಕೆ ಇದೆ.

ಪಂಚಮಸಾಲಿಗಳ ಬೇಡಿಕೆ

ಕುರುಬರ ಬೇಡಿಕೆ ಯಡಿಯೂರಪ್ಪನವರಿಗೆ ದೊಡ್ಡ ಸಮಸ್ಯೆ ಅಲ್ಲ. ಏಕೆಂದರೆ ಹೇಗೂ ಕುರುಬರು ಯಡಿಯೂರಪ್ಪನವರ ವೋಟ್‌ಬ್ಯಾಂಕ್‌ ಅಲ್ಲ. ಆದರೆ ಲಿಂಗಾಯತರಲ್ಲಿ ಒಟ್ಟು ಶೇ.40ರಷ್ಟುಇರುವ ಪಂಚಮಸಾಲಿಗಳನ್ನು ಸಮಾಧಾನ ಮಾಡುವುದು ದೊಡ್ಡ ತಲೆನೋವಿನ ಕೆಲಸ. ಪಂಚಮಸಾಲಿಗಳು ಮುನಿಸಿಕೊಂಡರೆ ಯಡಿಯೂರಪ್ಪಗೆ ಕಷ್ಟವಾಗಬಹುದು. ಕುರುಬರ ಬೇಡಿಕೆಯೋ ಕೇಂದ್ರ ನಿರ್ಧಾರ ಮಾಡಬೇಕು. ಆದರೆ ಪಂಚಮಸಾಲಿಗಳನ್ನು 2ಎ ಗೆ ಸೇರಿಸುವುದು ಯಡಿಯೂರಪ್ಪನವರೇ ತೆಗೆದುಕೊಳ್ಳಬೇಕಾದ ನಿರ್ಧಾರ.

ವೋಟ್‌ ಬ್ಯಾಂಕ್‌ ಒತ್ತಡಕ್ಕೆ ಏನಾದರೂ ಮಾಡಲು ಹೋದರೆ ಬಣಜಿಗರು, ಗಾಣಿಗರು, ಸಾದರು ಮುನಿಸಿಕೊಳ್ಳುವುದು ಒಂದು ಕಡೆಯಾದರೆ, ಇತರ ಕಾಯಕ ಸಮುದಾಯಗಳ ವಿರೋಧದ ಭೀತಿ ಇನ್ನೊಂದು ಕಡೆ. ಪಂಚಮಸಾಲಿ ಸ್ವಾಮೀಜಿಗಳಲ್ಲಿ ಶ್ರೀ ಜಯಮೃತ್ಯುಂಜಯರು ಕಾಂಗ್ರೆಸ್‌ ಹೈಕಮಾಂಡ್‌ಗೆ ಆತ್ಮೀಯರು ಮತ್ತು ಶ್ರೀ ವಚನಾನಂದರು ಬಿಜೆಪಿ ಹೈಕಮಾಂಡ್‌ ಗೆ ಹತ್ತಿರದವರು. ಸಾಲದ್ದಕ್ಕೆ ಈ ಹೋರಾಟಕ್ಕೆ ಈಗ ಯಡಿಯೂರಪ್ಪನವರ ಬಳಿ ಮುನಿಸಿಕೊಂಡಿರುವ ಯತ್ನಾಳ್‌, ನಿರಾಣಿ, ಅರವಿಂದ, ಬೆಲ್ಲದ ಬೆಂಬಲವಿದೆ. ಸದ್ಯಕ್ಕೆ ಇದು ಅತ್ಯಂತ ಕುತೂಹಲಕಾರಿ ರಾಜಕೀಯದ ಆಟ.

ಜಾತಿ ಸ್ವಾಮಿಗಳು ಮತ್ತು ಮೀಸಲಾತಿ

ಆಧುನಿಕತೆ ಬೆಳೆದಂತೆಲ್ಲ ಭಾರತೀಯರು ಇನ್ನಷ್ಟುಜಾತಿವಾದಿಗಳಾಗುತ್ತಿರುವುದು ಒಂದು ಪಕ್ಕಾ ಅಧ್ಯಯನದ ವಿಷಯ. ಯುವಕರ, ರೈತರ ಸಮಾವೇಶ ನಡೆಸುವುದು ಬಹಳ ಕಷ್ಟದ ಕೆಲಸ. ಆದರೆ ಜಾತಿಯ ಸಮಾವೇಶ, ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ಬೇಡಿಕೆ ಎಂದರೆ ಮುಗಿಯಿತು ಜನ ಹುಚ್ಚೆದ್ದು ಸೇರುತ್ತಾರೆ. ಇದಕ್ಕೆಲ್ಲ ಮೂಲ ಕಾರಣ ರಾಜಕಾರಣಿಗಳು ಕೃಷಿಗೆ ಸಾಲಮನ್ನಾ ಹೇಗೆ ಮದ್ದೋ ಹಾಗೆಯೇ ಸಮುದಾಯಗಳು ಮುಂದೆ ಬರಲು ಮೀಸಲಾತಿ ಒಂದೇ ರಾಮಬಾಣ ಎಂದು ಬಿಂಬಿಸಿರುವುದು.

ಕೇಂದ್ರ ಸರ್ಕಾರ ನೇಮಿಸಿರುವ ರೋಹಿಣಿ ಆಯೋಗದ ಪ್ರಕಾರ ಹಿಂದುಳಿದ 6000 ಜಾತಿಗಳು ದೇಶದಲ್ಲಿವೆ. ಇದರಲ್ಲಿ 50 ಪ್ರತಿಶತ ಮೀಸಲಾತಿ ಲಾಭ ಪಡೆದದ್ದು ಪ್ರಬಲ 40 ಜಾತಿಗಳು ಮಾತ್ರ. ಕರ್ನಾಟಕದಲ್ಲೇ ಶಾಸಕರ ಪಟ್ಟಿತೆಗೆದು ನೋಡಿ- ಪಂಚಮಸಾಲಿ, ಬಣಜಿಗ, ಗಾಣಿಗ, ಒಕ್ಕಲಿಗ, ಬ್ರಾಹ್ಮಣ, ಕುರುಬ, ಈಡಿಗ, ಮಾದಿಗ, ಬೋವಿ, ಬಂಜಾರ, ವಾಲ್ಮೀಕಿಗಳನ್ನು ಬಿಟ್ಟು ಉಳಿದವರನ್ನು ದುರ್ಬೀನು ಹಾಕಿ ಹುಡುಕಬೇಕು. ಅತ್ಯಂತ ಸಣ್ಣ ಮತ್ತು ಹಿಂದುಳಿದ ಸಮುದಾಯಗಳ ಸ್ಥಿತಿಗತಿ ಏನು, ಉದ್ಯೋಗ, ಅಭಿವೃದ್ಧಿ, ಬದಲಾವಣೆ ಅವರನ್ನು ತಲುಪುವುದು ಹೇಗೆ ಮತ್ತು ಯಾವಾಗ ಎಂಬ ಬಗ್ಗೆ ಚಿಂತನೆ ನಡೆಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಇರುವ ಏಕ ಸೂತ್ರ ಪರಿಹಾರ ಎಂದರೆ ಸಾಮಾಜಿಕ ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡುವುದು.

ಕೋರ್ಟ್‌ಗಳು ಏನು ಹೇಳುತ್ತವೆ?

ರಾಜಕಾರಣಿಗಳು ಮೀಸಲಾತಿಯನ್ನು ಕೇವಲ ರಾಜಕೀಯ ಅಸ್ತ್ರವಾಗಿ ಬಳಸದೇ ಇರಲಿ ಎಂದೇ ಸುಪ್ರೀಂಕೋರ್ಟ್‌ 1992ರಲ್ಲಿ ಇಂದಿರಾ ಸಾಹನಿ ಪ್ರಕರಣದ ತೀರ್ಪಿನಲ್ಲಿ ಯಾರಿಗೆ ಬೇಕಾದರೂ ಮೀಸಲಾತಿ ಕೊಡಿ. ಆದರೆ ಒಟ್ಟು ಮೀಸಲಾತಿ ಶೇ.50 ದಾಟಿಸಬೇಡಿ ಎಂದು ಹೇಳಿತ್ತು. ಈ ಮಾನದಂಡದಿಂದಾಗಿಯೇ ಹರಾರ‍ಯಣದ 10 ಪ್ರತಿಶತ ಜಾಟ್‌ ಮೀಸಲಾತಿ, ಮಹಾರಾಷ್ಟ್ರದ ಮರಾಠ 12 ಪ್ರತಿಶತ ಮೀಸಲಾತಿ, ರಾಜಸ್ಥಾನದಲ್ಲಿ ಗುಜ್ಜರರಿಗೆ 6 ಪ್ರತಿಶತ ಮೀಸಲಾತಿ, ತೆಲಂಗಾಣದ ಮುಸ್ಲಿಮರಿಗೆ 12 ಪ್ರತಿಶತ ಮೀಸಲಾತಿ ಕೊಡುವ ಪ್ರಯತ್ನಗಳು ಹಿನ್ನಡೆ ಕಂಡಿವೆ. ಹೀಗಾಗಿಯೇ ಪ್ರತ್ಯೇಕ ಹೊಸ ಮೀಸಲಾತಿ ಕೇಳದೇ ಪಂಚಮಸಾಲಿಗಳು ನಮ್ಮ ಸಂಖ್ಯೆ ಜಾಸ್ತಿ ಇದೆ, ನಮಗೆ 3ಬಿ ಯ 5 ಪ್ರತಿಶತ ಮೀಸಲಾತಿ ಸಾಕಾಗೋದಿಲ್ಲ. 15ರ 2ಎ ಗೆ ಕಳಿಸಿ ಎನ್ನುತ್ತಿದ್ದಾರೆ.

ಕುರುಬರು ನಾವು ಪಶುಪಾಲಕರು, ಗುಡ್ಡಗಾಡುಗಳಲ್ಲಿ ಪಶು ಮೇಯಿಸುವವರು. ಹೀಗಾಗಿ ಪರಿಶಿಷ್ಟಪಂಗಡದ ಮೀಸಲಾತಿ ಈಗಿರುವ 3ರಿಂದ 7.5ಕ್ಕೆ ಹೆಚ್ಚಿಸಿ ನಮಗೂ ಒಳಗೆ ಸೇರಿಸಿ ಎನ್ನುತ್ತಿದ್ದಾರೆ. ಆದರೆ ಆ 4.5 ಶೇಕಡಾ ಯಾರಿಂದಾದರೂ ಕಿತ್ತುಕೊಂಡೇ ಕೊಡಬೇಕು. ಅದು ಇನ್ನೊಂದು ರಂಪಾಟಕ್ಕೆ ಕಾರಣ ಆದೀತು ಎಂಬುದು ಸರ್ಕಾರಕ್ಕೆ ಇರುವ ಹೆದರಿಕೆ. ಮೂಲ ಆಶಯ ಏನು ಎಂದರೆ, ಪಂಚಮಸಾಲಿಗಳಿಗೆ ರಾಜಕೀಯ ಅಧಿಕಾರ ಇದೆ. ಈಗ ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಸೀಟು ಬೇಕು. ಕುರುಬರಿಗೆ ರಾಜಕೀಯವಾಗಿ ಚುನಾವಣೆಯಲ್ಲಿ ಸಾಮಾನ್ಯ ವರ್ಗದಲ್ಲಿ ಒಕ್ಕಲಿಗರು, ಲಿಂಗಾಯತರನ್ನು ಎದುರಿಸುವುದಕ್ಕಿಂತ ಮೀಸಲಾತಿ ಸಿಕ್ಕರೆ ಸರಾಗವಾಗಿ ರಾಜಕೀಯ ಅಧಿಕಾರ ಸಿಗಬಹುದು. ಲೋಕೋ ಭಿನ್ನ ರುಚಿಃ, ತಪ್ಪು ಎನ್ನಲು ಆಗುವುದಿಲ್ಲ.

ಇತಿಹಾಸದಲ್ಲಿ ನಡೆದಿದ್ದೇನು?

ಮೀಸಲಾತಿ ಭಾರತೀಯ ಸಂದರ್ಭದಲ್ಲಿ ಮುಖ್ಯವಾಗಿ ವರ್ಣಾಶ್ರಮ ಪದ್ಧತಿ ಮಾಡಿದ ಅವಘಡಗಳನ್ನು ಸರಿಪಡಿಸಲು ತಂದ ವ್ಯವಸ್ಥೆ. ಹೀಗಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರನ್ನು ಹೊರತುಪಡಿಸಿ ಹಿಂದೆ ಶೂದ್ರ ಎನಿಸಿಕೊಂಡಿದ್ದ ಎಲ್ಲರಿಗೂ ಮೀಸಲಾತಿ ಕೊಡಬೇಕು ಎಂಬುದು ಒಂದು ವಾದ. ಆದರೆ ಈಗಿನ ವರ್ತಮಾನದ ಕರ್ನಾಟಕದ ಪರಿಪ್ರೇಕ್ಷ್ಯದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಭೂಮಿ ಹಣ ಮತ್ತು ರಾಜಕೀಯ ಎಲ್ಲದರಲ್ಲೂ ಬಲಿಷ್ಠರು. ಹೀಗಾಗಿ ದೇವರಾಜು ಅರಸು ರಚಿಸಿದ ಎಲ್‌.ಜಿ.ಹಾವನೂರು ಆಯೋಗ ಲಿಂಗಾಯತರನ್ನು ಹಿಂದುಳಿದ ಜಾತಿಗಳಲ್ಲಿ ಸೇರಿಸಿರಲಿಲ್ಲ.

ನಂತರ ಬಂದ ರಾಮಕೃಷ್ಣ ಹೆಗಡೆ ಕಾಲದ ವೆಂಕಟಸ್ವಾಮಿ ಆಯೋಗ ಒಕ್ಕಲಿಗರನ್ನು ಹಿಂದುಳಿದ ಜಾತಿಗಳಿಂದ ಕೈಬಿಟ್ಟಿತ್ತು. ಆದರೆ ಎರಡು ಪ್ರಬಲ ಸಮುದಾಯಗಳು ಬೀದಿಗಿಳಿದು ಹೋರಾಟ ಮಾಡಿದ್ದರಿಂದ ಚಿನ್ನಪ್ಪ ರೆಡ್ಡಿ ಆಯೋಗದಲ್ಲಿ ಎರಡು ಸಮುದಾಯಗಳು ಸೇರ್ಪಡೆಗೊಂಡವು. ದೇವೇಗೌಡರು ಪ್ರಧಾನಿ ಇದ್ದಾಗ ಒಕ್ಕಲಿಗರನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಿದರು. ಈಗ ಪಂಚಮಸಾಲಿಗಳು ಹೆಚ್ಚು ಮೀಸಲಾತಿ ಕೇಳಿದರೆ ಒಕ್ಕಲಿಗರು ಸುಮ್ಮನೆ ಕುಳಿತುಕೊಳ್ಳಲ್ಲ. ಈ ಮೀಸಲಾತಿ ಪಟ್ಟಿಪರಿಷ್ಕರಣೆಗೆ ಕೈಹಾಕೋದು ಅಂದರೆ ಪೆಂಡೋರಾ ಪೆಟ್ಟಿಗೆ ತೆರೆದಂತೆ ನೋಡಿ. ಆಮೇಲೆ ಕೊಡುತ್ತಲೇ ಇರಬೇಕು.

 - ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ