ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕಾರಣ ಕೊಟ್ಟ ಮಾಜಿ ಉಪಮುಖ್ಯಮಂತ್ರಿ
* ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ವಿಚಾರ
* ಕಾರಣ ಕೊಟ್ಟ ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್
* ತುಮಕೂರಿನಲ್ಲಿ ಮಾಧ್ಯಮಗಳ ಮುಂದೆ ಕಾರಣ ಬಿಚ್ಚಿಟ್ಟ ಮಾಜಿ ಉಪಮುಖ್ಯಮಂತ್ರಿ
ತುಮಕೂರು, (ಜು.21): ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಎರಡು ವರ್ಷ ಆಯ್ತು. ಅಂದು ಸರ್ಕಾರ ಬಿದ್ದಿರುವುದಕ್ಕೆ ಇದೀಗ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಕಾರಣ ಕೊಟ್ಟಿದ್ದಾರೆ.
ಇಂದು (ಬುಧವಾರ) ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನ ದೂರವಾಣಿ ಕದ್ದಾಲಿಕೆಯೇ ಕಾರಣ. ಪೆಗಾಸಸ್ ಕು-ತಂತ್ರಾಂಶದ ಮೂಲಕ ಫೋನ್ ಕದ್ದಾಲಿಕೆ ನಡೆದಿರಬಹುದು ಎಂದು ಆರೋಪಿಸಿದರು.
ಶಾಸಕಾಂಗ ಸಭೆ ರದ್ದಾದ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ
ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಮತ್ತು ನನ್ನ ಫೋನ್ ಟ್ಯಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಕಾನೂನಿಗೆ ವಿರುದ್ಧವಾಗಿ ಪೆಗಾಸಸ್ ಮೂಲಕ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಫೋನ್ ಕದ್ದಾಲಿಕೆ ಮಾಡಿದ ಅನೇಕ ಸರ್ಕಾರಗಳು ಈ ಹಿಂದೆಯೂ ಬಿದ್ದು ಹೋಗಿವೆ. ಬಿಜೆಪಿಗೆ ಹೋದವರು ಸುಮ್ಮನೆ ಹೋಗಿದ್ದಾರೆ ಎಂದು ಅನ್ನಿಸುತ್ತಿಲ್ಲ. ಹಣ ಪಡೆದುಕೊಂಡ ನಂತರವೇ 17 ಶಾಸಕರು ಬಿಜೆಪಿಗೆ ಹೋಗಿರಬಹುದು. ಇಂಥ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ನಮ್ಮೆಲ್ಲರ ಫೋನ್ ಟ್ಯಾಪಿಂಗ್ ನಡೆದಿದೆ ಎಂದರು.
ಬಹುಶಃ ಜುಲೈ ತಿಂಗಳಲ್ಲಿ ಟೆಲಿಫೋನ್ ಟ್ಯಾಪಿಂಗ್ ನಡೆದಿರಬಹುದು. ಆಗಿನ ಫೋನ್ ಸಂಭಾಷಣೆ ಬಳಸಿ ಸರ್ಕಾರ ಕೆಡವಿರಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದ್ದು ನಡೆಯಬಾರದಿತ್ತು ಎಂದು ವಿಷಾದಿಸಿದರು.