ನವದೆಹಲಿ(ಜ.15): ಸಚಿವ ಸ್ಥಾನ ವಂಚಿತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗುರುವಾರ ಬೆಳಗ್ಗೆ ದಿಢೀರ್‌ ದೌಡಾಯಿಸಿ ಭಾರೀ ಬಂಡಾಯದ ಸುಳಿವು ನೀಡಿದ್ದರು. ಆದರೆ, ಅದ್ಯಾಕೋ ಬಳಿಕ ಥಂಡಾ ಹೊಡೆದ ಅವರು ನಾನು ಹೈಕಮಾಂಡ್‌ ಭೇಟಿಗಲ್ಲ, ವೈಯಕ್ತಿಕ ಕೆಲಸದಿಂದಾಗಿ ದೆಹಲಿಗೆ ಬಂದಿದ್ದೇನೆ ಎಂದು ಉಲ್ಟಾಹೊಡೆದರು.

ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದ ರೇಣುಕಾಚಾರ್ಯ ಅವರು ದೆಹಲಿಗೆ ತೆರಳಿ ಹೈಕಮಾಂಡ್‌ಗೆ ದೂರು ನೀಡುವ ಸುಳಿವು ನೀಡಿದ್ದರು. ಅದರಂತೆ ಬೆಳಗ್ಗೆ ಲಘುಬಗೆಯಿಂದ ದೆಹಲಿ ವಿಮಾನ ಹತ್ತಿದ್ದರು. ಆದರೆ, ದೆಹಲಿಗೆ ತೆರಳಿದ ಬಳಿಕ ಯಾಕೋ ತಣ್ಣಗಾದಂತೆ ಕಂಡ ಅವರು, ನಾನು ದೆಹಲಿಯಲ್ಲಿ ಯಾವುದೇ ದಾಖಲೆ ಬಿಡುಗಡೆ ಮಾಡಲು ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ಆಗಮಿಸಿದ್ದೇನೆ. ಅವಕಾಶ ಸಿಕ್ಕರಷ್ಟೇ ಕೇಂದ್ರ ನಾಯಕರನ್ನು ಭೇಟಿಯಾಗುತ್ತೇನೆ. ಅಲ್ಲದೆ, ನಾನು ಅತೃಪ್ತ ಶಾಸಕರ ತಂಡದ ನಾಯಕತ್ವ ವಹಿಸಲ್ಲ ಎಂದೂ ಸ್ಪಷ್ಟಪಡಿಸಿದರು

ಸಿಗದ ಸಚಿವ ಸ್ಥಾನ: ಸಿಎಂ ವಿರುದ್ಧವೇ ನೋವು ತೋಡಿಕೊಂಡ ರೇಣುಕಾಚಾರ್ಯ

ಸಿಡಿಯೂ ಇಲ್ಲ ಪಿಡಿಯೂ ಇಲ್ಲ : 

ಸಿ.ಡಿ. ತೋರಿಸಿ ಮಂತ್ರಿಯಾದರು ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಸಿ.ಡಿ.ಯೂ ಇಲ್ಲ, ಪಿ.ಡಿ.ಯೂ ಇಲ್ಲ. ಅದೆಲ್ಲಾ ಗಾಳಿ ಸುದ್ದಿ ಎಂದರು.

ಏತನ್ಮಧ್ಯೆ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ರೋಶ ಹೊರಹಾಕಿದ ರೇಣುಕಾಚಾರ್ಯ, ಚುನಾವಣೆಗೆ ಸ್ಪರ್ಧಿಸದೆ, ಕ್ಷೇತ್ರದ ಜನರಿಂದಲೆ ತಿರಸ್ಕಾರಗೊಂಡವರು, ವಂಚನೆ ಮಾಡಿದವರನ್ನು ಮಂತ್ರಿ ಮಾಡಲಾಗಿದೆ ಎಂದು ತಿಳಿಸಿದರು.