ಬಿಜೆಪಿಗಾಗಿ ದುಡಿದ ಮತ್ತೋರ್ವ ಮುಖಂಡಗೆ ಸಚಿವ ಸ್ಥಾನ : ಸಿಎಂ ಆಪ್ತರಿಂದಲೇ ವಿರೋಧ
ಮತ್ತೋರ್ವ ಮುಖಂಡಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಗಳಾಗುತ್ತಿದ್ದು ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರು (ನ.12): ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಹಿಂದೆಯೂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಇದೀಗ ಮತ್ತೊಮ್ಮೆ ಆ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳ ಮುಂದೆಯಾಗಲಿ ಅಥವಾ ವರಿಷ್ಠರ ಬಳಿಯಾಗಲಿ ಬೇಡಿಕೆ ಮಂಡಿಸಬಾರದು ಎಂಬ ಒತ್ತಡವನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ರೇಣುಕಾಚಾರ್ಯ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಸುಗಮವಾಯ್ತು ಈ ಮೂವರ ಮಂತ್ರಿಗಿರಿ ಹಾದಿ ...
ಬುಧವಾರ ಜಾರಕಿಹೊಳಿ ನಿವಾಸಕ್ಕೆ ತೆರಳಿದ್ದ ರೇಣುಕಾಚಾರ್ಯ ಅವರು, ‘ಯೋಗೇಶ್ವರ್ ಅವರನ್ನು ಸಚಿವರನ್ನಾಗಿಸುವಂತೆ ನೀವು ಒತ್ತಡ ತಂತ್ರ ಹೇರಬೇಡಿ. ಪಕ್ಷದಲ್ಲಿ ದುಡಿದವರು ಇನ್ನೂ ಅನೇಕರು ಇದ್ದಾರೆ. ಅವರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಬುದಾಗಿ ಯೋಗೇಶ್ವರ್ ಹೇಳಿಕೊಳ್ಳುತ್ತಾರೆ.
ಆದರೆ ಅವರೊಬ್ಬರಿಂದ ಸರ್ಕಾರ ರಚನೆ ಆಗಿಲ್ಲ. ಅನೇಕರ ಪ್ರಯತ್ನದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ’ ಎಂದು ಅಸಮಾಧಾನದ ಧಾಟಿಯಲ್ಲಿ ಮಾತನಾಡಿದರು ಎನ್ನಲಾಗಿದೆ. ಆದರೆ, ರೇಣುಕಾಚಾರ್ಯ ಅವರ ಮಾತನ್ನು ಆಲಿಸಿದ ಸಚಿವ ಜಾರಕಿಹೊಳಿ ಯಾವುದೇ ಸ್ಪಷ್ಟಭರವಸೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.