Assembly election: ರೆಡ್ಡಿ ಹೊಸ ಪಕ್ಷ: ಬಳ್ಳಾರಿ ಜಿಲ್ಲೆಯಲ್ಲಿ ರಾಜಿನಾಮೆ ಪರ್ವ ಶುರು!
- ರೆಡ್ಡಿ ಹೊಸ ಪಕ್ಷ; ಬಳ್ಳಾರಿ ಜಿಲ್ಲೆಯಲ್ಲಿ ರಾಜಿನಾಮೆ ಪರ್ವ ಶುರು!
- ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ
- ಪಕ್ಷದ ಹೈಕಮಾಂಡ್ ರೆಡ್ಡಿಯ ಬಗ್ಗೆ ನಡೆದುಕೊಂಡ ರೀತಿಗೆ ಬೇಸರ
ಬಳ್ಳಾರಿ ಡಿ.(28) : ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗುತ್ತಿದ್ದಂತೆಯೇ ಜಿಲ್ಲಾ ಬಿಜೆಪಿಯಲ್ಲಿ ರಾಜಿನಾಮೆ ಪರ್ವ ಶುರುವಾಗಿದೆ. ರೆಡ್ಡಿಯ ಆಪ್ತ ಹಾಗೂ ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿರುವ ದಮ್ಮೂರು ಶೇಖರ್, ಪಕ್ಷದ ನಾಯಕರು ರೆಡ್ಡಿಯನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ(BJP) ಅಧಿಕಾರಕ್ಕೆ ಬರಲು ಹಾಗೂ ಯಡಿಯೂರಪ್ಪ(BS Yadiyurappa)ನವರನ್ನು ಮುಖ್ಯಮಂತ್ರಿಯನ್ನಾಗಿಸಿದ ಕೀರ್ತಿ ಜನಾರ್ದನ ರೆಡ್ಡಿ(Janardanareddy) ಅವರಿಗೆ ಸಲ್ಲುತ್ತದೆ. ಪಕ್ಷದ ಸಂಘಟನೆಗಾಗಿ ಸತತ ತೊಡಗಿಸಿಕೊಂಡಿದ್ದರಿಂದಾಗಿಯೇ ರೆಡ್ಡಿ ಹಾಗೂ ಅವರ ಕುಟುಂಬ ಸದಸ್ಯರು ಸಾಕಷ್ಟುತೊಂದರೆಗಳನ್ನು ಎದುರಿಸುವಂತಾಯಿತು. ಆದಾಗ್ಯೂ ಪಕ್ಷಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟುಕೆಲಸ ಮಾಡಿದರು. ಇಷ್ಟಾಗಿಯೂ ಪಕ್ಷದ ಹೈಕಮಾಂಡ್ ಗುರುತಿಸದಿರುವುದು ನಮ್ಮಂತಹ ಅಪಾರ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಹೀಗಾಗಿಯೇ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿರುವುದಾಗಿ ದಮ್ಮೂರು ಶೇಖರ್ ನೀಡಿರುವ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ದಮ್ಮೂರು ಶೇಖರ್ ಈ ಹಿಂದೆ ಬಿಜೆಪಿ ಯುವಮೋರ್ಚಾದ ರಾಜ್ಯಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
Assembly election: ವಿವಿಧ ಪಕ್ಷಗಳ ಮುಖಂಡರೊಂದಿಗೆ ಟೆಂಪಲ್ ರನ್ ಮಾಡಿದ ಜನಾರ್ಧನರೆಡ್ಡಿ
ಕರ್ನಾಟಕದ ಗಡಿ ನುಂಗಿದ ರೆಡ್ಡಿ ಯಾವ ಮುಖ ಹೊತ್ತು ಮತ ಕೇಳುತ್ತಾರೆ: ಟಪಾಲ್ ಗಣೇಶ
ಬಳ್ಳಾರಿ: ಕಲ್ಯಾಣ ರಾಜ್ಯದ ಗಡಿ ನುಂಗಿ ಹಾಕಿದ ಜನಾರ್ದನ ರೆಡ್ಡಿಯವರಿಂದ ಯಾವ ಕಲ್ಯಾಣ ನಿರೀಕ್ಷೆ ಸಾಧ್ಯ? ಯಾವ ಮುಖ ಹೊತ್ತು ಜನರ ಮುಂದೆ ಹೋಗಿ ಮತ ಕೇಳುತ್ತಾರೆ? ಎಂದು ಅಕ್ರಮ ಗಣಿಗಾರಿಕೆ ವಿರೋಧಿ ಹೋರಾಟಗಾರ ಟಪಾಲ್ ಗಣೇಶ್(Tapal ganesh) ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೆಡ್ಡಿಯ ಹೊಸ ಪಕ್ಷಕ್ಕೆ ಕಲ್ಯಾಣ ಪ್ರಗತಿ ಪಕ್ಷ(kalyanarajya pragati paksha) ಎಂದು ಹೆಸರಿಟ್ಟಿರುವುದು ಹಾಸ್ಯಾಸ್ಪದವಾಗಿದೆ. ರೆಡ್ಡಿಯ ನಾಲ್ಕು ಮೈನಿಂಗ್ ಕಂಪನಿಗಳ ಲೀಸ್ ರದ್ಧತಿಗೆ ಸಿಇಸಿ ಅಧಿಕಾರಿಗಳು ಸುಪ್ರೀಂ ಕೋರ್ಚ್‌ಗೆ ಶಿಫಾರಸ್ಸು ಮಾಡಿದ್ದಾರೆ. ಅಂದರೆ ಇವರು ಎಷ್ಟರ ಮಟ್ಟಿಗೆ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಿರುವಾಗ ಜನಾರ್ದನ ರೆಡ್ಡಿ ಯಾವ ಮುಖ ಹೊತ್ತು ಹೊಸ ಪಕ್ಷ ಕಟ್ಟಲು ಹೊರಟಿದ್ದಾರೆ? ಎಂದು ಕೇಳಿದರು.
ರೆಡ್ಡಿ ನಡೆಸಿರುವ ಅಕ್ರಮ ಗಣಿಗಾರಿಕೆಯಿಂದಾಗಿಯೇ ಅವರು ಆರೋಪಿಯಾಗಿದ್ದಾರೆ. ಸ್ವಯಂ ಘೋಷಿತವಾಗಿ ರೆಡ್ಡಿ ತಾನು 24 ಕ್ಯಾರೆಟ್ ಚಿನ್ನದಂತೆ ಶುದ್ಧ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ರೆಡ್ಡಿಗಿಂತ ನಾವು ಶುದ್ಧ ಚಿನ್ನವಿದ್ದಂತೆ. ಜನಾರ್ದನ ರೆಡ್ಡಿಯ ಅಕ್ರಮ ವಿರುದ್ಧ ಹೋರಾಟ ನಡೆಸಿ, ಇಂದಿಗೂ ಜೀವಂತವಾಗಿದ್ದೇವೆ. ರೆಡ್ಡಿಯ ರಾಜಕೀಯ ಪಕ್ಷವನ್ನು ರಾಜ್ಯದ ಜನತೆ ಹಾಗೂ ಗಂಗಾವತಿಯ ಮತದಾರರು ತಿರಸ್ಕಾರ ಮಾಡಬೇಕು. ಮೊದಲು ರೆಡ್ಡಿ ತನ್ನ ಮೇಲಿರುವ ಎಲ್ಲ ಪ್ರಕರಣಗಳಿಂದ ಖುಲಾಸೆಯಾಗಿ ಬಂದು ಜನರ ಮುಂದೆ ಹೋಗಬೇಕೇ ವಿನಾ, ಗಡಿಗಳನ್ನು ನುಂಗಿದ ಆರೋಪ ಎದುರಿಸುತ್ತಿರುವ ನಡುವೆ ರಾಜಕೀಯ ಪಕ್ಷ ಸ್ಥಾಪಿಸಿ ಹೇಗೆ ಮತ ಕೇಳುತ್ತಾರೆ? ಎಂದು ಟಪಾಲ್ ಕಿಡಿಕಾರಿದರು.ಗಂಗಾವತಿಯಿಂದ ಸ್ಪರ್ಧೆಗೆ ಸಿದ್ಧ ಎಂದ ಜನಾರ್ದನ ರೆಡ್ಡಿ: ಆಕಾಂಕ್ಷಿಗಳ ಪಾಲಿಗೆ ಆಗುವರೇ ಅಡ್ಡಿ?