Asianet Suvarna News Asianet Suvarna News

ಅಂಬಿಗರ ಸಮುದಾಯ ಎಸ್ಟಿಗೆ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸ್ಸು: ಸಚಿವ ತಿಮ್ಮಾಪೂರ

ಅಂಬಿಗರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. 
 

Recommendation to center for inclusion of Ambiga Community ST Says Minister RB Timmapur gvd
Author
First Published Jan 22, 2024, 9:23 AM IST

ಮುಧೋಳ (ಜ.22): ಅಂಬಿಗರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಪರಿಶಿಷ್ಟ ವರ್ಗಕ್ಕೆ ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣದ ಬಗ್ಗೆ ಮಾಹಿತಿ ತರಿಸಿಕೊಂಡು ಶೀಘ್ರವೇ ಸ್ಪಷ್ಟೀಕರಣ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. 

ತಾಲೂಕು ಆಡಳಿತ, ತಾಪಂ, ನಗರಸಭೆ ಮುಧೋಳ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಸ್ಥಳೀಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮಂದಿರದ ಆವರಣದಲ್ಲಿ ನಡೆದ ಶ್ರೀ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು, ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಮನುಷ್ಯರ ನಡುವೆ ಯಾವುದೇ ತಾರತಮ್ಯ ಇರಬಾರದು. ಸಮ ಸಮಾಜದ ಕನಸು ನನಸಾಗಲು ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರಿಗೂ ಬರಬೇಕು, ಆರ್ಥಿಕ ಶಕ್ತಿ ಇಲ್ಲದ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲವೆಂದು ಹೇಳಿದರು.

ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರದ್ದು ಮಹಾಮೋಸ: ಗೋವಿಂದ ಕಾರಜೋಳ

ಶಿರೂರಿನ ಡಾ.ಬಸವಲಿಂಗ ಮಹಾಸ್ವಾಮಿಜಿ ದಿವ್ಯಸಾನಿಧ್ಯವಹಿಸಿ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳನ್ನು ಪ್ರತಿಯೊಬ್ಬರು ಓದಬೇಕು, ಅವುಗಳನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಚೌಡಯ್ಯನವರ ಜಯಂತ್ಯುತ್ಸವ ಆಚರಣೆ ಸಾರ್ಥಕವಾಗಲಿದೆ ಎಂದರು. ಮುಗಳೊಳ್ಳಿ ಸರ್ಕಾರಿ ಪ.ಪೂ ಕಾಲೇಜಿನ ಪ್ರೊ.ಸಿ.ಆರ್.ಕೋಲಕಾರ ಅತಿಥಿ ಉಪನ್ಯಾಸ ನೀಡಿದರು, ಚೌಡಯ್ಯನವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ತಳವಾರ ಮತ್ತು ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ವೇದಿಕೆ ಮೇಲೆ ಇದ್ದರು. ಸಮಾಜದ ಪ್ರತಿಭಾವಂತ ಮತ್ತು ದಾನಿಗಳನ್ನು ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು. ನಗರದ ಪ್ರಮುಖ ಬೀದಿಯಲ್ಲಿ ವಿವಿಧ ವಾದ್ಯಮೇಳ, ಕುಂಭದೊಂದಿಗೆ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆ ನಡೆಯಿತು.

Follow Us:
Download App:
  • android
  • ios