ಮಾಧುಸ್ವಾಮಿ ಹೇಳಿಕೆ ಸಾಕು ಸರಕಾರ ಅಸಮರ್ಥ ಎನ್ನಲು: ಕಾಂಗ್ರೆಸ್

ಸರ್ಕಾರದ ಅಸಮರ್ಥತೆ ಸಚಿವರ ಹೇಳಿಕೆಯಿಂದಲೇ ಸಾಬೀತಾಗಿದೆ. ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಇರಬೇಕು ಎಂದು ವಾಗ್ದಾಳಿ ನಡೆಸಿದ ಕಾಂಗ್ರೆಸ್‌

Ready to resign if Chief Minister suggests Says Minister JC Madhuswamy grg

ತುಮಕೂರು(ಆ.17):  ‘ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ’ ಎಂಬ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರ ಹೇಳಿಕೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿದೆ. ಘಟನೆಗೆ ಸಂಬಂಧಿಸಿದಂತೆ ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವರಣೆ ನೀಡಿದ್ದು, ಮುಖ್ಯಮಂತ್ರಿ ಸೂಚಿಸಿದರೆ ರಾಜೀನಾಮೆ ನೀಡುವೆ ಎಂದು ಪ್ರಕಟಿಸಿದ್ದಾರೆ. ಈ ವಿವಾದವನ್ನು ರಾಜಕೀಯ ಅಸ್ತ್ರವಾಗಿ ಕೈಗೆತ್ತಿಕೊಂಡಿರುವ ಕಾಂಗ್ರೆಸ್‌ ಪಕ್ಷ, ಸರ್ಕಾರದ ಅಸಮರ್ಥತೆ ಸಚಿವರ ಹೇಳಿಕೆಯಿಂದಲೇ ಸಾಬೀತಾಗಿದೆ. ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಇರಬೇಕು ಎಂದು ವಾಗ್ದಾಳಿ ನಡೆಸಿದೆ. ಅದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

ರಾಜೀನಾಮೆಗೆ ಸಿದ್ಧ-ಮಾಧುಸ್ವಾಮಿ:

ತಮ್ಮ ಹೇಳಿಕೆ ವೈರಲ್‌ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿ, ಆ ಆಡಿಯೋ ಯಾವಾಗಿನದ್ದು ಎಂಬುದು ನೆನಪಿಲ್ಲ. ಆದರೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸ್ಪಷ್ಟನೆ ನೀಡಿದ್ದೇನೆ. ಅವರು ಸೂಚಿಸಿದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮಾಧುಸ್ವಾಮಿ ಅಸ್ತ್ರ

ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ಅಧಿಕಾರಕ್ಕಾಗಿ ಅಂಟಿ ಕೂತವನಲ್ಲ. ಮುಖ್ಯಮಂತ್ರಿಗಳು ನಿಮ್ಮಿಂದ ಸರ್ಕಾರಕ್ಕೆ ಅಪಚಾರವಾಗಿದೆ, ರಾಜೀನಾಮೆ ಕೊಡಿ ಎಂದು ಕೇಳಿದರೆ ಎರಡು ಮಾತನಾಡದೆ ರಾಜೀನಾಮೆ ಕೊಡುತ್ತೇನೆ. ಆದರೆ ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ಆಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪಕ್ಷದಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆಡಿಯೋ ವೈರಲ್‌ ಆದ ವಿಚಾರದ ಬಗ್ಗೆ ಮಾತನಾಡುವಾಗ ಕೆಲ ಸಚಿವರಿಗೆ ಸೌಜನ್ಯ ಇರಬೇಕಾಗಿತ್ತು. ಈಗಲೂ ನಾನು ನನ್ನ ಸಂಪುಟದ ಸಹೋದ್ಯೋಗಿಗಳ ಜೊತೆ ನಿಲ್ಲುತ್ತೇನೆ. ಆದರೆ ಸಂಪುಟದ ಸಹೋದ್ಯೋಗಿಗಳು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಮಾತನಾಡಬಾರದು ಅಂದುಕೊಂಡಿದ್ದೆ:

ಆಡಿಯೋ ವಿಚಾರವಾಗಿ ಮಾತನಾಡಬಾರದು ಅಂತ ಅಂದುಕೊಂಡಿದ್ದೆ. ಇದರಲ್ಲಿ ಎರಡು ಪ್ರಮುಖ ಅಂಶ ಇದೆ. ಒಂದು ಖಾಸಗಿತನದ ಹಕ್ಕು, ಮತ್ತೊಂದು ಸಮಯ. ನಾನು ಯಾರ ಜೊತೆ ಮಾತನಾಡಿದೆ, ಯಾವಾಗ ಮಾತನಾಡಿದೆ ಎಂಬುದು ಗೊತ್ತಿಲ್ಲ. ಚನ್ನಪಟ್ಟಣದ ಭಾಸ್ಕರ್‌ ಎನ್ನುವವರ ಜೊತೆæ ಈ ರೀತಿ ಮಾತನಾಡಿದೆ ಎಂದು ಸುದ್ದಿಯಾಗಿದೆ. ಸಚಿವ ಸೋಮಶೇಖರ್‌ ಅವರ ಬಗ್ಗೆಯೂ ನಾನು ಕೆಟ್ಟದಾಗಿ ಮಾತನಾಡಿಲ್ಲ. ಯಾರು ಅಶಕ್ತರು, ಯಾರು ಕೆಲಸ ಮಾಡಿಲ್ಲ ಅಂತ ನಾನೇನೂ ಹೇಳಿಲ್ಲ. ನೀವು ಸರ್ಕಾರ ನಡೆಸುತ್ತಿಲ್ಲ ಎಂದು ಆತ ಕೇಳಿರಬಹುದು, ಆಗ ಅವನ ಜೊತೆ ವಾದ ಮಾಡಬೇಕಾದ ಸಮಯದಲ್ಲಿ ನಾವು ಮ್ಯಾನೇಜ್‌ ಮಾಡ್ತಿದೀವಿ ಕಣಯ್ಯ ಅಂತ ಹೇಳಿರಬಹುದು. ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರ ನಡೆಯುತ್ತಿಲ್ಲ ಎಂದು ಹೇಳೋಕೆ ಆಗುತ್ತಾ? ಅವನು ಯಾರೋ ಅನಾಮಿಕ. ಈಗ ಯಾಕೆ ಆಡಿಯೋ ವೈರಲ್‌ ಆಗಿದೆ ಅಂತ ಅರ್ಥ ಆಗುತ್ತಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ:

ಆಡಿಯೋ ವೈರಲ್‌ ವಿಚಾರಕ್ಕೆ ಸಂಬಂಧಿಸಿ ನನ್ನ ಸಹೋದ್ಯೋಗಿಗಳು ಯಾಕೆ ಪ್ರತಿಕ್ರಿಯೆ ನೀಡಿದರೋ ನನಗೆ ಗೊತ್ತಿಲ್ಲ. ಅವರೆಲ್ಲಾ ಪ್ರಬುದ್ಧರು. ಅವರು ಏನೇನು ತಿಳಿವಳಿಕೆ ಹೇಳಿದ್ದಾರೋ, ನಾನು ಹೇಗಿರಬೇಕು, ಏನು ಮಾಡಬೇಕು ಅಂತ ತಿಳಿಸಿದ್ದಾರೋ ಅದನ್ನು ಮುಂದೆ ಪಾಲಿಸುತ್ತೇನೆ. ಕನಿಷ್ಠ ನನಗೆ ಒಂದು ಪೋನ್‌ ಮಾಡಿ ಕೇಳಿ ಮಾತಾಡಿದ್ದರೂ ಸಹೋದ್ಯೋಗಿಗಳು ಅನ್ನೋ ಪದಕ್ಕೆ ಒಂದು ಗೌರವ ಉಳಿದುಕೊಳ್ಳುತ್ತಿತ್ತು. ಆದರೆ ಅವರ ನಡೆ ನನಗೆ ನೋವು ತಂದಿದೆ. ನಾನು ಯಾರ ವಿಚಾರದಲ್ಲೂ ಏಕವಚನದಲ್ಲಿ ಮಾತನಾಡಲ್ಲ. ಆಡಿಯೋದಲ್ಲಿಯೂ ಸಹ ಸನ್ಮಾನ್ಯ ಸೋಮಶೇಖರ್‌ ಎಂಬ ಪದ ಬಳಸಿದ್ದೇನೆ ಎಂದರು.
 

Latest Videos
Follow Us:
Download App:
  • android
  • ios