ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಧುಸ್ವಾಮಿ ಅಸ್ತ್ರ
- ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಧುಸ್ವಾಮಿ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಳ್ಳಲಿದೆಯೇ?
- -ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಇರಬೇಕು ಎಂದ ಸುರ್ಜೇವಾಲಾ
- - ಮಾಧುಸ್ವಾಮಿ ಸತ್ಯ ಮುಚ್ಚಲು ಮುನಿರತ್ನ, ಎಸ್‌ಟಿಎಸ್ ಬಳಕೆ: ಸಿದ್ದು
ಬೆಂಗಳೂರು (ಆ.17) ಸರ್ಕಾರ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ದಿನದೂಡುತ್ತಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಈ ಸರ್ಕಾರ ತಕ್ಷಣ ತೊಲಗಬೇಕು ಎಂದು ಆಗ್ರಹಿಸಿದೆ.
ಸರ್ಕಾರ ನಡೆಯುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಆಡಿಯೋ ವೈರಲ್
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್(Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ(Randeep Surjewala), ಕಾನೂನು ಸಚಿವರೇ ಈ ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಒಬ್ಬ ಸಚಿವರು ಮತ್ತೊಬ್ಬ ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಸಚಿವರೇ ಸಂಪುಟ ಸದಸ್ಯರ ವಿರುದ್ಧ ಆರೋಪ ಮಾಡುತ್ತಿರುವಾಗ ಈ ಸರ್ಕಾರದ ಸ್ಥಿತಿ ಏನು, ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮಾತನಾಡಿ, ಮಾಧುಸ್ವಾಮಿ ಹಿರಿಯ ಸಚಿವರಾಗಿದ್ದು ಈ ಸರ್ಕಾರದಲ್ಲಿ ಆಡಳಿತ ನಡೆಯುತ್ತಿಲ್ಲ. ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಈ ಸತ್ಯ ಮುಚ್ಚಿ ಹಾಕಲು ಸಚಿವರಾದ ಮುನಿರತ್ನ(Muniratna), ಸೋಮಶೇಖರ್(S.T.Somashekhar) ಅವರನ್ನು ಎತ್ತಿಕಟ್ಟಿದ್ದಾರೆ. ಮಾಧುಸ್ವಾಮಿ(J.C.Madhuswamy) ರಾಜೀನಾಮೆಗೆ ಮುನಿರತ್ನ ಆಗ್ರಹಿಸಿದ್ದಾರೆ. ಮಾಧುಸ್ವಾಮಿ ವಿರುದ್ಧ ಸೋಮಶೇಖರ್ ಟೀಕಿಸಿದ್ದಾರೆ. ಇದೆಲ್ಲವನ್ನೂ ನೋಡಿಕೊಂಡು ಬೊಮ್ಮಾಯಿ ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜವಾಬ್ದಾರಿಯಿತ ಹೇಳಿಕೆ ನೀಡಿ ಇಲ್ಲವೇ ರಾಜೀನಾಮೆ ಕೊಡಿ: ಸಚಿವ ಮುನಿರತ್ನ ಕಿಡಿ
ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್(M.B.Patil) ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟುಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸರ್ಕಾರ ಕಾಲವನ್ನು ತಳ್ಳಿಕೊಂಡು ಹೋಗುತ್ತಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರ ಕಿತ್ತಾಟದಿಂದ ಎಲ್ಲವೂ ಹೊರಕ್ಕೆ: ಕಾಂಗ್ರೆಸ್
ರಾಜ್ಯ ಸರ್ಕಾರವನ್ನು ಕಳಪೆ ಎಂದು ಟ್ವೀಟ್(Tweet) ಮಾಡಿರುವ ಕಾಂಗ್ರೆಸ್, ಇದಕ್ಕೆ ಹಲವು ಉದಾಹರಣೆ ನೀಡಿ ತರಾಟೆ ತೆಗೆದುಕೊಂಡಿದೆ. ಸಚಿವರು ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೇಳಿಕೆ ನೀಡುತ್ತಾರೆ. ಸಹಕಾರ ಸಚಿವ ಸೋಮಶೇಖರ್ ಕೆಲಸ ಮಾಡುತ್ತಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ದೂರಿದರೆ, ಕಾನೂನು ಸಚಿವರೇ ಕೆಲಸ ಮಾಡುತ್ತಿಲ್ಲ ಎಂದು ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಮಾಧುಸ್ವಾಮಿ ರಾಜೀನಾಮೆ ನೀಡಲಿ ಎಂದು ತೋಟಗಾರಿಕಾ ಸಚಿವ ಮುನಿರತ್ನ ಆಗ್ರಹಿಸಿದ್ದಾರೆ. ಬಿಜೆಪಿಯವರ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.