ಕೈ ನಾಯಕರಿಂದ ರಾಮಾಸ್ತ್ರ ಪ್ರಯೋಗ: ರಾಮನ ಅಸ್ತಿತ್ವ ಪ್ರಶ್ನಿಸಿದ್ದ ಕಾಂಗ್ರೆಸ್‌ನಿಂದ ಲೋಕ ಸಮರ ಗೆಲ್ಲಲು ರಾಮಜಪ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆದಿರುವಾಗಲೇ ರೇಷ್ಮೆನಾಡು ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ರಾಮೋತ್ಸವ ಆಚರಣೆ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕರು ರಾಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

Ramjapa to win the Loksabha Election from the Congress who questioned the existence of Rama gvd

ಎಂ.ಅಫ್ರೋಜ್ ಖಾನ್

ರಾಮನಗರ (ಜ.15): ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆದಿರುವಾಗಲೇ ರೇಷ್ಮೆನಾಡು ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ರಾಮೋತ್ಸವ ಆಚರಣೆ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕರು ರಾಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸೇತು ಸಮುದ್ರಂ ವಿಚಾರದಲ್ಲಿ ಖ್ಯಾತೆ ತೆಗೆದು ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ, ಶ್ರೀ ರಾಮಜನ್ಮಭೂಮಿ ಶಿಲಾನ್ಯಾಸ ನಡೆದ ದಿನದಂದು ಕಪ್ಪು ಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದ್ದ ಹಾಗೂ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿಯುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಆದರೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರಿಂದಲೇ ರಾಮ ನಾಮ ಜಪ ಶುರುವಾಗಿದೆ. ಇದು ಹಿಂದೂ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.

ಚುನಾವಣೆ ಸಮಯದಲ್ಲಿ ಮಾತ್ರ ರಾಮಮಂದಿರ ಚರ್ಚೆ: ಸಚಿವ ಸಂತೋಷ ಲಾಡ್

ಕನಕೋತ್ಸವ ಮಾದರಿಯಲ್ಲಿ ರಾಮೋತ್ಸವ: ಕಾಂಗ್ರೆಸ್ ನಾಯಕರಾದ ಡಿ.ಕೆ ಸಹೋದರರು ಎರಡು - ಮೂರು ವರ್ಷಕ್ಕೊಮ್ಮೆ ಕನಕಪುರದಲ್ಲಿ ಮೂರು ದಿನಗಳ ಕಾಲ 'ಕನಕೋತ್ಸವ' ಸಮಾರಂಭ ಆಯೋಜಿಸುತ್ತಾ ಬಂದಿದ್ದಾರೆ. ಅದರಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಅದೇ ರೀತಿ ರಾಮನಗರದಲ್ಲಿಯೂ 'ರಾಮೋತ್ಸವ'  ನಡೆಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ಜನವರಿ ತಿಂಗಳ ಕೊನೆಯ ವಾರ ಅಥವಾ ಫೆಬ್ರವರಿ ತಿಂಗಳಲ್ಲಿ ಮೂರು ದಿನಗಳ ಕಾಲ ''''ರಾಮೋತ್ಸವ'''' ಆಚರಣೆ ಮಾಡಲು ಉದ್ದೇಶಿಸಲಾಗಿದೆ. ಸ್ಥಳೀಯ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಸಮಾರಂಭ ಆಯೋಜನೆಗೊಳ್ಳಲಿದ್ದು, ಇದರ ರೂಪುರೇಷೆಗಳನ್ನು ಸಿದ್ಧ ಪಡಿಸಲಾಗುತ್ತಿದೆ.

ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿಸುವ ಆಸೆ: ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಬಿಜೆಪಿ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣದ ದಾಳ ಉರುಳಿಸಿತ್ತು. ಶ್ರೀ ರಾಮ ಪಾದಸ್ಪರ್ಶ ಮಾಡಿದ ರಾಮದೇವರ ಬೆಟ್ಟದಲ್ಲಿ 100-120 ಕೋಟಿ ರುಪಾಯಿ ವೆಚ್ಚದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ಇದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್ )ಯನ್ನು ಸಿದ್ಧಪಡಿಸಿ, ದೇವಸ್ಥಾನದ ಅಭಿವೃದ್ಧಿ ವಿನ್ಯಾಸದ ಪ್ರಾತ್ಯಕ್ಷಿಕೆಯನ್ನು ಬಿಡುಗಡೆ ಮಾಡಿತ್ತು.

ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಶ್ವತ್ಥ ನಾರಾಯಣರವರ ಅಧ್ಯಕ್ಷತೆಯಲ್ಲಿ ಶ್ರೀ ರಾಮದೇವರ ಬೆಟ್ಟ ಅಭಿವೃದ್ಧಿ ಸಮಿತಿ ರಚಿಸಿ, ರದ್ದು ಮಾಡಲಾಗಿತ್ತು. ರಾಮದೇವರ ಬೆಟ್ಟದಲ್ಲಿ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಅಲ್ಲಿರುವ ರಣಹದ್ದುಗಳ ಆವಾಸ ಸ್ಥಾನಕ್ಕೂ ಯಾವುದೇ ಧಕ್ಕೆ ಆಗದಂತೆ ಎಚ್ಚರ ವಹಿಸಿ ಶ್ರೀ ರಾಮನ ದೇವಸ್ಥಾನವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು.

ಅಸಮಾಧಾನ ಹೊರ ಹಾಕಿದ್ದ ಎಚ್ಡಿಕೆ - ಡಿಕೆಶಿ: ಈ ವಿಚಾರ ಬಿಜೆಪಿ ಸರ್ಕಾರ ಹಾಗೂ ವಿರೋಧ ಪಕ್ಷದವರ ಮಾತಿನ ಸಮರಕ್ಕೂ ಕೂಡ ಕಾರಣವಾಗಿತ್ತು. ಆಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರು ವರ್ಷದಿಂದ ಮಾಡದವರು ಈಗ ರಾಮ ಮಂದಿರ ನಿರ್ಮಿಸುತ್ತೇವೆ ಎನ್ನುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಕರೆತಂದು ಇಲ್ಲಿ ಅಡಿಪಾಯ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಹಾಗೂ ಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಂದಿರ ನಿರ್ಮಿಸುವೆ ಎಂದಿದ್ದರು. ಇನ್ನು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ರಾಮ ಮಂದಿರವನ್ನಾದರು ಕಟ್ಟಲಿ, ಸೀತಾ ಮಂದಿರ, ಹನುಮಂತನ ಮಂದಿರ, ಶಿವ ಮಂದಿರವನ್ನಾದರೂ ಕಟ್ಟಲಿ. ಬೇಕಾದರೆ ತಮ್ಮದೇ ಮಂದಿರವನ್ನು ಕಟ್ಟಿಕೊಳ್ಳಲಿ. 

ನಾವೇನು ತಡೆಯೋದಿಲ್ಲ. ಸಿಟ್ಟಾಗುವುದೂ ಇಲ್ಲ. ಅವರನ್ನು ತಡೆದವರಾರು ಎಂದು ಪ್ರಶ್ನಿಸಿದ್ದರು. ಇಷ್ಟೆಲ್ಲವಾದರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮನ ಜಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು, ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಹಾಗೂ ರಾಮೋತ್ಸವ ಆಚರಣೆಗೆ ಒಲವು ತೋರುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದೂ ಮತಗಳ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆಯಾ ಎಂಬ ಚರ್ಚೆಗಳು ನಡೆಯುತ್ತಿವೆ.

ರಾಮದೇವರ ಬೆಟ್ಟದಲ್ಲಿ ಭವ್ಯವಾದ ಶ್ರೀ ರಾಮನ ಮಂದಿರ ನಿರ್ಮಿಸುತ್ತೇವೆ. ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವರ ಜೊತೆಗೂ ಚರ್ಚಿಸಲಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಬೆಟ್ಟದ ಅಭಿವೃದ್ಧಿಗೆ ಅನುದಾನ ನಿಗದಿಯಾಗಲಿದೆ.
-ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ

ಋಷ್ಯಶೃಂಗರಿಗೂ ಅಯೋಧ್ಯೆ ರಾಮನಿಗೂ ಅವಿನಾಭಾವ ಸಂಬಂಧ: ಋಷ್ಯಶೃಂಗೇಶ್ವರು ನಡೆಸಿದ ಯಾಗದ ಫಲದಿಂದಲೇ ಶ್ರೀರಾಮ ಜನನ!

ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಮತ್ತು ಸಂಸದ ಡಿ.ಕೆ.ಸುರೇಶ್ ರಾಮದೇವರ ಬೆಟ್ಟದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 20 ಎಕರೆ ಜಾಗ ಗುರುತಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಶ್ರೀ ರಾಮ ಬಿಜೆಪಿ ಸ್ವತ್ತಲ್ಲ, ಸಮಾಜದ ಸ್ವತ್ತು.
- ಎಚ್ .ಸಿ.ಬಾಲಕೃಷ್ಣ, ಶಾಸಕರು , ಮಾಗಡಿ ಕ್ಷೇತ್ರ.

ರಾಮಮಂದಿರ ನಿರ್ಮಿಸಲು ಉದ್ದೇಶಿಸಿರುವ ರಾಮದೇವರ ಬೆಟ್ಟ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಆದ್ದರಿಂದ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳಿಗೆ ಕೇಳಿದ್ದೇವೆ.
- ಡಿ.ಕೆ.ಸುರೇಶ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ.

Latest Videos
Follow Us:
Download App:
  • android
  • ios