ಸಿಡಿ ಪ್ರಕರಣದ ನಂತರ ಮೊದಲ ಬಾರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳ ಮುಂದೆ ಕಾಣಿಸಲಿದ್ದಾರೆ.

ಬೆಂಗಳೂರು, (ಮಾ.08): ಸಿಡಿ ಬಹಿರಂಗ ಪ್ರಕರಣದ ಬಳಿಕ ಮಾಧ್ಯಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ಅಂದ್ರೆ ಮಾ.09ರಂದು ಮೊದಲ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ರಮೇಶ್ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ನಾಳೆ (ಮಾ.09) ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಸಿಡಿ ಪ್ರಕರಣದ ನಂತರ ಮೊದಲ ಬಾರಿ ಮಾಧ್ಯಮಗಳ ಮುಂದೆ ಕಾಣಿಸಲಿರುವ ಮಾಜಿ ಸಚಿವರ ಈ ಸುದ್ದಿಗೋಷ್ಠಿ ಸಾಕಷ್ಟು ಕುತೂಹಲ ಕೆರಳಿಸಿದೆ. 

ಸೀಡಿ ಹರಿಬಿಟ್ಟವರ ವಿರುದ್ಧ 100 ಕೋಟಿ ಕೇಸ್‌!

ಸಿಡಿ ಬಹಿರಂಗವಾದ ಬಳಿಕ ರಾಜೀನಾಮೆ ನೀಡಿದ್ದ ರಮೇಶ್‌ ನಂತರ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಅಜ್ಞಾತ ಸ್ಥಳದಿಂದ ಆಚೆ ಬರಲಿದ್ದು, ಸುದ್ದಿಗೋಷ್ಠಿಯಲ್ಲಿ ಏನೆಲ್ಲಾ ಹೇಳಲಿದ್ದಾರೆ? ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.

ಈಗಾಗಲೇ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಸಿ.ಡಿ. ದೂರನ್ನು ವಾಪಸ್ ಪಡೆದುಕೊಂಡಿದ್ದಾರೆ. ದೂರು ಹಿಂಪಡೆದ ಬೆನ್ನಲ್ಲೇ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದರು. ಮೊದಲು ಧೈರ್ಯವಾಗಿ ಹೊರಬನ್ನಿ. ಮಾಧ್ಯಮಗಳಿಗೆ ಹೇಳಿಕೆ ಕೊಡಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್‌ಗೆ ಸಲಹೆ ಕೊಟ್ಟಿದ್ದರು.