ಬೆಂಗಳೂರು (ಮಾ.04):  ಸಿ.ಡಿ. ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ರಮೇಶ್‌ ಜಾರಕಿಹೊಳಿ ಬೆಂಬಲಕ್ಕೆ ಇಡೀ ಕುಟುಂಬ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿರುವ ಕೆಎಂಎಫ್‌ ಅಧ್ಯಕ್ಷರೂ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ, ಪ್ರಕರಣದ ಸಂಬಂಧ ಸಿಬಿಐ ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಸಿ.ಡಿ.ಬಿಡುಗಡೆ ಮಾಡಿ ನಮ್ಮ ಕುಟುಂಬದ ತೇಜೋವಧೆ ಮಾಡಿರುವ ವ್ಯಕ್ತಿ ವಿರುದ್ಧ ಒಂದು ವಾರದಲ್ಲಿ ನೂರು ಕೋಟಿ ರು. ಮೊತ್ತದ ಮಾನನಷ್ಟಮೊಕದ್ದಮೆ ಹಾಕಲಾಗುವುದು. ಈ ಸಂಬಂಧ ವಕೀಲರೊಂದಿಗೆ ಚರ್ಚೆ ನಡೆಸಲಾಗುವುದು. ಕಾನೂನು ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ತಪ್ಪು ಮಾಡಿಲ್ಲ ಎಂಬ ನಂಬಿಕೆ ಇದೆ. ಆತ ತಪ್ಪು ಮಾಡಿದ್ದರೆ ರಾಜ್ಯದ ಜನತೆಯ ಎದುರು ಕ್ಷಮೆಯಾಚಿಸಿ, ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ಹೇಳುತ್ತಿದ್ದೆ. ಸಂಪೂರ್ಣವಾಗಿ ಇದು ನಕಲಿ ಸಿ.ಡಿ. ಆಗಿದೆ ಎಂದು ಹೇಳಿದರು.

ಸಂಪುಟ ಸಭೆ ಆರಂಭದಲ್ಲೇ ಸಿಡಿದ ರಮೇಶ್ ಜಾರಕಿಹೊಳಿ ರಾಸಲೀಲೆ CD ..

ಸಿ.ಡಿ. ಬಿಡುಗಡೆ ಮಾಡಿದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಅದರಲ್ಲಿರುವ ಮಹಿಳೆಗೆ ಅನ್ಯಾಯವಾಗಿದೆ ಎಂದು ಹೇಳುತ್ತಾರೆ. ಯುವತಿಯ ಪೂರ್ವಾಪರವೇ ಹೇಳುತ್ತಿಲ್ಲ. ಇದು ಸಂಪೂರ್ಣವಾಗಿ ನಕಲಿಯಾಗಿದೆ. ತೇಜೋವಧೆ ಮಾಡುವ ಉದ್ದೇಶದಿಂದ ಸಿ.ಡಿ. ಬಿಡುಗಡೆ ಮಾಡಲಾಗಿದೆ. ದುಬೈ, ಸಿಂಗಾಪುರ ಅಥವಾ ರಷ್ಯಾದಿಂದ ಯೂಟ್ಯೂಬ್‌ ಮೂಲಕ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಪ್ರಕರಣದ ಸಂಬಂಧ ಸಿಬಿಐ ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮನವಿ ಮಾಡಲಾಗಿದೆ. ತನಿಖೆಯಿಂದ ಸಿ.ಡಿ. ಬಿಡುಗಡೆ ಮಾಡಿದ ವ್ಯಕ್ತಿ, ಯುವತಿ ಕುಟುಂಬ ಹಾಗೂ ಇವರ ಹಿಂದೆ ಯಾವ ರಾಜಕೀಯ ಪ್ರಭಾವಿಗಳಿದ್ದಾರೆ ಎಂಬುದು ಬೆಳಕಿಗೆ ಬರಲಿದೆ ಎಂದರು.

ರಮೇಶ್‌ ಜಾರಕಿಹೊಳಿ ಅವರು ಹೈಕಮಾಂಡ್‌ ಭೇಟಿಗೆ ಹೋಗುವುದಿಲ್ಲ. ಸದನದಲ್ಲಿ ವಿಪಕ್ಷಗಳನ್ನು ಎದುರಿಸಲು ಸಜ್ಜಾಗಿದ್ದೇವೆ. ಇದೇ ರೀತಿ ನಕಲಿ ವಿಡಿಯೋ ಬಿಡುಗಡೆ ಮಾಡುತ್ತಾ ಹೋದರೆ 224 ಶಾಸಕರ ಪೈಕಿ ಯಾರೊಬ್ಬರೂ ಸದನದಲ್ಲಿ ಇರುವುದಿಲ್ಲ. ವಿಪಕ್ಷಗಳಿಗೆ ತಕ್ಕ ಉತ್ತರ ನೀಡುತ್ತೇವೆ. ಯಾವ ರೀತಿಯಲ್ಲಿ ನಕಲಿ ಸಿ.ಡಿ. ಬಿಡುಗಡೆ ಮಾಡಲಾಗಿದೆ ಎಂಬ ಸ್ಪಷ್ಟಚಿತ್ರಣವನ್ನು ಸದನದಲ್ಲಿ ನೀಡಲಾಗುವುದು ಎಂದು ಆಕ್ರೋಶದಿಂದ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾಲಚಂದ್ರ, ಸಿ.ಡಿ. ಬಿಡುಗಡೆ ಮಾಡಿರುವ ವ್ಯಕ್ತಿ ಇದನ್ನು ಸಾಬೀತುಪಡಿಸಬೇಕು. ರಮೇಶ್‌ ಜಾರಕಿಹೊಳಿ ವಿರುದ್ಧ ಸಿ.ಡಿ. ಬಿಡುಗಡೆ ಮಾಡಿದ್ದಾನೆ ಎನ್ನಲಾದ ವ್ಯಕ್ತಿ ನೀಡಿದ್ದ ದೂರನ್ನು ಕಾನೂನಿನ ಪ್ರಕಾರ ಪೊಲೀಸರು ಸ್ವೀಕರಿಸಲು ಸಾಧ್ಯವಿಲ್ಲ. ಮಾಜಿ ಸಚಿವ ಎಚ್‌.ವೈ.ಮೇಟಿ ವಿಚಾರದಲ್ಲಿ ಈ ಹಿಂದೆ ಮಹಿಳೆ ದೂರು ನೀಡಿದ್ದರು. ಆದರೆ ರಮೇಶ್‌ ಜಾರಕಿಹೊಳಿ ಪ್ರಕರಣವೇ ಸುಳ್ಳು ಎಂದರು.