ರಾಮನಗರ :  ನಾನು ಯಾವುದೇ ಕಾರಣಕ್ಕೂ ಕೂಡ ರಾಜೀನಾಮೆ ವಿಚಾರವನ್ನು ಪ್ರಸ್ತಾಪ ಮಾಡಿಲ್ಲ. ಕಾರ್ಯಕರ್ತರ ಜೊತೆ ರಾಜಕೀಯದ ಬಗ್ಗೆ ಚರ್ಚೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ರಾಜೀನಾಮೆ ವಿಚಾರ ಏಕೆ ಬಂತು ಎಂದು ತಿಳಿದಿಲ್ಲ ಎಂದು ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಹೇಳಿದ್ದಾರೆ. 

ರಾಮನಗರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾಯಕರು ತಪ್ಪು ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕರು  ಅಭ್ಯರ್ಥಿಯನ್ನು ಹೈ ಜಾಕ್ ಮಾಡಿದ್ದಾರೆ. ಅಭ್ಯರ್ಥಿಗೆ ಹಣದ ಆಮಿಷ ನೀಡಿದ್ದಾರೆ.  ಒಂದು ವೇಳೆ ಆಮಿಷ ನೀಡದಿದ್ದಲ್ಲಿ ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ ಎಂದು ಹೇಳಿದ್ದಾರೆ. 

ನಮ್ಮ ಅಭ್ಯರ್ಥಿ ಮತ್ತೆ ವಾಪಸಾಗುವಾದ ಯಾರು ಇದ್ದರು, ಎಲ್ಲಿ ಇದ್ದರು ಎನ್ನುವ ಬಗ್ಗೆ ನಮ್ಮ ಬಳಿ ಸಂಪೂರ್ಣ ದಾಖಲೆಗಳಿವೆ. ಸೋಲುವ ಭೀತಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಮಹಾಷಯರು ಹುಟ್ಟಿದ ನಾಡಿನಲ್ಲಿ ಹುಟ್ಟಿ ಇಂತಹ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಜನರ ಭಾವನೆಯ ಜೊತೆ ಚೆಲ್ಲಾಟ ಆಡಬೇಡಿ ಎಂದು ಹೇಳಿರುವ ಅವರು ಹಣ, ಅಭ್ಯರ್ಥಿ ಇಲ್ಲದೇ ಮತದಾನ ಎದುರಿಸಿದ್ದೇವೆ ಎಂದಿದ್ದಾರೆ. 

ಇನ್ನು ಮಧ್ಯಾಹ್ನದ ವೇಳೆ ಶೇ.34 ಇದ್ದ ಮತದಾನ ಸಂಜೆ ವೇಳೆಗೆ 70ರಷ್ಟಾಯಿತು. ಗೂಂಡಾಗಿರಿ ಮಾಡಿ ಮತದಾನ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಯಾವ ನಾಯಕರಿಗೆ ಒಪ್ಪಿಗೆ ಇಲ್ಲದಿದ್ದರೂ ಸಹ ನಾವು ಅವರಿಗೆ ಟಿಕೆಟ್ ನೀಡಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಈ ರೀತಿ ಆಯ್ತು ಎಂದು ರುದ್ರೇಶ್ ಹೇಳಿದ್ದಾರೆ.