ಮುಖ್ಯಮಂತ್ರಿ ಆಗಬೇಕು ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಸೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಆಸೆ ಇದೆ. ಆಸೆ ಪಡುವುದರಲ್ಲಿ ತಪ್ಪಿಲ್ಲ.
ಬೆಂಗಳೂರು(ಜು.21): ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ, ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಿದ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕರು ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಬೇಕು ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಸೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಆಸೆ ಇದೆ. ಆಸೆ ಪಡುವುದರಲ್ಲಿ ತಪ್ಪಿಲ್ಲ. ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಆದರೆ ಒಬ್ಬರು ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಸಿಎಂ ಚರ್ಚೆ ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾಗಿ ನಮ್ಮಲ್ಲೂ ಚರ್ಚೆ ನಡೆಯುತ್ತಿದೆ. ಟೀವಿಗಳಲ್ಲಿ ಈ ಸುದ್ದಿ ಬರದಿದ್ದರೆ ಚರ್ಚೆಯೇ ನಡೆಯುವುದಿಲ್ಲ. ಗೊಂದಲ ಎಲ್ಲ ಪಕ್ಷಗಳಲ್ಲೂ ಇರುತ್ತದೆ. ನಮ್ಮಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಶಾಸಕರು, ಹೈಕಮಾಂಡ್ ನಿರ್ಧರಿಸುತ್ತದೆ ಎಂದು ವಿವರಿಸಿದರು.
ಸಿಎಂ ಆಗಲು ಒಕ್ಕಲಿಗರ ಬೆಂಬಲ ಕೋರಿದ ಡಿಕೆಶಿ ಒಬ್ಬ ಜಾತಿವಾದಿ: ಕೆ.ಎಸ್.ಈಶ್ವರಪ್ಪ
ಸಂಘಟನೆಗಾಗಿ ಸಮಾವೇಶ:
ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆಯ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಹಲವು ಸಮಾಜಗಳ ಸಮಾವೇಶಗಳು ನಡೆಯಲಿವೆ. ರೆಡ್ಡಿ ಸಮುದಾಯದ ಸಮಾವೇಶದಲ್ಲಿ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಆಗಲಿ ಎಂದು ಸಮಾಜದವರು ಹೇಳುತ್ತಾರೆ. ಒಕ್ಕಲಿಗರ ಸಮಾವೇಶದಲ್ಲಿ ಒಕ್ಕಲಿಗರು ಸಿಎಂ ಆಗಲಿ ಎನ್ನುತ್ತಾರೆ. ಲಿಂಗಾಯತರ ಸಮಾವೇಶದಲ್ಲಿ ಲಿಂಗಾಯತರು ಸಿಎಂ ಆಗಲಿ ಎನ್ನುತ್ತಾರೆ. ಬ್ರಾಹ್ಮಣರ ಸಮಾವೇಶದಲ್ಲಿ ಬ್ರಾಹ್ಮಣರೇ ಸಿಎಂ ಆಗಲಿ ಎಂದು ಒತ್ತಾಯಿಸುತ್ತಾರೆ ಎಂದು ವ್ಯಾಖ್ಯಾನಿಸಿದರು.
ನನಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು. ಹೊಸ ಪೀಳಿಗೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬ ಆಸೆ ಇದೆ ಎಂದು ರಾಮಲಿಂಗಾರೆಡ್ಡಿ ಹೇಳುತ್ತಿದ್ದಂತೆ, ಬೆಂಬಲಿಗರು, ‘ಮುಂದಿನ ಮುಖ್ಯಮಂತ್ರಿ ರಾಮಲಿಂಗಾರೆಡ್ಡಿ ಅವರಿಗೆ ಜೈ’ ಎಂದು ಘೋಷಣೆ ಕೂಗಿದರು. ಆಗ ಬೆಂಬಲಿಗರನ್ನು ಗದರಿದ ರಾಮಲಿಂಗಾರೆಡ್ಡಿ, ಈ ರೀತಿ ಘೋಷಣೆ ಕೂಗಬೇಡಿ ಎಂದು ಹೇಳಿದರು.
