ಈ ಹಿಂದೆ ವ್ಯಕ್ತಿ ಪೂಜೆ ಮಾಡಲ್ಲ, ಜಾತಿವಾದ ಮಾಡಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದೀಗ ಮುಖ್ಯಮಂತ್ರಿ ಆಗಲು ತನ್ನ ಹಿಂದೆ ಒಕ್ಕಲಿಗರು ನಿಲ್ಲಬೇಕು ಎಂದು ಹೇಳಿಕೆ ನೀಡುವುದರ ಮೂಲಕ ಅವರು ಕೂಡ ಜಾತಿವಾದಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ರಾಜದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.

ಶಿವಮೊಗ್ಗ (ಜು.20) : ಈ ಹಿಂದೆ ವ್ಯಕ್ತಿ ಪೂಜೆ ಮಾಡಲ್ಲ,ಜಾತಿವಾದ ಮಾಡಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದೀಗ ಮುಖ್ಯಮಂತ್ರಿ ಆಗಲು ತನ್ನ ಹಿಂದೆ ಒಕ್ಕಲಿಗರು ನಿಲ್ಲಬೇಕು ಎಂದು ಹೇಳಿಕೆ ನೀಡುವುದರ ಮೂಲಕ ಅವರು ಕೂಡ ಜಾತಿವಾದಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ರಾಜದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯ(Siddaramaiah) ಈಗಾಗಲೇ ಜಾತಿವಾದಿ ಎಂದು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಈಗ ಒಕ್ಕಲಿಗರನ್ನು ಎಳೆದು ತಂದು ಡಿ.ಕೆ. ಶಿವಕುಮಾರ್(D.K.Shivakumar) ತಾನು ಕೂಡ ಜಾತಿವಾದಿ ಎಂದು ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಮನಗರದಲ್ಲಿ ಒಕ್ಕಲಿಗರ ಬೆಂಬಲ ಕೇಳಿದ ಡಿಕೆಶಿ, ಇದಕ್ಕೆ ಎಚ್‌ಡಿಕೆ ಹೇಳಿದ್ದಿಷ್ಟು

ಕಾಂಗ್ರೆಸ್(Congress) ನವರು ಜಾತಿವಾದಿಗಳು ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಒಕ್ಕಲಿಗರು ರಾಷ್ಟ್ರೀಯವಾದಿಗಳು(Nationalist) ಎಂದು ಬಿಜೆಪಿ(BJP) ಜೊತೆ ನಿಂತಿದ್ದಾರೆ. ಜಾತಿ, ಧರ್ಮ ವಿಚಾರ ನೋಡದೇ ನಮ್ಮ ಸರ್ಕಾರ ಎಲ್ಲವೂ ಮಾಡಿದೆ. ಎಸ್.ಎಂ. ಕೃಷ್ಣ(S.M.Krishna) ಬಳಿಕ ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದು ಕೂಡ ತಪ್ಪು. ಇದನ್ನು ಒಕ್ಕಲಿಗರು ಕೂಡ ಒಪ್ಪುವುದಿಲ್ಲ ಎಂದರು.

ಕೆಂಗಲ್ ಹನುಮಂತಯ್ಯ(Kengal Hanumantaiah), ಎಸ್.ಎಂ. ಕೃಷ್ಣ ಅವರಂತಹ ವ್ಯಕ್ತಿಗಳ ರಕ್ತ ಹರಿಯುತ್ತಿರುವ ಸಮುದಾಯ ಅದು.
ಜನರ ಜೊತೆಗೆ ಸ್ವತಃ ಕಾಂಗ್ರೆಸ್ ನವರೇ ಈ ಮಾತನ್ನು ಒಪ್ಪುವುದಿಲ್ಲ. ಜಾತಿ, ಧರ್ಮ ನೋಡದೇ ಒಕ್ಕಲಿಗರು ರಾಷ್ಟ್ರೀಯತೆಗೆ ಒತ್ತು ನೀಡಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಅದ್ಧೂ​ರಿ ಜನ್ಮದಿನ ಆಚರಿಸುವ ಸಿದ್ದರಾಮಯ್ಯ ಯಾವ ಸಮಾಜವಾದಿ: ಈಶ್ವರಪ್ಪ

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನ್ಯಾವುದೇ ಕಾರಣಕ್ಕೂ ಜಾತಿ ವಿಚಾರ ತರಲ್ಲ ಎಂದು ಹೇಳಿದ್ದ ಶಿವಕುಮಾರ್ ಇದೀಗ ನನಗೆ ಮುಖ್ಯಮಂತ್ರಿ ಮಾಡಿ ಎಂದಿದ್ದಾರೆ. ಜಾತಿ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಅವರ ಪಕ್ಷದ ನಾಯಕರು ಕೂಡ ಅದನ್ನು ಖಂಡನೆ ಮಾಡಬೇಕು ಎಂದರು.

ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧವೂ ಕೂಡ ಕಿಡಿ ಕಾರಿದ ಈಶ್ವರಪ್ಪ, ಹೈಲೈಟ್ ಆಗಿ ಮುಖ್ಯಮಂತ್ರಿ ಆಗಿದ್ದವರೇ ಈಗ ಮನೆಗೆ ಹೋದ್ರು.‌ಜನರು ಇವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿಲ್ವಾ? ಮುಖ್ಯಮಂತ್ರಿ ಸ್ಥಾನ ಕಿತ್ತು ಬಿಸಾಕಿಲ್ವಾ? ಇನ್ನೂ ಯಾವತ್ತೋ ಚುನಾವಣೆ ಇದೆ. ಇನ್ನೂ ಹೆಣ್ಣೆ ಹುಡುಕಿಲ್ಲ, ನಿಶ್ಚಿತಾರ್ಥ ಆಗಿಲ್ಲ. ಇನ್ನೂ ಮದುವೆನೇ ಆಗಿಲ್ಲ. ಆಗಲೇ ಮುಖ್ಯಮಂತ್ರಿ ನಾವು ಎಂದು ಇಬ್ಬರು ಹೇಳುತ್ತಿದ್ದಾರೆ. ಆ ಮುಖ್ಯಮಂತ್ರಿಗೆ, ಮಗುವಿಗೆ ಇಬ್ಬಿಬ್ರು ಅಪ್ಪ ಆಗಲು ಸಾಧ್ಯವೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಇವರಿಬ್ಬರಿಗೆ ಉಗಿಯೋರು ಇಲ್ವಾ? ಛೀಮಾರಿ ಹಾಕುವವರು ಇಲ್ವಾ? ಇನ್ಯಾವತ್ತೋ ಚುನಾವಣೆ ಬರುತ್ತದೆ. ಈ ರಾಜ್ಯದ ಜನ ಯಾವತ್ತೋ ಇವರನ್ನು ಸೋಲಿಸಿಯಾಗಿದೆ. ಈಗಲೇ ಜಾತಿ ಮುಂದಿಟ್ಟುಕೊಂಡು ಇವರಿಬ್ಬರು ಮುಖ್ಯಮಂತ್ರಿ ಆಗಲು ಹೊರಟಿದ್ದಾರಲ್ಲಾ ಇದಕ್ಕೆ ಏನನ್ನಬೇಕು? ಕುರುಬರು, ಒಕ್ಕಲಿಗರು ಇವರಿಬ್ಬರನ್ನು ಒಪ್ಪಿಲ್ಲ. ಯಾವುದೇ ಕಾಲಕ್ಕೂ ಇವರನ್ನು ಈ ಎರಡೂ ಜಾತಿಯವರು ಒಪ್ಪುವ ಪ್ರಶ್ನೆಯೇ ಇಲ್ಲ ಎಂದರು.

ರಾಜ್ಯದ ಜನ ಇವರಿಗೆ ಜಾತಿವಾದಿ ಎಂದು ಮತ್ತೊಮ್ಮೆ ಮನೆಗೆ ಕಳಿಸ್ತಾರೆ.‌ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಸ್ಥಾನ ನೀಡಿ ಬಿಜೆಪಿಯನ್ನೇ ಅಧಿಕಾರಕ್ಕೆ ತರುತ್ತಾರೆ. ಬಿಜೆಪಿಯವರೇ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಬಾದಮಿಯಲ್ಲಿಯೂ ನಿಲ್ಲಲ್ಲ, ಚಾಮುಂಡೇಶ್ವರಿಯಲ್ಲೂ ನಿಲ್ಲಲ್ಲ.‌ ಅಲ್ಲಿ ನಿಂತರೆ ಸೋಲುವುದು ಖಚಿತ ಎನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ನಿಲ್ಲೋದೇ ಚಾಮರಾಜಪೇಟೆಯಲ್ಲಿ, ಜಮೀರ್ ಅಹಮದ್ ಹತ್ರಾನೆ. ಅಲ್ಲಿ ಮುಸಲ್ಮಾನರು ಅತಿ ಹೆಚ್ಚಿದ್ದಾರೆ. ಅಲ್ಲಿ ಓಟ್ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ರಾಹುಲ್ ಗಾಂಧಿ ಹೇಗೆ ಕೇರಳಕ್ಕೆ ಹೋದರೋ ಹಾಗೇ ಇವರು ಚಾಮರಾಜಪೇಟೆಗೆ ಹೋಗ್ತಾರೆ. ನೋಡೊಣ ಅಲ್ಲಿ ಏನಾಗುತ್ತೆ ಎಂದು ಹೇಳಿದರು.