ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಛಿದ್ರವಾಗಲಿದೆ. ಕ್ಷೇತ್ರಕ್ಕೆ ಅನುದಾನ ಸಿಗದೇ ಬೇಸತ್ತಿರುವ ಶಾಸಕರು ರಾಜ್ಯ ಸಭಾ ಚುನಾವಣೆಯಲ್ಲಿ ಕೈಕೊಡುವ ಆತಂಕ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದರು.


ಕೋಲಾರ (ಫೆ.26): ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಛಿದ್ರವಾಗಲಿದೆ. ಕ್ಷೇತ್ರಕ್ಕೆ ಅನುದಾನ ಸಿಗದೇ ಬೇಸತ್ತಿರುವ ಶಾಸಕರು ರಾಜ್ಯ ಸಭಾ ಚುನಾವಣೆಯಲ್ಲಿ ಕೈಕೊಡುವ ಆತಂಕ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದರು.

ತಾಲೂಕಿನ ಶಿಳ್ಳಂಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎನ್‌ಡಿಎ ಮೈತ್ರಿಕೂಟ ಸುಭದ್ರವಾಗಿದೆ, ಐಎನ್‌ಡಿಐಎದ ಅಂಗ ಪಕ್ಷಗಳು ಈಗಾಗಲೇ ಕಿತ್ತುಕೊಂಡು ಹೋಗಿ ಕಾಂಗ್ರೆಸ್ಸನ್ನು ಏಕಾಂಗಿ ಮಾಡಿಬಿಟ್ಟಿವೆ ಎಂದರು.

ನಮಗೆ ಜೆಡಿಎಸ್ ಬಿಜೆಪಿ ಭಯ ಇಲ್ಲ; ಕೆಲಸದ ಒತ್ತಡದಿಂದ ರಿಲ್ಯಾಕ್ಸ್ ಬೇಕಿತ್ತು ರೆಸಾರ್ಟ್‌ಗೆ ಬಂದಿದ್ದೇವೆ: ಸಚಿವ ಚಲುವರಾಯಸ್ವಾಮಿ

ಒಲೈಕೆ ರಾಜಕಾರಣ:

ಡಿಜಿ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರನ್ನು ವೋಟಿಗಾಗಿ ಖುಲಾಸೆ ಮಾಡುವ ಕಾಂಗ್ರೆಸ್ ಸಂಸ್ಕೃತಿಯ ಬಗ್ಗೆ ಜನತೆಗೆ ಅರಿವಾಗಿದೆ, ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟವರನ್ನು ಇವರು ಕ್ಷಮಿಸುತ್ತಾರೆ ಎಂದರೆ ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

ದೇಶದ ೧೮ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಎಲ್ಲೂ ದಲಿತರ ಹಣ ಬೇರೆ ಉದ್ದೇಶಗಳಿಗೆ ಬಳಸಿಕೊಂಡ ನಿದರ್ಶನಗಳಿಲ್ಲ, ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎಸ್ಸಿಪಿ, ಎಸ್ಟಿಪಿ ಯೋಜನೆಯಡಿ ಕಳೆದ ವರ್ಷದ ೧೧ ಸಾವಿರ ಕೋಟಿ, ಪ್ರಸ್ತುತ ಸಾಲಿನ ೧೪೨೮೦ ಕೋಟಿ ರೂ ದುರ್ಬಳಕೆ ಮಾಡಿಕೊಂಡಿದೆ. ಈ ಹಣ ದಲಿತರಿಗೆ ಕೊಟ್ಟರೆ ಅನೇಕ ಕಾಲೋನಿಗಳು ಅಭಿವೃದ್ದಿಯಾಗುತ್ತಿದ್ದವು ಎಂದರು.

ಅಮೃತ್‌ ಸ್ಟೇಷನ್‌ಗೆ ಮೋದಿ ಚಾಲನೆ:

ಫೆ.೨೬ ರಂದು ಅಮೃತ್‌ಸ್ಟೇಷನ್‌ಗೆ ಶಿಲಾನ್ಯಾಸ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ನಡೆಸಲಿದ್ದು, ಅಂದು ಬೆಳಗ್ಗೆ ೧೦.೪೫ ಗಂಟೆಗೆ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಹೈಟೆಕ್ ನಿಲ್ದಾಣಗಳಾಗಿ ಬದಲಾಗುತ್ತಿರುವ ಮಾಲೂರು, ಬಂಗಾರಪೇಟೆ ರೈಲ್ವೆ ನಿಲ್ದಾಣ ಹಾಗೂ ನಂ.೧೬೬ ಲೆವಲ್ ಕ್ರಾಸಿಂಗ್ ಮೇಲ್ಸೇತುವೆಗೆ ಆಧುನಿಕ ಸ್ಪರ್ಶ ಸಿಗಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಶಿಳ್ಳೆಂಗೆರೆ ಮಹೇಶ್ ಇದ್ದರು.