ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಬಗ್ಗೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿದ ಟೀಕೆಗಳ ಕಾರಣ, ರಾಜ್ಯಸಭೆಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರವೂ ಗದ್ದಲವೆದ್ದಿದ್ದು. ಪರಿಣಾಮವಾಗಿ ಕಲಾಪವನ್ನು ಮತ್ತೆ ದಿನ ಮಟ್ಟಿಗೆ ಮುಂದೂಡಲಾಗಿದೆ.
ನವದೆಹಲಿ (ಡಿ.13): ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಬಗ್ಗೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿದ ಟೀಕೆಗಳ ಕಾರಣ, ರಾಜ್ಯಸಭೆಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರವೂ ಗದ್ದಲವೆದ್ದಿದ್ದು. ಪರಿಣಾಮವಾಗಿ ಕಲಾಪವನ್ನು ಮತ್ತೆ ದಿನ ಮಟ್ಟಿಗೆ ಮುಂದೂಡಲಾಗಿದೆ. ಸಭಾಧ್ಯಕ್ಷರಾಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆಡಳಿತ ಪಕ್ಷದ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸಲ್ಲಿಸಿದ್ದ ಅವಿಶ್ವಾಸ ನಿರ್ಣಯ ಹಾಗೂ ಆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯನ್ನು ಟೀಕಿಸಿದ ಬಿಜೆಪಿ ನಾಯಕ ಜೆ.ಪಿ. ನಡ್ಡಾ, ‘ಸಭಾಧ್ಯಕ್ಷರ ಆಡಳಿತವನ್ನು ಪ್ರಶ್ನಿಸಲಾಗದು. ಹಾಗೆ ಮಾಡಿದರೆ ಅದು ಅವರಿಗೆ ಹಾಗೂ ಸದನಕ್ಕೆ ಅವಮಾನ ಮಾಡಿದಂತೆ’ ಎಂದರು.
ಬಳಿಕ, ‘ಸೋನಿಯಾ ಗಾಂಧಿ ಹಾಗೂ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ನಡುವೆ ಯಾವ ಸಂಬಂಧವಿದೆ ಎಂಬುದನ್ನು ಜನ ತಿಳಿಯಬಯಸಿದ್ದಾರೆ’ ಎಂದು ನಡ್ಡಾ ಪ್ರಶ್ನಿಸಿದರು. ಈ ವೇಳೆ ಗದ್ದಲ ಸೃಷ್ಟಿಯಾಗಿದ್ದು, ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ನಂತರದ ಕಲಾಪವೂ ಸುಸೂತ್ರವಾಗಿ ನಡೆಯದ ಕಾರಣ ಅದನ್ನು ದಿನ ಮಟ್ಟಿಗೆ ಮುಂದೂಡಲಾಯಿತು. ಅತ್ತ ಲೋಕಸಭೆಯಲ್ಲಿ ಗುರುವಾರ ಕಲಾಪ ನಡೆಯಿತಾದರೂ, ಸೊರೋಸ್- ಸೋನಿಯಾ ನಂಟು ಕುರಿತ ಚರ್ಚೆ ಅದಕ್ಕೆ ಅಡ್ಡಿಯಾಯಿತು.
ಭವಿಷ್ಯದ ಗಗನಯಾನ ಯೋಜನೆಗೆ ಬಳಸುವ ಸಿಇ20 ಕ್ರಯೋಜನಿಕ್ ಎಂಜಿನ್‌ನ ಯಶಸ್ವಿ ಪರೀಕ್ಷೆ
ಸಂಸತ್ ಅಧಿವೇಶನದಲ್ಲಿ ನಿಲ್ಲದ ಗದ್ದಲ: ಹಲವು ಮಹತ್ವಪೂರ್ಣ ವಿಷಯಗಳು ಚರ್ಚೆಯಾಗಬೇಕಿದ್ದ ಚಳಿಗಾಲದ ಅಧಿವೇಶನದಲ್ಲಿ ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ವಿಪಕ್ಷ ಹಾಗೂ ಸರ್ಕಾರದ ನಡುವೆ ಸಂಸತ್ತಿನಲ್ಲಿ ಜಟಾಪಟಿ ನಡೆಯುತ್ತಿರುವ ಬಗ್ಗೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಎಕ್ಸ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ ಭಾರತದ ಸಂಸತ್ತಿನ ಕಲಾಪದಲ್ಲಿ ಅಡಚಣೆಯುಂಟಾಗುತ್ತಿರುವುದು ನಿರಾಶಾದಾಯಕವಾಗಿದೆ. ಉದ್ಯಮಿಗಳು ಹಾಗೂ ಉದ್ಯೋಗ ದಾತರು ರಾಜಕೀಯ ಚರ್ಚೆಯ ವಿಷಯ ಆಗಬಾರದು. ಭಿನ್ನಾಭಿಪ್ರಾಯಗಳನ್ನು ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬಹುದು. ಉದ್ಯಮಗಳು ಅಭಿವೃದ್ಧಿಯಾಗಲೇ ದೇಶವು ಭವ್ಯ ಭಾರತವಾಗಲು ಸಾಧ್ಯ’ ಎಂದು ಬರೆದಿದ್ದಾರೆ.
ಇಂದು, ನಾಳೆ ಲೋಕಸಭೆಯಲ್ಲಿ ಸಂವಿಧಾನ ಚರ್ಚೆ: ಸಂವಿಧಾನ ಅಂಗೀಕಾರವಾಗಿ 75 ವರ್ಷ ಸಂದಿರುವ ನಿಮಿತ್ತ ಸಂಸತ್ತಿನಲ್ಲಿ ಶುಕ್ರವಾರದಿಂದ ಚರ್ಚೆ ಆರಂಭವಾಗಲಿದೆ.ಡಿ.13 ಹಾಗೂ 14ರಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಇನ್ನು ಡಿ.16, 17ರಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆಗೆ ಚಾಲನೆ ನೀಡಲಿದ್ದಾರೆ. ಚರ್ಚೆಗೆ ಡಿ.14 ಹಾಗೂ 17ರಂದು ಕ್ರಮವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಲಿದ್ದಾರೆ.ಸಂವಿಧಾನಕ್ಕೆ ಅಪಚಾರ ಎಸಗಲಾಗುತ್ತಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿವೆ. ಹೀಗಾಗಿ ಚರ್ಚೆ ಕಾವೇರುವ ಸಾಧ್ಯತೆ ಇದೆ.
1991ರ ಪೂಜಾ ಸ್ಥಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ: ಮಂದಿರ, ಮಸೀದಿ ಸರ್ವೇಗೆ ಸುಪ್ರೀಂ ತಡೆ
ರಿಜಿಜುಗೆ ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಹಕ್ಕುಚ್ಯುತಿ ನೋಟಿಸ್: ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿಪಕ್ಷ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಟಿಎಂಸಿಯ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.‘ರಿಜಿಜು ಅವರು ಕಲಾಪವನ್ನು ಸುಸೂತ್ರವಾಗಿ ಮುನ್ನಡೆಸುವ ತಮ್ಮ ಕರ್ತವ್ಯವನ್ನು ನಿಭಾಯಿಸುವ ಬದಲು ವಿಪಕ್ಷಗಳನ್ನು ಅವಮಾನಿಸುತ್ತಾ, ನೀವೆಲ್ಲಾ ಸದನದಲ್ಲಿರಲು ಅಯೋಗ್ಯರು ಎಂದರು. ಜೊತೆಗೆ ಅಸಂಸದೀಯ ಪದಗಳನ್ನು ಬಳಸಿ ವೈಯಕ್ತಿಕ ಟೀಕೆಗಳನ್ನೂ ಮಾಡಿದರು. ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಸಾಗರಿಕಾ ಆರೋಪಿಸಿದ್ದಾರೆ. ಇದನ್ನು ಬೆಂಬಲಿಸಿ ವಿಪಕ್ಷದ 60 ನಾಯಕರು ಹಕ್ಕುಚ್ಯುತಿ ನೋಟಿಸ್‌ಗೆ ಸಹಿ ಹಾಕಿದ್ದಾರೆ.
