ಚೆನ್ನೈ(ಡಿ.29): ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ದಕ್ಷಿಣ ಭಾರತದ ಪ್ರಖ್ಯಾತ ನಟ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆನ್ನಲಾಗಿತ್ತು. ಆದರೀಗ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆ ತಾವು ರಾಜಕೀಯದಿಂದ ದೂರ ಉಳಿಯುತ್ತಿರುವುದಾಗಿ ಘೋಷಿಸಿದ್ದಾರೆ ಹಾಗೂ ತಮ್ಮ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ.

ರಜನೀಕಾಂತ್ ಡಿಸೆಂಬರ್ 31ರಂದು ತಮ್ಮ ರಾಜಕೀಯ ಪಕ್ಷ ಘೋಷಿಸುವ ಯೋಜನೆಯಲ್ಲಿರಿದ್ದರು. ಆದರೆ ಈ ನಡುವೆ 'ಅನ್ನತ್ತೆ' ಚಿತ್ರದ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಿದ್ದ ರಜನೀಕಾಂತ್ ಚಿತ್ರತಂಡದ ಸದಸ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ನಟ ರಜನೀಕಾಂತ್ ಕೂಡಾ ಕ್ವಾರಂಟೈನ್ ಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ತೀವ್ರ ರಕ್ತದೊತ್ತಡ ಮತ್ತು ಉಸಿರಾಟ ಸಮಸ್ಯೆಯುಂಟಾಗಿ ಡಿಸೆಂಬರ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಬಂದಿತ್ತು.

ಬಳಿಕ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದ ರಜನಿಕಾಂತ್ ಅವರಿಗೆ ವೈದ್ಯರು ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ಮಹತ್ವದ ಘೋಷಣೆ ಮಾಡಿರುವ ರಜನೀಕಾಂತ್, ತಮ್ಮ ಅನಾರೋಗ್ಯ ಕಾರಣದಿಂದ ತಳಮಟ್ಟದಲ್ಲಿ ಕೆಲಸ ಮಾಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ, ಕೇವಲ ಸೋಷಿಯಲ್ ಮೀಡಿಯಾ ಮತ್ತು ವರ್ಚುವಲ್ ಮಾಧ್ಯಮ ಮೂಲಕವೇ ಸದ್ಯದ ಮಟ್ಟಿಗೆ ಸಾಧ್ಯ. ನಾನು ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ, ಚುನಾವಣಾ ರಾಜಕೀಯಕ್ಕೆ ಸೇರ್ಪಡೆಯಾಗದೆ ನನ್ನಿಂದಾದ ಮಟ್ಟಿಗೆ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಪಕ್ಷ ಸ್ಥಾಪನೆ ಮಾಡದಿರುವುದಕ್ಕೆ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ. 

ರಜನೀಕಾಂತ್ ರಾಜಕೀಯ ಪ್ರವೇಶದ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರೆ ನಿರ್ಣಾಯಕ ಪಾತ್ರ ವಹಿಸುವ ಅನುಮಾನವೂ ವ್ಯಕ್ತವಾಗಿತ್ತು.