Asianet Suvarna News Asianet Suvarna News

ಗೆಹ್ಲೋಟ್ ಆಪ್ತ ಸಚಿವರ ವಜಾಗೆ ಪೈಲೆಟ್ ಬಣ ಆಗ್ರಹ, ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ಬಣಗಳ ನಡುವಿನ ಸಮರ ಮತ್ತೆ ಹೊಸ ರೂಪ ಪಡೆದುಕೊಂಡಿದೆ. ಗೆಹ್ಲೋಟ್ ಸಂಪುಟದ ಮೂವರು ಸಚಿವರನ್ನು ವಜಾಗೊಳಿಸಲು ಸಚಿನ್ ಬಣ ಆಗ್ರಹಿಸಿದೆ. ಈ ನಡೆಯಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಬುಡ ಅಲುಗಾಡ ತೊಡಗಿದೆ

Rajasthan Political crisis Sachin Pilot camp urge to sack 3 mla from cm Ashok gehlot camp ckm
Author
First Published Nov 2, 2022, 8:12 PM IST

ಜೈಪುರ(ನ.02):  ಕಾಂಗ್ರೆಸ್ ಯಾವುದೇ ಮೈತ್ರಿಮಾಡಿಕೊಳ್ಳದೆ, ಏಕಾಂಗಿಯಾಗಿ ಅಧಿಕಾರ ನಡೆಸುತ್ತಿರುವ ರಾಜ್ಯ ರಾಜಸ್ಥಾನ. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಹೆಜ್ಜೆ ಹೆಜ್ಜೆಗೆ ಸಂಕಷ್ಟ ಅನುಭವಿಸುತ್ತಿದೆ. ರಾಜಸ್ಥಾನದಲ್ಲಿ ವಿರೋಧ ಪಕ್ಷಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಪಕ್ಷದೊಳಗೇ ಸಮಸ್ಯೆ ಹೆಚ್ಚಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣ ನಡುವಿನ ಗುದ್ದಾಟ ಇದೀಗ ಮತ್ತೆ ಶುರುವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಗೆಹ್ಲೋಟ್ ಆಪ್ತರು, ಮೂವರು ಸಚಿವರ ವಜಾಗೆ ಸಚಿನ್ ಪೈಲೆಟ್ ಬಣ ಆಗ್ರಹಿಸಿದೆ. ಪೈಲೆಟ್ ಬಣದ ಸಚಿವ ರಾಜೇಂದ್ರ ಸಿಂಗ್ ಗುಧಾ ಈ ಆಗ್ರಹ ಮಾಡಿದ್ದಾರೆ. ಇಷ್ಟೇ ಅಲ್ಲ ಸಂಪುಟ ಸಭೆ ಕರೆದು ರಾಜಸ್ಥಾನ ಸಿಎಂ ಕುರಿತು ತೀರ್ಮಾನ ಮಾಡುವಂತೆ ಆಗ್ರಹಿಸಿದ್ದಾರೆ.

ಸಿಎಲ್‌ಪಿ ಸಭೆ ಕರೆದು ಸಿಎಂ ಅಶೋಕ್ ಗೆಹ್ಲೋಟ್ ಮೂವರು ಸಚಿವರ ರಾಜೀನಾಮೆ ಕೊಡಿಸಬೇಕು. ಕಳೆದ ತಿಂಗಳ ಕಾಂಗ್ರೆಸ್ ಹೈಕಮಾಂಡ್ ಸದಸ್ಯ ಕೆಸಿ ವೇಣುಗೋಪಾಲ್ ಈ ಕುರಿತು ಭರವಸೆ ನೀಡಿದ್ದರು. ಮೂವರು ಸಚಿವರ ರಾಜೀನಾಮೆ ವಿಚಾರ ಅಂತಿಮವಾಗಿ ಸಿಎಂ ತೆಗೆದುಕೊಳ್ಳಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದ್ದರು. ಆದರೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರಾಂಜೇಂದ್ರ ಸಿಂಗ್ ಗುಧಾ ಹೇಳಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿರುಗಾಳಿ, ರಾಜೀನಾಮೆ ನೀಡ್ತಾರಾ ಸಿಎಂ ಗೆಹ್ಲೋಟ್?

ಅಶೋಕ್ ಗೆಹ್ಲೋಟ್ ಆಪ್ತರ ವಿರುದ್ಧ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನೋಟಿಸ್ ನೀಡಿಲ್ಲ. ಇದು ಹೇಗೆ ಸಾಧ್ಯ. ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ನಿರ್ಧಾರ ಹೇಳಬೇಕು. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಯಾವುದೇ ಅಡೆ ತಡೆ ಇಲ್ಲದೆ ಆಡಳಿತ ನಡೆಸಲು ಕಠಿಣ ಕ್ರಮಗಳು ಅಗತ್ಯ ಎಂದು ಪೈಲೆಟ್ ಬಣದ ಸಚಿವ ಆಗ್ರಹಿಸಿದ್ದಾರೆ.

ಬಂಡಾಯವೆದ್ದ ಗೆಹ್ಲೋಟ್‌ ಬಣದ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬುಧವಾರ ಮತ್ತೆ ಆಂತರಿಕ ಸಂಘರ್ಷ ಭುಗಿಲೆದ್ದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಆಪ್ತ ಶಾಸಕರು ಎದ್ದಿದ್ದ ಬಂಡಾಯ ಹಾಗೂ ಗೆಹ್ಲೋಟ್‌ ಅವರನ್ನು ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದನ್ನು, ಸಿಎಂ ವಿರೋಧಿ ಬಣದ ನಾಯಕ ಸಚಿನ್‌ ಪೈಲಟ್‌ ಪ್ರಸ್ತಾಪಿಸಿದ್ದಾರೆ ಹಾಗೂ ಗೆಹ್ಲೋಟ್‌ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸೆಪ್ಟೆಂಬರ್‌ನಲ್ಲಿ ವಿವಾದ ಸೃಷ್ಟಿಯಾದ ಬಳಿಕ ಮೂವರು ಕಾಂಗ್ರೆಸ್‌ ನಾಯಕರಿಗೆ (ಎಲ್ಲರೂ ಗೆಹ್ಲೋಟ್‌ ಆಪ್ತರು) ಹೈಕಮಾಂಡ್‌ ಶಿಸ್ತು ನೋಟಿಸ್‌ ನೀಡಿತ್ತು. ಹೊಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಮುಂದಿನ ಕ್ರಮ ಕೈಗೊಳ್ಳುವರು ಎಂಬ ವಿಶ್ವಾಸವಿದೆ’ ಎಂದು ಬುಧವಾರ ಪೈಲಟ್‌ ಹೇಳಿದರು.

ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಹೊಗಳಿದ ಮೋದಿ!

‘ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ರಾಜಸ್ಥಾನದಲ್ಲಿ ನಡೆದ ಸಭೆಯಲ್ಲಿ ಗೆಹ್ಲೋಟ್‌ರನ್ನು ‘ಹಿರಿಯ ಸಿಎಂ’ ಎಂದು ಹೊಗಳಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇತ್ತೀಚೆಗೆ ಕಾಂಗ್ರೆಸ್‌ ಬಿಟ್ಟಗುಲಾಂ ನಬಿ ಆಜಾದ್‌ರನ್ನೂ ಹೀಗೇ ಮೋದಿ ಹೊಗಳಿದ್ದರು’ ಎಂದು ಗೆಹ್ಲೋಟ್‌ಗೆ ಪೈಲಟ್‌ ಟಾಂಗ್‌ ನೀಡಿದರು.

ಇಂಥ ಹೇಳಿಕೆ ಬೇಡ- ಗೆಹ್ಲೋಟ್‌:
‘ಅವರು (ಪೈಲಟ್‌) ಇಂಥ ಹೇಳಿಕೆಯನ್ನು ನೀಡಬಾರದು. ಹೇಳಿಕೆ ನೀಡದಂತೆ ಹೈಕಮಾಂಡ್‌ ಈಗಾಗಲೇ ಸೂಚನೆ ನೀಡಿದೆ. ಎಲ್ಲರೂ ಶಿಸ್ತು ಪಾಲಿಸಬೇಕು’ ಎಂದು ಗೆಹ್ಲೋಟ್‌ ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios