‘ರಾಜ್ಯದಲ್ಲಿ ನಾಯಕತ್ವ ಗೊಂದಲ ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ ಬೆನ್ನಲ್ಲೇ, ರಾಜ್ಯದ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅದಕ್ಕೆ ನಾವು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ
ಮೈಸೂರು : ‘ರಾಜ್ಯದಲ್ಲಿ ನಾಯಕತ್ವ ಗೊಂದಲ ಸೃಷ್ಟಿಸಿದ್ದು ಹೈಕಮಾಂಡ್ ಅಲ್ಲ. ಅದು ಸ್ಥಳೀಯವಾಗಿ ಸೃಷ್ಟಿಯಾಗಿರುವ ಸಮಸ್ಯೆ. ಅದನ್ನು ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ ಬೆನ್ನಲ್ಲೇ, ರಾಜ್ಯದ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ. ಅದಕ್ಕೆ ನಾವು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ತನ್ಮೂಲಕ ಈ ವಿಚಾರದಲ್ಲಿ ಹೈಕಮಾಂಡೇ ನಿರ್ಧಾರ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
‘ಒನ್ಸ್ ಫಾರ್ ಆಲ್ ಕ್ಲಿಯರ್ ಮಾಡುತ್ತಿದ್ದೇನೆ
ಖರ್ಗೆ ಅವರು ಭಾನುವಾರ ನೀಡಿದ ಹೇಳಿಕೆ ಕುರಿತು ಸುದ್ದಿಗಾರರು ಸೋಮವಾರ ಪ್ರಶ್ನೆ ಮಾಡಿದಾಗ ಉತ್ತರಿಸಿದ ಸಿದ್ದರಾಮಯ್ಯ, ‘ಒನ್ಸ್ ಫಾರ್ ಆಲ್ ಕ್ಲಿಯರ್ ಮಾಡುತ್ತಿದ್ದೇನೆ ಕೇಳಿ. ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಹೈಕಮಾಂಡ್ ನಾವೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಹೈಕಮಾಂಡ್ ತನ್ನ ತೀರ್ಮಾನ ಹೇಳುತ್ತದೆ’ ಎಂದು ತಿಳಿಸಿದರು.
ನಾಯಕತ್ವ ವಿಚಾರವಾಗಿ ಮಾಧ್ಯಮಗಳೇ ಅತೀ ಹೆಚ್ಚು ಚರ್ಚೆ ಮಾಡುತ್ತಿವೆ. ನಾನು ಅಧಿವೇಶನದಲ್ಲಿ ಮಾತನಾಡಿದ ಮೇಲೂ ಈ ವಿಚಾರದಲ್ಲಿ ಯಾಕೆ ಪ್ರಶ್ನೆ ಕೇಳುತ್ತಿದ್ದೀರಾ ಎಂದು ಅವರು ಪ್ರಶ್ನಿಸಿದರು. ಸಂಕ್ರಾಂತಿಯಲ್ಲಿ ಯಾವ ಕ್ರಾಂತಿಯೂ ಇಲ್ಲ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ, ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಎನ್ನುವುದನ್ನು ನಿಲ್ಲಿಸಿ ಎಂಬ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆ ನನ್ನ ಪೂರ್ಣ ಸಹಮತವಿದೆ. ಯಾರೂ ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ.
ನಾಯಕತ್ವ ರಾಹುಲ್ ತೀರ್ಮಾನಿಸಬೇಕು
ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ.
-ಸಿದ್ದರಾಮಯ್ಯ, ಮುಖ್ಯಮಂತ್ರಿ


