ರಾಹುಲ್ ಭೇಟಿಯಿಂದ ರಾಜ್ಯಕ್ಕೆ ಯಾವುದೇ ಪರಿಣಾಮ ಬೀರಿಲ್ಲ: ಸಿಎಂ ಬೊಮ್ಮಾಯಿ
ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಾಬುರಾವ್ ಚಿಂಚನಸೂರ ಕಾಂಗ್ರೆಸ್ಸಿನಿಂದ ಬಂದಿದ್ದರು, ಅಲ್ಲಿಗೆ ಮರಳಿ ಹೋಗುತ್ತಿದ್ದಾರೆ ಅಷ್ಟೇ ಎಂದು ಇದೇ ವೇಳೆ ಹೇಳಿದರು.
ಹುಬ್ಬಳ್ಳಿ (ಮಾ.22): ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಾಬುರಾವ್ ಚಿಂಚನಸೂರ ಕಾಂಗ್ರೆಸ್ಸಿನಿಂದ ಬಂದಿದ್ದರು, ಅಲ್ಲಿಗೆ ಮರಳಿ ಹೋಗುತ್ತಿದ್ದಾರೆ ಅಷ್ಟೇ ಎಂದು ಇದೇ ವೇಳೆ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ಯಾವುದೇ ಪರಿಣಾಮ ಉಂಟಾಗಲಿಲ್ಲ. ನಿನ್ನೆ ಅವರ ಬೋಗಸ್ ಘೋಷಣೆಗಳಿಂದ ಯಾವುದೇ ಪರಿಣಾಮವಾಗಲ್ಲ ಎಂದು ಲೇವಡಿ ಮಾಡಿದರು.
ಅವರು ಕಳೆದ ಬಾರಿ ಬಂದಿದ್ದಕ್ಕೂ ಈ ಬಾರಿ ಬಂದಿರುವುದಕ್ಕೂ ಬಹಳ ವ್ಯತ್ಯಾಸವಿದೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ಅವರು ಮಾತನಾಡಿರುವುದು ದೇಶ ವಿರೋಧಿಯಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಈ ಬಗ್ಗೆ ಖಂಡನೆಯಾಗಿದೆ. ಅವರ ಮಾತಿಗೆ ಇಲ್ಲಿ ಜನರು ಯಾವುದೇ ಬೆಲೆಯನ್ನು ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ಜನ ನಂಬಲ್ಲ: ಸಿಎಂ ಬೊಮ್ಮಾಯಿ
ಬೋಗಸ್ ಟ್ರ್ಯಾಕ್ ರೆಕಾರ್ಡ್: ಸಿದ್ದರಾಮಯ್ಯ ಅವರು ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿ ಆಶ್ವಾಸನೆಗಳನ್ನು ನೀಡಿದ್ದು, ಈವರೆಗೂ ಈಡೇರಿಸಿಲ್ಲ. ಇದು ಅವರ ಟ್ರ್ಯಾಕ್ ರೆಕಾರ್ಡ್. ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಘೋಷಣೆ ಮಾಡಿದ್ದನ್ನು ಅವರು ಈಡೇರಿಸಿಲ್ಲ. ನಾಲ್ಕು ವರ್ಷ ನೀಡದೇ ಕೊನೆ ವರ್ಷ ಕೊಡಲು ಓಡಾಡಿದರು. ಈ ರೀತಿ ಜನರನ್ನು ಯಾಮಾರಿಸುತ್ತಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಬರೀ ವಿಸಿಟಿಂಗ್ ಕಾರ್ಡ್ ಅಷ್ಟೇ ಎಂದು ವ್ಯಂಗ್ಯವಾಡಿದರು. ಬಾಬುರಾವ್ ಚಿಂಚನಸೂರ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಚಿಂಚನಸೂರ ಅವರು ಕಾಂಗ್ರೆಸ್ಸಿನಿಂದ ಬಂದಿದ್ದರು. ಮರಳಿ ಅಲ್ಲಿಗೇ ಹೋಗುತ್ತಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಅಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂದರು.
25ಕ್ಕೆ ಪ್ರಧಾನಿ ಭೇಟಿ: ಮಾ. 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾ. 24 ಮತ್ತು 26ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಹಾಗೂ ರೀಡೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭ್ರಷ್ಟಾಚಾರದ ಆರೋಪವಿದೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ಇದ್ದಲು ಮಸಿಗೆ ಬುದ್ಧಿ ಹೇಳಿದಂತೆ. ಕಾಂಗ್ರೆಸ್ ಅಧಃಪತನಕ್ಕೆ ಸಿದ್ಧವಾಗಿದೆ. ದೇಶದಲ್ಲಿ ಎಲ್ಲ ಕಡೆ ಪತನವಾಗಿದೆ ಎಂದರು.
ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ: ಮನದಾಸೆ ವ್ಯಕ್ತಪಡಿಸಿದ ಬೊಮ್ಮಾಯಿ
ನ್ಯಾಯಾಂಗ ತನಿಖೆ: ಸಿದ್ದರಾಮಯ್ಯ ಅವರ ಸರ್ಕಾರದ 59 ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆಯನ್ನು ನಡೆಸಲು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ತೀರ್ಮಾನವಾಗುತ್ತದೆ ಎಂದರು. ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆಯಾಗಿರುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಶೋಧನೆಯಾಗಿ ಸತ್ಯ ಹೊರಗೆ ಬಂದಾಗ ಜಯ ದೊರೆಯಲಿದೆ. ಹಲವಾರು ಐತಿಹಾಸಿಕ ಸತ್ಯ ಮರೆಮಾಚಲಾಗಿದೆ. ಇತಿಹಾಸವನ್ನು ಭಾರತ ಹಾಗೂ ಕರ್ನಾಟಕದಲ್ಲಿ ತಿರುಚುವ ಕೆಲಸವಾಗಿದೆ. ಆ ಸಂದರ್ಭದಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಜಗಜ್ಜಾಹೀರಾಗಿದೆ. ಸತ್ಯವನ್ನು ಹೇಳಿದರೆ ಇವರಿಗೆ ತಡೆಯಲು ಆಗುವುದಿಲ್ಲ ಎಂದರು. ಸಾರಿಗೆ ನೌಕರರ ಸಂಘದವರು ಪ್ರತಿಭಟನೆ ಹಿಂಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.