ಮಹಿಳೆಯರ ಸೀಟಿನಲ್ಲೇ ಕುಳಿತು ಪ್ರಯಾಣ ಮಾಡಿದ ಅವರು ಬೆಲೆ ಏರಿಕೆ ಸಮಸ್ಯೆ, ಅಡುಗೆ ಅನಿಲ ದರ, ಗೃಹ ಲಕ್ಷ್ಮೀ ಯೋಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ನಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ. ಈ ಯೋಜನೆ ಹೇಗಿದೆ? ಇನ್ನೂ ಏನಾದರೂ ಸಮಸ್ಯೆಗಳು ಇವೆಯೇ ಎಂದು ಮಹಿಳೆಯರನ್ನು ಪ್ರಶ್ನಿಸಿದ ರಾಹುಲ್‌ ಗಾಂಧಿ 

ಬೆಂಗಳೂರು(ಮೇ.09): ಚುನಾವಣಾ ಪ್ರಚಾರದ ನಡುವೆ ಕಾಂಗ್ರೆಸ್‌ ವರಿಷ್ಟರಾಹುಲ್‌ಗಾಂಧಿ ಅವರು ಸೋಮವಾರ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದು, ಪ್ರಯಣಿಕರ ಬಳಿ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದರು.

ಭಾನುವಾರ ಸಂಜೆ ಶಿವಾಜಿನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶ ಬಳಿಕ ಭಾನುವಾರ ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದ ಅವರು ಸೋಮವಾರ ಬೆಳಗ್ಗೆ ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿನ ಕೆಫೆಯಲ್ಲಿ ಗ್ರಾಹಕರ ಜತೆ ಕಾಫಿ ಕುಡಿಯುತ್ತಾ ಕೆಲ ಹೊತ್ತು ಚರ್ಚೆ ನಡೆಸಿದರು.

ರಾಹುಲ್‌, ಪ್ರಿಯಾಂಕಾ 41 ರ‍್ಯಾಲಿ, 12 ರೋಡ್‌ ಶೋ

ಬಳಿಕ ಕನ್ನಿಂಗ್‌ ಹ್ಯಾಂ ರಸ್ತೆಯಿಂದ ಲಿಂಗರಾಜಪುರವರೆಗೆ 5 ಕಿ.ಮೀ. ದೂರು ಬಿಎಂಟಿಸಿ ಬಸ್ಸಿನಲ್ಲಿಯೇ ಪ್ರಯಾಣ ಮಾಡಿದ ಅವರು, ಮಹಿಳೆಯರಿಗೆ ಕಾಂಗ್ರೆಸ್‌ ಘೋಷಿಸಿರುವ ಉಚಿತ ಪ್ರಯಾಣದ ಗ್ಯಾರಂಟಿ ಬಗ್ಗೆ ಅಭಿಪ್ರಾಯ ಕೇಳಿದರು.
ಮೊದಲಿಗೆ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಬಸ್ಸಿಗೆ ಕಾಯುತ್ತಿದ್ದ ಕಾಲೇಜು ಯುವತಿಯರ ಜತೆ ಮಾತಿಗಿಳಿದ ರಾಹುಲ್‌ ಗಾಂಧಿ, ಯಾವ ಕಾಲೇಜಿನಲ್ಲಿ ಓದುತ್ತೀರಿ ಏನು ಓದುತ್ತಿದ್ದೀರಿ. ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಗಳೇನು ಎಂದು ವಿಚಾರಿಸಿದರು. ನಾನೂ ನಿಮ್ಮೊಂದಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತೇನೆ ಎಂದು ರಾಹುಲ್‌ ಗಾಂಧಿ ಬಿಎಂಟಿಸಿ ಬಸ್ಸು ಹತ್ತಿ ಪ್ರಯಾಣ ಆರಂಭಿಸಿದರು.

ಮಹಿಳೆಯರ ಸೀಟಿನಲ್ಲೇ ಕುಳಿತು ಪ್ರಯಾಣ ಮಾಡಿದ ಅವರು ಬೆಲೆ ಏರಿಕೆ ಸಮಸ್ಯೆ, ಅಡುಗೆ ಅನಿಲ ದರ, ಗೃಹ ಲಕ್ಷ್ಮೀ ಯೋಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ನಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ. ಈ ಯೋಜನೆ ಹೇಗಿದೆ? ಇನ್ನೂ ಏನಾದರೂ ಸಮಸ್ಯೆಗಳು ಇವೆಯೇ ಎಂದು ಮಹಿಳೆಯರನ್ನು ಪ್ರಶ್ನಿಸಿದರು.

ಬಸ್ಸು ಪ್ರಯಾಣ ಉಚಿತ ಮಾಡುವ ಗ್ಯಾರಂಟಿಗೆ ಸಂತಸ ವ್ಯಕ್ತಪಡಿಸಿದ ಮಹಿಳೆಯರು, ನಾವು ಬಸ್ಸನ್ನೇ ನೆಚ್ಚಿಕೊಂಡು ಪ್ರಯಾಣ ಮಾಡಬೇಕು. ಆದರೆ ಬಸ್ಸಿನಲ್ಲಿನ ರಶ್‌ನಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು.
ಹಿರಿಯ ಮಹಿಳೆ ಬಂದಾಗ ಎದ್ದು ನಿಂತು ಸೀಟು ಬಿಟ್ಟುಕೊಟ್ಟ ಅವರು, ಮಹಿಳೆಯು ಕಣ್ಣೀರಾಕುತ್ತಾ ಹೇಳಿಕೊಂಡ ವೈಯಕ್ತಿಕ ಸಮಸ್ಯೆಗೆ ಕಿವಿಯಾದರು. ಇದೇ ವೇಳೆ ಎಲ್ಲಾ ಮಹಿಳಾ ಪ್ರಯಾಣಿಕರೂ ಮುಗಿಬಿದ್ದು ರಾಹುಲ್‌ ಗಾಂಧಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಪ್ರಯಾಣ ಮುಗಿದ ಬಳಿಕ ರಾಹುಲ್‌ ಗಾಂಧಿ ಬಸ್ಸು ಚಾಲಕನ ಕೈ ಕುಲುಕಿ ಧನ್ಯವಾದ ಹೇಳಿದರು.