ಮಾ. 31ಕ್ಕೆ ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ, ಬಳಿಕ ಹಿರಿಯ ನಾಯಕರೊಂದಿಗೆ ಸಭೆ
* ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ
* ಮಾ. 31ಕ್ಕೆ ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ
* ಬಳಿಕ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿರುವ ರಾಹುಲ್
ತುಮಕೂರು, (ಮಾ.29): ಪಂಚ ರಾಜ್ಯಗಳ ಚುನಾವಣೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್ ಇದೀಗ ಪಕ್ಷವನ್ನ ಸಂಘಟಿಸಲು ತೊಡೆ ತಟ್ಟಿ ನಿಂತಿದೆ. ಈ ನಿಟ್ಟಿನಲ್ಲಿ ಮಾರ್ಚ್ 31ರಂದು ರಾಹುಲ್ ಗಾಂಧಿ(Rahul Gandhi) ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ನಾಯಕರೊಂದೊಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ
ಮಾರ್ಚ್31 ನಡೆದಾಡುವ ದೇವರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸಹ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮಾಹಿತಿ ನೀಡಿದ್ದಾರೆ.
PM Modi visit ಸತತ ಎರಡನೇ ಬಾರಿ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ರದ್ದು!
ಅಂದು ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಸಿದ್ದಲಿಂಗೇಶ್ವರನಿಗೂ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅಲ್ಲಿಯೇ ಪ್ರಸಾದ ಸ್ವೀಕರಿಸಿ ಆನಂತರ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಇನ್ನು ಏಪ್ರಿಲ್ 1ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಿರಿಯ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ನಾಯಕರೂ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆ ಬಳಿಕ ಸದಸ್ಯತ್ವ ನೋಂದಣಿ ವಿಚಾರವಾಗಿ ಜೂಮ್ ಮೀಟಿಂಗ್ ನಡೆಯಲಿದ್ದು, ಸಮಯ ಇದ್ದರೆ ಹಿರಿಯ ನಾಯಕರ ಜತೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮೋದಿ ಕರ್ನಾಟಕ ಪ್ರವಾಸ ರದ್ದು
ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ರಾಜ್ಯ ಪ್ರವಾಸ ರದ್ದುಗೊಳಿಸಲಾಗಿದೆ. ಏಪ್ರಿಲ್ 5ರಂದು ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದ್ರೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ(Naftali Bennett) ಕೊರೊನಾ ಸೋಂಕು(Coronavirus) ಕಾಣಿಸಿಕೊಂಡಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ರದ್ದು ಮಾಡಲಾಗಿದೆ.
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಬೇಕಿತ್ತು. ಏಪ್ರಿಲ್ 5ರಂದು 3 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದ್ರೆ ಕೊರೊನಾದಿಂದಾಗಿ ರಾಜ್ಯ ಪ್ರವಾಸ ರದ್ದಾಗಿದೆ. ಏಪ್ರಿಲ್ 5ರಂದು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಲೋಕಾರ್ಪಣೆ, ಮೇಲ್ದರ್ಜೆಗೇರಿಸಿದ 150 ಐಟಿಐ ಉದ್ಘಾಟನೆ ಕಾರ್ಯಕ್ರಮ, ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ಸೇರಿ ಮೂರು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿತ್ತು.
ಸದ್ಯ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೊರೊನಾ ತಗುಲಿರುವ ಬಗ್ಗೆ ಇಸ್ರೇಲ್ ಪ್ರಧಾನಿ ಕಚೇರಿಯಿಂದ ಸೋಮವಾರ ಮಾಹಿತಿ ಹೊರಬಿದ್ದಿದೆ. ಬೆನೆಟ್ ಆರೋಗ್ಯವಾಗಿದ್ದಾರೆ ಮತ್ತು ಮನೆಯಲ್ಲಿ ಸೆಲ್ಫ್ ಐಸೋಲೇಟ್ ಆಗಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.